ಕಡೂರು: ‘ಕಾಂಗ್ರೆಸ್ ಪಕ್ಷವು ಟಿಕೆಟ್ ನಿರಾಕರಿಸಿ ನನ್ನ ಸ್ವಾಭಿಮಾನಕ್ಕೆ ಪೆಟ್ಟು ನೀಡಿದೆ, ಈ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಕಡೂರು ಕ್ಷೇತ್ರದ ಸ್ವಾಭಿಮಾನವನ್ನು ಇಡೀ ರಾಜ್ಯಕ್ಕೆ ತೋರಿಸುವ ಛಲ ತೊಟ್ಟಿದ್ದೇನೆ’ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಪ್ರಕಟಿಸಿದರು.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶ
ದಲ್ಲಿ ಮಾತನಾಡಿದ ಅವರು, ‘ಈಬಾರಿ ಕ್ಷೇತ್ರದಲ್ಲಿ ವಿಶೇಷ ಪರಿಸ್ಥಿತಿ ತಲೆದೋರಿದೆ. ಐತಿಹಾಸಿಕ ಬದಲಾ
ವಣೆಗೆ ಕ್ಷೇತ್ರ ಸನ್ನದ್ಧವಾಗಿದೆ. ಅದಕ್ಕೆ ಪೂರಕವಾಗಿ ನಾನು 50 ವರ್ಷಗಳ ಜೆಡಿಎಸ್ ನಂಟು ಬಿಟ್ಟು ಕಾಂಗ್ರೆಸ್ ಸೇರಿದೆ. ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವನ್ನು ಪಕ್ಷ ಹುಸಿ ಮಾಡಿದೆ. ಅಭಿಮಾನಿಗಳು ಅದನ್ನು ಸ್ವಾಭಿಮಾನಕ್ಕೆ ಬಿದ್ದ ಪೆಟ್ಟು ಎಂದೇ ಭಾವಿಸಿದ್ದಾರೆ. ಹೀಗಾಗಿ, ಪಕ್ಷೇತರವಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದೇನೆ’ ಎಂದರು.
‘ಜನರ ಬಳಿ ತೆರಳಿ ಧನಸಹಾಯ ಜೊತೆಗೆ ಮತ ಭಿಕ್ಷೆ ಬೇಡುತ್ತೇನೆ. ಸ್ವಾಭಿಮಾನ ಎಂದರೆ ಏನು ಎಂಬುದನ್ನು ಅಭಿಮಾನಿಗಳು ತೋರಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ಇತ್ಯಾದಿ ಕುರಿತು ಅಭಿಮಾನಿಗಳೊಂದಿಗೆ ಇದೇ 13ರಂದು ಚರ್ಚಿಸಿ ನಿರ್ಧರಿಸುತ್ತೇನೆ’ ಎಂದರು.
‘ಈಗ ಅಭ್ಯರ್ಥಿ ಆಯ್ಕೆಗೆ ಮಾನದಂಡ ಶುರುವಾಗುವುದೇ ಮೊದಲು ಜಾತಿ, ನಂತರ ಹಣಬಲದಿಂದ. ಆದರೆ, ನನಗೆ ಜಾತಿ, ಹಣ ಬಲ ಎರಡೂ ಇಲ್ಲ. ಇರುವುದು ಜನರ ಪ್ರೀತಿ ಮಾತ್ರ. ನನಗೆ ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ ಎಂದು ತಿಳಿದು ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದು ಪ್ರಸ್ತುತ ರಾಜಕಾರಣದ ರೀತಿ’ ಎಂದು ಬೇಸರ ವ್ಯಕ್ತಪಡಿಸಿದರು.
ಸುಳ್ಳು ಸುದ್ದಿ ಹಬ್ಬಿಸಿದ್ದರು: ‘ಕಳೆದ ಬಾರಿ ಚುನಾವಣೆಯಲ್ಲಿ ನಾನು ಮತ ಚಲಾಯಿಸಿ ಹೊರಬಂದಾಗ, ನನ್ನ ಪತ್ನಿ ನಿಧನರಾಗಿದ್ದಾರೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದರು. ನನ್ನನ್ನು ಸಾಕಿ ಬೆಳೆಸಿದ್ದ ಸಹೋದರಿ ನಾನು ಕ್ಷೇತ್ರದಲ್ಲಿ ಪಾದಯಾತ್ರೆ ಮಾಡುವ ಸಮಯದಲ್ಲಿ ನಿಧನರಾದರು. ಕುಟುಂಬದವರ ಯೋಗಕ್ಷೇಮ ವಿಚಾರಿಸಲೂ ಸಮಯವಾಗುತ್ತಿರಲ್ಲಿಲ್ಲ. ಅಷ್ಟರಮಟ್ಟಿಗೆ ಕೇತ್ರದಲ್ಲಿ ತೊಡಗಿಸಿಕೊಂಡಿದ್ದೆ. ಅಭಿಮಾನಿಗಳೇ ನನ್ನ ಕುಟುಂಬ’ ಎಂದು ದತ್ತ ಭಾವುಕರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.