ನವದೆಹಲಿ: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮೇಲೆ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಪ್ರಭಾವ ಬೀರಲಾರರು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಅವರು, ಕರ್ನಾಟಕ ಮತ್ತು ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಯಾವುದೇ ದೊಡ್ಡ ಪ್ರಭಾವ ಹೊಂದಿಲ್ಲ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂದು ಅವರು ಹೇಳಿದ್ದಾರೆ.
ನಮ್ಮ ಪಕ್ಷ ಈ ಕುರಿತಂತೆ ಪಕ್ಕಾ ಹೋಮ್‌ವರ್ಕ್ ಮಾಡಿದೆ. ಪ್ರತಿ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿನ ಸಾಮರ್ಥ್ಯವನ್ನು 10 ಪಾಯಿಂಟ್ಸ್ ಮೂಲಕ ಅಳೆಯುವುದಾದರೆ, ನಮ್ಮ ಪಕ್ಷದ ಅಭ್ಯರ್ಥಿಗಳು 9 ಪಾಯಿಂಟ್ಸ್ ಪಡೆದರೆ, ಬಿಜೆಪಿ ಅಭ್ಯರ್ಥಿಗಳು 2 ಅಥವಾ 3ಕ್ಕೆ ನಿಲ್ಲುತ್ತಾರೆ ಎಂದಿದ್ದಾರೆ.
ಇದೇವೇಳೆ, ಒಂದು ಕ್ಷೇತ್ರದಲ್ಲಿರುವ ನಮ್ಮ ಸಂಸದರು ಜನರ ಸಮಸ್ಯೆಗಳನ್ನು ಆಲಿಸಿ ತಳಮಟ್ಟದಿಂದ ಕೆಲಸ ಮಾಡಿದ್ದಾರೆ ಎಂದೂ ಸಂಸದ ಡಿ.ಕೆ. ಸುರೇಶ್ ಕೆಲಸವನ್ನು ಪರಮೇಶ್ವರ್ ಶ್ಲಾಘಿಸಿದ್ದಾರೆ. ಅವರು ವಿದ್ಯಾವಂತರಾಗಿದ್ದು, ಜನ ಅವರನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದರು.
2023ರ ವಿಧಾನಸಭೆ ಚುನಾವಣೆ ವೇಳೆ ಮೋದಿ 15 ಬಾರಿ ಕರ್ನಾಟಕಕ್ಕೆ ಭೇಟಿ ಕೊಟ್ಟರು. 224 ಕ್ಷೇತ್ರಗಳ ಪೈಕಿ ನಾವು 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸರ್ಕಾರ ರಚಿಸಿದೆವು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.