ಚಾಮರಾಜನಗರ: ‘ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸದಿದ್ದರೆ, ಚಾಮರಾಜನಗರದೊಂದಿಗಿನ ನನ್ನ ಬಾಂಧವ್ಯ ಕೊನೆಯಾಗಲಿದೆ. ಮತ್ತೆಂದೂ ಚಾಮರಾಜನಗರಕ್ಕೆ ಕಾಲಿಡುವುದಿಲ್ಲ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಸೋಮವಾರ ಹೇಳಿದರು.
ನಗರದಲ್ಲಿ ಮಗಳು ಅನುಪಮ ಅವರೊಂದಿಗೆ ರೋಡ್ ಶೋ ನಡೆಸಿದ ಅವರು ‘ನಗರಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಮೂರು ಬಾರಿ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹಾಗಿದ್ದರೂ, ಜನರು ಮೂರು ಬಾರಿ ನನ್ನನ್ನು ಸೋಲಿಸಿದರು. ಕ್ಷೇತ್ರಕ್ಕೆ ಏನೂ ಲಾಭವಾಯಿತು’ ಎಂದು ಪ್ರಶ್ನಿಸಿದರು.
‘ಈ ಬಾರಿ ನಾನು ಗೆಲ್ಲಲ್ಲೇಬೇಕು. ಕಾಂಗ್ರೆಸ್‌ನ ಪುಟ್ಟರಂಗಶೆಟ್ಟಿ, ಬಿಜೆಪಿಯ ಅಭ್ಯರ್ಥಿ ವಿ.ಸೋಮಣ್ಣ ಸೋಲಲೇಬೇಕು. ಅವರು ಸೋತರೇ ರಾಜ್ಯಕ್ಕೆ ಏನು ನಷ್ಟ ಇಲ್ಲ. ವಾಟಾಳ್ ನಾಗರಾಜ್ ಸೋತರೇ ರಾಜ್ಯಕ್ಕೆ, ಕನ್ನಡಿಗರಿಗೆ ಅನ್ಯಾಯವಾಗುತ್ತದೆ. ನನಗೂ ಚಾಮರಾಜನಗರಕ್ಕೂ 50 ವರ್ಷದ ಬಾಂಧವ್ಯವಿದೆ. ಜನರಲ್ಲಿ ಕಳಕಳಿಯಿಂದ ಮನವಿ ಮಾಡುತ್ತೇನೆ. ನನ್ನನ್ನು ಗೆಲ್ಲಿಸಿದ್ದರೆ ನನ್ನ ಚಾಮರಾಜನಗರ ಸಂಬಂಧ ಉಳಿಯುತ್ತದೆ. ಇಲ್ಲದಿದ್ದರೆ ಮೇ 13ಕ್ಕೆ ಅಂತ್ಯವಾಗುತ್ತದೆ. ಚಾಮರಾಜನಗರಕ್ಕೆ ದೇವರಾಣೆ ಎಂದೂ ಬರುವುದಿಲ್ಲ’ ಎಂದರು.
ಚಾ.ರಂ.ಶ್ರೀನಿವಾಸಗೌಡ, ವರದನಾಯಕ, ಪಣ್ಯದಹುಂಡಿರಾಜು, ಪಾರ್ಥಸಾರಥಿ, ಶಿವಲಿಂಗಮೂರ್ತಿ, ಕುಮಾರ್ ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.