ADVERTISEMENT

ಯೋಗಿ ಆದಿತ್ಯನಾಥ ರೋಡ್ ಶೋ ಮೂರು ತಾಸು ವಿಳಂಬ

​ಪ್ರಜಾವಾಣಿ ವಾರ್ತೆ
Published 6 ಮೇ 2023, 10:12 IST
Last Updated 6 ಮೇ 2023, 10:12 IST
ಪುತ್ತೂರಿನಲ್ಲಿ ನಡೆದ ಯೋಗಿ ಆದಿತ್ಯನಾಥ ರೋಡ್ ಶೋ
ಪುತ್ತೂರಿನಲ್ಲಿ ನಡೆದ ಯೋಗಿ ಆದಿತ್ಯನಾಥ ರೋಡ್ ಶೋ   

ಪುತ್ತೂರು: ಬಿಜೆಪಿ ಅಭ್ಯರ್ಥಿಗಳ ಚುನಾವಣಾ ಪ್ರಚಾರಾರ್ಥ ಇಲ್ಲಿ ಶನಿವಾರ ಏರ್ಪಡಿಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ರೋಡ್ ಶೋ ಮೂರು ಗಂಟೆ ತಡವಾಗಿ ಆರಂಭವಾಯಿತು.

ಯೋಗಿ ಆದಿತ್ಯನಾಥ ಅವರು ಪುತ್ತೂರಿನಲ್ಲಿ ಶನಿವಾರ ರೋಡ್ ಶೊ ನಡೆಸಿದರು. ಬೆಳಿಗ್ಗೆ 11 ಗಂಟೆಗೆ ರೋಡ್ ಶೋ ನಿಗದಿಯಾಗಿತ್ತು. ಯೋಗಿ ಆದಿತ್ಯನಾಥ ಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಪುತ್ತೂರು ತಲುಪುವಾಗ 3 ಗಂಟೆ ವಿಳಂಬವಾಯಿತು.

ಬೆಳಿಗ್ಗೆ 10 ಗಂಟೆಯಿಂದಲೇ ಪಕ್ಷದ ಕಾರ್ಯಕರ್ತರು ಹಾಗೂ ಯೋಗಿ ಅವರ ಅಭಿಮಾನಿಗಳು ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೇರಿದ್ದರು. ತಮ್ಮ ನೆಚ್ಚಿನ ನಾಯಕನಾಗಿ ಬಿರು ಬಿಸಿಲಿನಲ್ಲಿ ಗಂಟೆಗಟ್ಟಲೆ‌ ಕಾದು ಬಸವಳಿದರು. ಕೆಲವರು ಮಧ್ಯಾಹ್ನ 1 ಗಂಟೆ ವರೆಗೆ ಕಾದರೂ ಯೋಗಿಯವರು ಬಾರದ ಕಾರಣ ನಿರ್ಗಮಿಸಿದರು.

ADVERTISEMENT

ಮೊದಲು ನಿಗದಿಯಾದ ಪ್ರಕಾರ ರೋಡ್‌ ಶೋ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ‌ ಮೈದಾನದಿಂದ ಆರಂಭವಾಗಿ ಅಂಚೆಕಚೇರಿ, ಕೋರ್ಟ್ ರಸ್ತೆ ಮೂಲಕ ಸಾಗಿ ಕಿಲ್ಲೆ ಮೈದಾನವನ್ನು ತಲುಪಬೇಕಿತ್ತು. ಕಾರ್ಯಕ್ರಮ ತಡವಾಗಿದ್ದರಿಂದ ದೇವಸ್ಥಾನದ ಎದುರಿನ ಮೈದಾನದಿಂದ ನೇರವಾಗಿ ಕಿಲ್ಲೆ ಮೈದಾನದಿಂದ ನೇರವಾಗಿ ಕಿಲ್ಲೆ ಮೈದಾನವನ್ನು ತಲುಪಿತು. ಕೇವಲ 500 ಮೀ ದೂರದವರೆಗೆ ಮಾತ್ರ ರೋಡ್ ಶೋ ನಡೆಯಿತು.

ಪುತ್ತೂರಿಗೆ ಬಂದ ಯೋಗಿ ಆದಿತ್ಯನಾಥ ಅವರು ಮೊದಲು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪುತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಹಾಗೂ ಇತರರು ಜೊತೆಯಲ್ಲಿದ್ದರು

ರೋಡ್ ಶೋ ವೀಕ್ಷಿಸಲು ಸುಳ್ಯ, ಬೆಳ್ತಂಗಡಿಯಿಂದ ಬಂದ ಅಭಿಮಾನಿಗಳು

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳತ್ತ ಯೋಗಿಯವರು ವಿಶೇಷ ವಾಹನದಲ್ಲಿ ಕೈಬೀಸುತ್ತಾ ಸಾಗಿದರು.

ಪುಟಾಣಿಗಳಿಂದ ಹಿಡಿದು ವೃದ್ಧರವರೆಗೂ ಬಿಜೆಪಿ ಎಂದು ಬರೆದಿದ್ದ ಶಾಲು ಧರಿಸಿ ಸುಡುವ ಬಿಸಿಲಿನಿಂದ ಕಾದು ಬಿಸಿಯೇರಿದ್ದ ರಸ್ತೆಯಲ್ಲಿ ಉತ್ಸಾಹದಿಂದ ಹೆಜ್ಜೆಹಾಕಿದರು. ಕೆಲವರು ಕಟ್ಟಡದ ಮೇಲೇರಿ ಯೋಗಿ ಅವರತ್ತ ಹೂಮಳೆಗರೆದರು.

ನಾಸಿಕ್ ಬ್ಯಾಂಡ್, ಗಾರುಡಿ ಗೊಂಬೆಗಳು, ಕೀಲುಕುದುರೆ, ಮಂಗಳ ವಾದ್ಯ, ರೋಡ್ ಶೋನ ವಿಶೇಷ ಆಕರ್ಷಣೆಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.