ಮಂಡ್ಯ: ‘ವರಿಷ್ಠರ ಸೂಚನೆಯಂತೆ ಸ್ಟಾರ್ ಪ್ರಚಾರಕಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ. ಮೈಸೂರು, ವರುಣ, ನಂಜನಗೂಡು, ಹುಬ್ಬಳ್ಳಿ, ವಿಯಪುರ, ಬೆಂಗಳೂರಿನಲ್ಲಿ ಪ್ರಚಾರ ಮಾಡುತ್ತೇನೆ’ ಎಂದು ನಟಿ, ಮಾಜಿ ಸಂಸದೆ ರಮ್ಯಾ ತಿಳಿಸಿದರು.
ಮಂಗಳವಾರ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
‘224 ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೋಗಲು ಸಾಧ್ಯವಿಲ್ಲ. ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ಸಕ್ರಿಯ ರಾಜಕಾರಣದಲ್ಲಿ ಇರುವ ಬಗ್ಗೆ ವರಷ್ಠರು ನಿರ್ಧಾರ ಕೈಗೊಳ್ಳಬೇಕು. ಅವರ ಸಲಹೆ, ಸೂಚನೆಯಂತೆ ನಡೆದುಕೊಳ್ಳುತ್ತೇನೆ. 2017ರಲ್ಲಿ ನಾನು ದೆಹಲಿಗೆ ಹೋದೆ, ನಂತರ ಕೆಲಕಾಲ ನನಗೆ ಆರೋಗ್ಯ ಸಮಸ್ಯೆ ಆಗಿತ್ತು. ಹೀಗಾಗಿ ಅಂಬರೀಷ್ ಅವರು ಮೃತಪಟ್ಟಾಗ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ’ ಎಂದರು.
‘ನಾನು ಸೋತ ನಂತರ ಮಂಡ್ಯಕ್ಕೆ ಬರಲಿಲ್ಲ ಎಂಬುದು ತಪ್ಪು, ಹಲವು ಸಂದರ್ಭಗಳಲ್ಲಿ ಬಂದು ಹೋಗಿದ್ದೇನೆ. ಸಂಬಂಧಿಕರ ಮನೆಗೆ ಬಂದಿದ್ದೇನೆ, ದೇವಾಲಯಕ್ಕೆ ಭೇಟಿ ನೀಡಿದ್ದೇನೆ. ಈಗ ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ, ಪಕ್ಷ ಜವಾಬ್ದಾರಿ ಕೊಟ್ಟಾಗ ದೆಹಲಿಗೆ ಹೋದೆ. ಸಿನಿಮಾದಲ್ಲೂ ಸಕ್ರಿಯಳಾಗಿದ್ದೇನೆ’ ಎಂದರು.
‘ಜೀವನಕ್ಕೆ ಏನಾದರೂ ದುಡಿಯಲೇಬೇಕು, ಅದಕ್ಕಾಗಿ ಸಿನಿಮಾ ಮಾಡುತ್ತಿದ್ದೇನೆ. ಗೋಪಾಲಪುರದಲ್ಲಿ ನನ್ನ ತಾತನ ಮನೆ ಇದೆ. ಮುಂದೆ ಮಂಡ್ಯದಲ್ಲಿ ನಾನೊಂದು ತೊಟ್ಟಿ ಮನೆ ಕಟ್ಟುವ ಆಸೆ ಇದೆ. ನಾನು ಕೂಡ ಗೌಡತಿ, ನಮ್ಮ ತಾಯಿ ಊರು ಮಂಡ್ಯ, ನನ್ನ ತಂದೆ ಇಲ್ಲೇ ತೀರಿಕೊಂಡರು. ಮಂಡ್ಯ ಜಿಲ್ಲೆಯ ಜನರ ಬೆಂಬಲ, ಅಭಿಮಾನವನ್ನು ಮರೆಯಲು ಸಾಧ್ಯವಿಲ್ಲ’ ಎಂದರು.
ಗೌಡರ ಹುಡುಗ ಸಿಕ್ಕರೆ ನೋಡಿ ಮದುವೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಮೊದಲು ನನಗೆ ಹುಡುಗನನ್ನು ಹುಡುಕಿ ಕೊಡಿ ನನಗೆ ಯಾರೂ ಕಾಣಿಸುತ್ತಿಲ್ಲ. ಗೌಡರ ಹುಡುಗ ಸಿಕ್ಕರೆ ನೋಡಿ. ನನಗೂ ಹುಡುಕಿ ಹುಡುಗಿ ಸಾಕಾಯಿತು. ಮಂಡ್ಯದಲ್ಲಿ ಸ್ವಯಂವರವನ್ನೇ ಮಾಡೋಣ’ ಎಂದು ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.