ADVERTISEMENT

ಲಿಂಗಾಯತ ಸಿಎಂ ಬಿಜೆಪಿಯಲ್ಲಷ್ಟೇ ಸಾಧ್ಯ: ನಳಿನ್‌ ಕುಮಾರ್‌ ಕಟೀಲ್‌

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2023, 7:24 IST
Last Updated 27 ಏಪ್ರಿಲ್ 2023, 7:24 IST
 ನಳಿನ್‌ ಕುಮಾರ್‌ ಕಟೀಲ್‌
ನಳಿನ್‌ ಕುಮಾರ್‌ ಕಟೀಲ್‌    

ಗದಗ: 'ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಚರ್ಚೆ ಇಲ್ಲ. ರಾಷ್ಟ್ರೀಯ ನಾಯಕರು ಚರ್ಚೆ ಮಾಡಿ ಸಿಎಂ ಅಭ್ಯರ್ಥಿ ಘೋಷಣೆ ಮಾಡುತ್ತಾರೆ. ಆದರೆ, ಲಿಂಗಾಯತರು ಮುಖ್ಯಮಂತ್ರಿ ಆಗುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, 'ಉಜ್ವಲ ಯೋಜನೆ ಅಡಿ ಅಡುಗೆ ಅನಿಲ, ಪ್ರತಿ ಮನೆಗೆ ಶೌಚಾಲಯ, ಜನರಿಕ್‌ ಔಷಧಿ ಒದಗಿಸಿದ್ದು ಬಿಜೆಪಿ ಸರ್ಕಾರ. ಇದು ಜನರ ಮನಸ್ಸಿನಲ್ಲಿ ಉಳಿದಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಹಿಂದಿನಿಂದಲೂ ತುಷ್ಟೀಕರಣದ ರಾಜಕಾರಣ ಮಾಡುತ್ತ ಬರುತ್ತಿದೆ. ಗರೀಬಿ ಹಟಾವೋ ಹೆಸರಿನಲ್ಲಿ ಮತಗಳನ್ನಷ್ಟೇ ಪಡೆದುಕೊಂಡಿದೆ. ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಬಡಜನರ ಕಲ್ಯಾಣಕ್ಕೆ ನೆರವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ಹೇಳಿದರು.

ADVERTISEMENT

‘ಬಿಜೆಪಿಗೆ ಹಳೆ ಮೈಸೂರು ಭಾಗದಲ್ಲೂ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ರೋಡ್‌ ಶೋನಲ್ಲಿ ನಿರೀಕ್ಷೆಗೂ ಮೀರಿ ಜನರು ಸೇರುತ್ತಿದ್ದಾರೆ. ರಾಜ್ಯದಲ್ಲಿ 140 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದು ಹೇಳಿದರು.

‘ಭಯೋತ್ಪಾದನೆಗೆ ಬೆಂಗಾವಲಾಗಿ ನಿಂತು ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಹಿಂದೂಗಳ ಹತ್ಯೆ ಆದಾಗ ಮೌನವಾಗಿದ್ದರು. ಪಿಎಫ್‌ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದರು. ನಿರಂತವಾಗಿ ಗೋ ಹತ್ಯೆ ನಡೆಯಿತು. ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಪೋಟದ ಹಿಂದೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಇದ್ದ. ಅವನನ್ನು ಕಾಂಗ್ರೆಸ್‌ ಈವರೆಗೂ ಉಚ್ಛಾಟಿಸಿಲ್ಲ’ ಎಂದು ಆಪಾದಿಸಿದರು.

‘ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ನಿಂತಿದೆ. ಇವೆರಡರ ನಿಯಂತ್ರಣ ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದು ಸ್ಪಷ್ಟವಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.