ಬೆಂಗಳೂರು: ಕಾಂಗ್ರೆಸ್ ಇನ್ನೂ ಅಭ್ಯರ್ಥಿ ಘೋಷಿಸದ ಕ್ಷೇತ್ರಗಳ ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ಪಕ್ಷದ ನಾಯಕರ ಮೂಲಕ ಒತ್ತಡ ತಂತ್ರ ಮುಂದುವರಿಸಿದ್ದು, ತೇರದಾಳ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿರುವ ಮಾಜಿ ಶಾಸಕಿ ಹಾಗೂ ನಟಿ ಉಮಾಶ್ರೀ ಗುರುವಾರ ಮತ್ತೊಮ್ಮೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ತೇರದಾಳ ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಸಿದ್ದು ಕೊಣ್ಣೂರು ಅವರಿಗೆ ಇಲ್ಲಿ ಟಿಕೆಟ್ ಸಿಗುವ ಸಾಧ್ಯತೆಯಿದೆ.
ಮೊದಲ ಅಥವಾ ಎರಡನೇ ಪಟ್ಟಿಯಲ್ಲಿ ತಮಗೆ ಟಿಕೆಟ್ ಘೋಷಣೆ ಆಗಬಹುದೆಂದು ಉಮಾಶ್ರೀ ಭಾವಿಸಿದ್ದರು. ಆದರೆ, ಹೆಸರು ಘೋಷಣೆಯಾಗದ ಕಾರಣ ಆತಂಕಗೊಂಡಿರುವ ಅವರು, ಮುಂದಿನ ಪಟ್ಟಿಯಲ್ಲಾದರೂ ತಮ್ಮ ಹೆಸರು ಘೋಷಿಸುವಂತೆ ಸಿದ್ದರಾಮಯ್ಯ ಬಳಿ ಮನವಿ ಮಾಡಿದರು. ತೇರದಾಳ ಕ್ಷೇತ್ರದಿಂದ ಉಮಾಶ್ರೀ ಮೂರು ಬಾರಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ
ದ್ದಾರೆ. 2013ರಲ್ಲಿ ಬಿಜೆಪಿಯ ಸಿದ್ದು ಸವದಿ ವಿರುದ್ಧ ಗೆದ್ದಿದ್ದರು. 2008 ಮತ್ತು 2018ರಲ್ಲಿ ಸೋತಿದ್ದರು.
ಕುಂದಗೋಳ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈ ತಪ್ಪಿದ ಯಡಿಯೂರಪ್ಪ ಸಂಬಂಧಿ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ಅವರು ಕಾಂಗ್ರೆಸ್ ಕದ ತಟ್ಟಿದ್ದಾರೆ. ಅವರೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಚಿಕ್ಕನಗೌಡರ, ‘ನನ್ನ ಬೆಂಬಲಿಗರು ಸುಮ್ಮನೆ ಇರಬೇಡಿ ಎನ್ನುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಅವರಿಗೆ ಕುಂದಗೋಳ ಕ್ಷೇತ್ರದ ಬಗ್ಗೆ ವಿವರಿಸಿದ್ದೇನೆ. ಕಾಂಗ್ರೆಸ್ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ. ಕ್ಷೇತ್ರದ ಜನತೆ ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ’ ಎಂದರು.
ಹರಿಹರ ಶಾಸಕ ರಾಮಪ್ಪ ಅವರು ತಮಗೇ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ‘ಮೂರನೇ ಪಟ್ಟಿಯಲ್ಲಿ ನನಗೆ ಟಿಕೆಟ್ ಘೋಷಣೆ ಆಗುತ್ತದೆ. ಮೊದಲ ಅಥವಾ ಎರಡನೇ ಪಟ್ಟಿಯಲ್ಲಿ ಘೋಷಣೆ ಆಗಬೇಕಿತ್ತು. ಆದರೆ, ಕೆಲವು ಕಾರಣಗಳಿಂದ ಟಿಕೆಟ್ ಘೋಷಣೆ ಆಗಿಲ್ಲ. ಟಿಕೆಟ್ ಘೋಷಿಸಿದ ಬಳಿಕ ಬಿ ಫಾರಂ ಕೊಡುತ್ತಾರೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಎಲ್ಲ ನಾಯಕರು ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಈಗಾಗಲೇ ಹೇಳಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.