ಹೊಸಪೇಟೆ (ವಿಜಯನಗರ): ‘ವಿಧಾನಸಭೆ ಚುನಾವಣೆ ಮುಗಿದ ನಂತರ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಗೆ ಸೇರಿದ ಜಮೀನಿನಲ್ಲಿ ವಾಸಿಸುತ್ತಿರುವವರಿಗೆ ಪಟ್ಟಾ ವಿತರಿಸಲಾಗುವುದು’ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭರವಸೆ ನೀಡಿದರು.
ನಗರದ ಟಿ.ಬಿ. ಡ್ಯಾಂ ಮೈದಾನದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ತುಂಗಭದ್ರಾ ಜಲಾಶಯ ಕಟ್ಟುವಾಗ ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಿಂದ ಜನ ಇಲ್ಲಿಗೆ ಬಂದು ನೆಲೆಸಿದ್ದರು. ಸುಮಾರು 70 ವರ್ಷಗಳಿಂದ ಇಲ್ಲಿದ್ದಾರೆ. ಈ ವಿಚಾರವನ್ನು ಸಚಿವ ಆನಂದ್ ಸಿಂಗ್ ಅವರು ನನ್ನ ಗಮನಕ್ಕೆ ತಂದ ನಂತರ ನವದೆಹಲಿಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ, ಅಗತ್ಯ ಕ್ರಮ ಕೈಗೊಂಡಿದ್ದೇನೆ. ಶೇ 99ರಷ್ಟು ಕೆಲಸ ಪೂರ್ಣಗೊಂಡಿದೆ. ಚುನಾವಣೆ ಮುಗಿದ ನಂತರ ಎಲ್ಲರಿಗೂ ಹಕ್ಕು ಪತ್ರ ವಿತರಿಸಲಾಗುವುದು' ಎಂದು ತಿಳಿಸಿದರು.
'ಕಾಂಗ್ರೆಸ್‌ನವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅವರ ಮಾತುಗಳಿಗೆ ಯಾರು ಕಿವಿಗೊಡಬಾರದು. ಬಜರಂಗ ಬಲಿ ಬಾಲಕ್ಕೆ ಬೆಂಕಿ ಹಚ್ಚಿದಾಗ ಇಡೀ ಲಂಕೆ ದಹನವಾಗಿತ್ತು. ಅದೇ ರೀತಿ ಕಾಂಗ್ರೆಸ್ ಸುಟ್ಟು ನಾಶವಾಗಲಿದೆ' ಎಂದು ಆಂಜನೇಯನ ಪವಿತ್ರ ನೆಲದಲ್ಲಿ ನಿಂತು ಹೇಳುತ್ತಿರುವೆ ಎಂದರು.
'ಕಾಂಗ್ರೆಸ್ ಪಕ್ಷ ಶೋಷಿತರನ್ನು ಮತ ಬ್ಯಾಂಕ್‌ಗಳಾಗಿ ಬಳಸಿಕೊಳ್ಳುತ್ತಿದೆ. ಅವರ ಕಲ್ಯಾಣಕ್ಕೆ ಏನೂ ಮಾಡಿಲ್ಲ. ಆದರೆ, ಮೋದಿಯವರು ಪ್ರಧಾನಿಯಾದ ನಂತರ ಬಡವರ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ರಾಜ್ಯಕ್ಕೆ ಡಬಲ್ ಎಂಜಿನ್ ಸರ್ಕಾರದ ಬಹಳ ಅಗತ್ಯವಿದೆ. ಅದಕ್ಕಾಗಿ ಜನ ಬಿಜೆಪಿಯನ್ನು ಬೆಂಬಲಿಸಬೇಕೆಂದು' ಕೋರಿದರು.
ಸಚಿವ ಆನಂದ್ ಸಿಂಗ್ ಮಾತನಾಡಿ, 'ಪಟ್ಟಾ ಕೊಡಬೇಕೆಂದು ನನಗೆ 2008ರಲ್ಲಿಯೇ ತುಂಗಭದ್ರಾ ಮಂಡಳಿಯ ಜಮೀನಿನಲ್ಲಿ ವಾಸಿಸುತ್ತಿರುವವರು ಮನವಿ ಸಲ್ಲಿಸಿದ್ದರು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಚುನಾವಣೆ ನಂತರ ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿ ಆದೇಶ ಹೊರಬೀಳಲಿದೆ' ಎಂದರು.
ಪಕ್ಷದ ಅಭ್ಯರ್ಥಿ ಸಿದ್ದಾರ್ಥ ಸಿಂಗ್, ತೆಲಂಗಾಣ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಾಧವಿ ಕೊಲ್ಲಿ, ಹುಡಾ ಅಧ್ಯಕ್ಷ ಅಶೋಕ ಜೀರೆ, ಮಂಡಲ ಅಧ್ಯಕ್ಷ ಕಾಸೆಟ್ಟಿ ಉಮಾಪತಿ, ನಗರಸಭೆ ಸದಸ್ಯರಾದ ಸರವಣನ್, ಹನುಮಂತ, ಗೋಪಾಲಕೃಷ್ಣ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.