ಕಲಬುರಗಿ: ‘ಮಲ್ಲಿಕಾರ್ಜುನ ಖರ್ಗೆ ಅವರು ಸಾಯಿಸುವಂತಹ ತಪ್ಪು ಏನು ಮಾಡಿದ್ದಾರೆ?’ ಎಂದು ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅವರನ್ನು ಪ್ರಶ್ನಿಸಿದರು.
‘ಖರ್ಗೆ ಹೆಂಡರು, ಮಕ್ಕಳನ್ನು ಸಾಫ್(ಮುಗಿಸುತ್ತೇನೆ) ಮಾಡುತ್ತೇನೆ’ ಎಂದು ಮಣಿಕಂಠ ಅವರು ಹೇಳಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಚಿತ್ತಾಪುರ ತಾಲ್ಲೂಕಿನ ಕಲಗುರ್ತಿ ಗ್ರಾಮದಲ್ಲಿ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಿಯಾಂಕ್ ಅವರು, ‘ನಮ್ಮ ತಾಯಿ, ಹೆಂಡತಿ, ಮಕ್ಕಳು ಏನು ತಪ್ಪು ಮಾಡಿದ್ದಾರೆ? 50 ವರ್ಷ ರಾಜಕೀಯ ಜೀವನದಲ್ಲಿ ಖರ್ಗೆ ಅವರು ಯಾವಾಗಲು ದುಡಿದದ್ದು ಕಲಬುರಗಿಯ ಜನರಿಗಾಗಿ. ಅಂತಹವರನ್ನು ಸಾಯಿಸುವ ಹೇಳಿಕೆ ಕೊಡುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ಇವರ ವಿರುದ್ಧ ಮಾತನಾಡುವವರನ್ನು ಸಾಫ್ ಮಾಡುತ್ತಾನಾ? ಚಿತ್ತಾಪುರದ ಮೊಮ್ಮಗ ಇನ್ನು ಜೀವಂತ ಇದ್ದಾನೆ. ಇಂತಹವರ ದಾದಾಗಿರಿ ಇಲ್ಲಿ ನಡೆಯುವುದಿಲ್ಲ. ‘ನಾವು ದಾದಾಗಿರಿಗೆ ಇಳಿದರೆ ಕಾಂಗ್ರೆಸಿಗರು ಮನೆಯಿಂದ ಹೊರ ಬರುವುದಿಲ್ಲ’ ಎಂದು ಮರಗೋಳದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಪಾರಪಟ್ಟಿ ಹುಡುಗ ಮರೆತು ಹೋಗಿದ್ದಾನೆ. ಇಂತಹವ (ಮಣಿಕಂಠ ರಾಠೋಡ) ನೂರು ಜನರನ್ನು ನಾನು ನೋಡಿದ್ದೇನೆ. ಇವರ ಅಪ್ಪಗಳು ಕೆಲವು ಶ್ರೀ ಶ್ರೀಗಳು ಇದ್ದಾರೆ. ನಾನು ಜಿಲ್ಲಾ ಉಸ್ತುವಾರಿ ಮಂತ್ರಿ ಇದ್ದಾಗ ಯಾದಗಿರಿ ಮತ್ತು ಕಲಬುರಗಿಯಿಂದ ಒದ್ದು ಹೊರಗೆ ಹಾಕಿದ್ದೆ’ ಎಂದರು.
‘ಚಿತ್ತಾಪುರದ ಮೊಮ್ಮಗ ಬದುಕಿರುವ ತನಕ ಇಂತಹ ಮಣಿಕಂಠ ರಾಠೋಡ ಬಂದರೂ ಚಿತ್ತಾಪುರವನ್ನು ಅಲ್ಲುಗಾಡಿಸಲು ಆಗುವುದಿಲ್ಲ. ಇವನ ಯೋಗ್ಯತೆಗೆ ಸದ್ಯ ಇವನ ಮನೆಯನ್ನೇ ನೋಡಿಕೊಳ್ಳಲಿ. ಇವನು ಸಾಕುತ್ತಿರುವುದು ಬಡವರು ಅಕ್ಕಿ ಲೂಟಿ ಮಾಡಿ. ಇವನು ನಮಗೆ ಪಾಠ ಹೇಳುತ್ತಾನಾ? ಇದು ನಮ್ಮ ಚುನಾವಣೆಯಲ್ಲ. ಯುವತಿಯರ ಸಂರಕ್ಷಣೆ, ಯುವಕರ ಭವಿಷ್ಯದ ಚುನಾವಣೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.