ADVERTISEMENT

ಕಾಂಗ್ರೆಸ್‍ನವರ ಬಡತನ ಹೋಗಿದೆ, ಬಡವರದ್ದಲ್ಲ: ದೇವೇಂದ್ರ ಫಡಣವೀಸ್ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 6 ಮೇ 2023, 13:11 IST
Last Updated 6 ಮೇ 2023, 13:11 IST
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್   

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ‘ಕಾಂಗ್ರೆಸ್‌ನವರ ಬಡತನ ಮಾತ್ರ ಹೋಗಿದೆ ವಿನಃ ಬಡವರದ್ದಲ್ಲ’ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ವ್ಯಂಗ್ಯವಾಡಿದರು.

ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿದ್ಯಾರಣ್ಯ ಸಭಾಮಂಟಪದಲ್ಲಿ ಶನಿವಾರ ಜಾಗೃತ ಮತದಾರರ ವೇದಿಕೆಯಿಂದ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪ್ರಧಾನಿ ಮೋದಿ ಅವರು ಬಡವರ ಕಲ್ಯಾಣ ಮಾಡಿ ತೋರಿಸಿಕೊಟ್ಟಿದ್ದಾರೆ. ಏಳೂವರೆ ಕೋಟಿ ಮಹಿಳೆಯರಿಗೆ ಸ್ವಾವಲಂಬನೆ ಬದುಕು ಕಲ್ಪಿಸಿದ್ದಾರೆ.  ಪಾಕಿಸ್ತಾನದಲ್ಲಿ ಆಹಾರಕ್ಕಾಗಿ ಜಗಳ ನಡೆಯುತ್ತಿದೆ, ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಯಾವುದೇ ತೊಡಕಿಲ್ಲ‘ ಎಂದರು.

‘ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಮಾಡಿದ್ದಾರೆ. ನೇರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಸೇರುತ್ತಿದೆ‘ ಎಂದರು.

ADVERTISEMENT
ರಾಜ್ಯದಲ್ಲಿ ಬಜರಂಗದಳ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲರಲ್ಲಿಯೂ ಬಜರಂಗಬಲಿ ಇದ್ದಾನೆ. ಅದರ ತಾಕತ್ತು ಚುನಾವಣೆಯಲ್ಲಿ ತೋರಿಸಿ. ಮೇ 10ರಂದು ದೇವರಿಗೆ ಕೈಮುಗಿದು ಬಿಜೆಪಿಗೆ ಮತಹಾಕಿ
ದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ

‘ಕಾಂಗ್ರೆಸ ಪಕ್ಷದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಹಾಗೂ 10 ಸೀಟುಗಳನ್ನು ಗೆಲ್ಲಲಾಗದ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ. ಇದು ಈಡೇರದು, ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಡಬಲ್ ಎಂಜಿನ್ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿ ಆಗುತ್ತದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಣ್ಣ ಅವರ ಬೋಗಿ ಹಾಕಿದರೆ ಮತ್ತಷ್ಟೂ ವೇಗವಾಗಿ ಹೋಗುತ್ತದೆ‘ ಎಂದರು.

‘ರಾಜ್ಯದಲ್ಲಿ ಲಿಂಗಾಯತರು ಬಿಜೆಪಿ ಜತೆಗೆ ಇದ್ದಾರೆ, ಲಿಂಗಾಯತರು ಇದ್ದಲ್ಲಿ ಬಿಜೆಪಿಯಿದೆ‘ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಬಲ್ಲಾಹುಣ್ಸಿ ರಾಮಣ್ಣ ಅವರು ಮನೆಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಮಾತನಾಡಿದರು. ‘ರಾಜ್ಯದ ಎಲ್ಲ ಹಿಂದುಳಿದವರ್ಗಗಳು, ಪರಿಶಿಷ್ಟ ಜಾತಿ, ಪಂಗಡದ ಸಮುದಾಯವರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯ ನೀಡಲು ಸಾಧ್ಯ‘ ಎಂದರು.

ಅಭ್ಯರ್ಥಿ ಬಲ್ಲಾಹುಣ್ಸಿ ರಾಮಣ್ಣ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಕಾರ್ಯದರ್ಶಿ ಬಸವನಗೌಡ, ಆರ್‌ಎಸ್ಎಸ್‌ ಬಳ್ಳಾರಿ ವಿಭಾಗ ಪ್ರಮುಖ ಕೇಶವ್, ಹಾಲವೀರಪ್ಪಜ್ಜ, ಶಿವಪ್ರಕಾಶ್ ಆನಂದ ಸ್ವಾಮೀಜಿ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಎಂ.ವೀರೇಶ್ವರಸ್ವಾಮಿ, ಕ್ಷೇತ್ರ ಉಸ್ತುವಾರಿ ನಂಜನಗೌಡ, ಕೆ.ಎಂ.ತಿಪ್ಪೇಸ್ವಾಮಿ, ರೊಟ್ಟಿ ಕೊಟ್ರಪ್ಪ, ಡಿ.ದುರ್ಗಣ್ಣ, ಕರಿಬಸವರಾಜ ಬದಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.