ADVERTISEMENT

ಕಾಂಗ್ರೆಸ್‌ನಿಂದ ದೋಖಾ, ಬಿಜೆಪಿಯಿಂದ ಕೆಲಸ: ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2023, 10:58 IST
Last Updated 30 ಏಪ್ರಿಲ್ 2023, 10:58 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಕೋಲಾರ: ‘ಕಾಂಗ್ರೆಸ್‌ ಪಕ್ಷ ಚುನಾವಣೆ ಹಿನ್ನೆಲೆಯಲ್ಲಿ ಸುಳ್ಳು ಗ್ಯಾರಂಟಿ ಕಾರ್ಡ್‌ನ ಬಂಡಲ್‌ ನೀಡಲು ಪ್ರಾರಂಭಿಸಿದೆ. ಕಾಂಗ್ರೆಸ್‌ ನೀಡಿದ ಗ್ಯಾರಂಟಿ, ಭರವಸೆ ಯಾವತ್ತೂ ಪೂರ್ಣವಾಗಿಲ್ಲ. ಅವರು ನೀಡಿದ್ದ ಭರವಸೆಗಳು ಬಿಜೆಪಿ ಸರ್ಕಾರ ಬಂದ ಮೇಲೆ ಈಡೇರಿವೆ. ಕಾಂಗ್ರೆಸ್‌ನದ್ದು ದೋಖಾ (ಮೋಸ), ಬಿಜೆಪಿಯಿಂದ ಭರವಸೆ ಪೂರ್ಣ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ರಾಷ್ಟ್ರೀಯ ಹೆದ್ದಾರಿ–75ರ ಕೆಂದಟ್ಟಿ ಗೇಟ್‌ ಬಳಿ ಭಾನುವಾರ ಬಿಜೆಪಿ ಆಯೋಜಿಸಿದ್ದ ವಿಧಾನಸಭೆ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.

‘2009ರೊಳಗೆ ದೇಶದ ಪ್ರತಿ ಮನೆಗೆ ವಿದ್ಯುತ್‌ ಕಲ್ಪಿಸುವ ಭರವಸೆಯನ್ನು ಕಾಂಗ್ರೆಸ್‌ ನೀಡಿತ್ತು. ಆದರೆ, 2009ರ ಚುನಾವಣೆ ಮುಗಿದು 2014ರವರೆಗೆ ಅವರದ್ದೇ ಸರ್ಕಾರವಿದ್ದರೂ ಆ ಕಡೆ ಗಮನ ಹರಿಸಲಿಲ್ಲ. ಮನೆಮನೆಗೆ ಹೋಗಲಿ, ಹಳ್ಳಿಗೂ ವಿದ್ಯುತ್‌ ಕಲ್ಪಿಸಲಿಲ್ಲ. ಸುಮಾರು 18 ಸಾವಿರ ಹಳ್ಳಿಗಳಲ್ಲಿ ವಿದ್ಯುತ್‌ ಸಂಪರ್ಕ ಇರಲಿಲ್ಲ. ಆದರೆ, ನಮ್ಮ ಸರ್ಕಾರ ಬಂದ ಸಾವಿರ ದಿನಗಳಲ್ಲಿ ಆ 18 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ಕಲ್ಪಿಸಿದೆವು. ಅವರ ಗ್ಯಾರಂಟಿ ಬಗ್ಗೆ ಅವರಿಗೇ ನಂಬಿಕೆ, ವಿಶ್ವಾಸ ಇಲ್ಲ. ಮೋಸ ಮಾಡುವುದಷ್ಟೇ ಅವರ ಕೆಲಸ’ ಎಂದು ಟೀಕಾ ಪ್ರಹಾರ ನಡೆಸಿದರು.

ADVERTISEMENT

‘ಕಾಂಗ್ರೆಸ್‌ನವರು 2004ರ ಘೋಷಣಾ ಪತ್ರದಲ್ಲಿ ದೇಶದ ರೈತರಿಗೆ ನೇರ ವರಮಾನ ಸಹಾಯಕ ಯೋಜನೆ ಜಾರಿ ಮಾಡುವುದಾಗಿ ಆಶ್ವಾಸನೆ ನೀಡಿದರು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಕೈಎತ್ತಿದರು. 2009ರಲ್ಲೂ ಅದನ್ನೇ ಹೇಳಿ ಮತ್ತೆ ಕೈಎತ್ತಿದರು. 2014ರಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಕಿಸಾನ್‌ ಸಮ್ಮಾನ್‌ ಯೋಜನೆ ಜಾರಿ ಮಾಡಿತು. ನೇರವಾಗಿ ರೈತರ ಖಾತೆಗೆ ₹ 6 ಸಾವಿರ ಜಮೆಯಾಗುತ್ತಿದೆ. 2004, 2009ರಲ್ಲಿ ಗ್ಯಾರಂಟಿ ಕೊಟ್ಟಿದ್ದು ಕಾಂಗ್ರೆಸ್‌, ಇದನ್ನು ಜಾರಿ ಮಾಡಿದ್ದು ಬಿಜೆಪಿ. ಜನರಿಗೆ ಮೋಸ ‌ಮಾಡಿದ್ದು ಕಾಂಗ್ರೆಸ್‌, ಭರವಸೆ ಸಾಕಾರಗೊಳಿಸಿದ್ದು ಬಿಜೆಪಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.