ಮಂಡ್ಯ: ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಅವರ ಮುಂದಿನ ನಡೆ ಬಗ್ಗೆ ಜಿಲ್ಲೆಯಾದ್ಯಂತ ಕುತೂಹಲ ಮೂಡಿದೆ. ‘ಮತ್ತೆ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಯೂ ಇಲ್ಲವಾಗಿದ್ದು, ಈ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯಲಿದ್ದಾರೆ‘ ಎಂಬ ವಿಷಯ ಮುನ್ನೆಲೆಗೆ ಬಂದಿದೆ.
ಟಿಕೆಟ್ ಕೈತಪ್ಪಿದ ನಂತರ ಅವರು ಕ್ಷೇತ್ರದಿಂದ ದೂರವುಳಿದಿದ್ದಾರೆ. ಗುರುವಾರದ ಮೈತ್ರಿ ಪಕ್ಷಗಳ ಸಮನ್ವಯ ಸಭೆಗೂ ಬಾರದೇ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸದಂತೆ ಬಿಜೆಪಿ ವರಿಷ್ಠರು ಮನವೊಲಿಸಿರುವುದರಿಂದ, ಅತಂತ್ರರಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ‘ಸ್ವಾಭಿಮಾನ’ ಹೆಸರಿನಲ್ಲಿ ಜೆಡಿಎಸ್ ವಿರುದ್ಧ ಹೋರಾಟ ನಡೆಸಿ ಗೆದ್ದು ಬಂದಿದ್ದರು. ಜೆಡಿಎಸ್ ಮುಖಂಡರ ನಿಂದನೆ, ವೈಯಕ್ತಿಕ ಟೀಕೆಗಳನ್ನು ಎದುರಿಸಿದ್ದರು. ‘ಈಗ ಅವರ ಪರವಾಗಿ ಪ್ರಚಾರ ಮಾಡಿದರೆ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗುತ್ತದೆ. ಹೀಗಾಗಿ ಇಡೀ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದು ಸ್ವಾಭಿಮಾನವನ್ನು ಉಳಿಸುವ ಕೆಲಸ ಮಾಡುತ್ತಾರೆ’ ಎಂದು ಬೆಂಬಲಿಗರು ಹೇಳುತ್ತಾರೆ.
‘ಸುಮಲತಾ ಅವರು ಮತ್ತೆ ಪಕ್ಷೇತರರಾಗಿ ಸ್ಪರ್ಧಿಸಬೇಕು ಎಂಬುದು ನಮ್ಮ ಅಪೇಕ್ಷೆ. ಆದರೆ ಬಿಜೆಪಿ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುವುದು ಅನಿವಾರ್ಯ. ಎಚ್.ಡಿ.ಕುಮಾರಸ್ವಾಮಿ ಹೊರಗಿನ ಅಭ್ಯರ್ಥಿಯಾಗಿರುವುದರಿಂದ, ಅವರ ಪರವಾಗಿ ಪ್ರಚಾರ ನಡೆಸಿದರೆ ಮಂಡ್ಯ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಅವರು ದೂರವೇ ಉಳಿಯುತ್ತಾರೆ. ಶನಿವಾರ ನಡೆಯುವ ಬೆಂಬಲಿಗರ ಸಭೆಯಲ್ಲಿ ಇದೇ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ಬೆಂಬಲಿಗರೊಬ್ಬರು ಹೇಳಿದರು.
ಎಚ್‌ಡಿಕೆ ಭೇಟಿ: ಈಗ ಸುಮಲತಾ ಅವರನ್ನು ‘ಅಕ್ಕ’ ಎಂದು ಕರೆಯುತ್ತಿರುವ ಎಚ್.ಡಿ.ಕುಮಾರಸ್ವಾಮಿ, ಈ ವಾರದಲ್ಲಿ ಅವರ ನಿವಾಸಕ್ಕೆ ತೆರಳಿ ಬೆಂಬಲ ಕೋರುವ ಸಾಧ್ಯತೆ ಇದೆ. ಕಳೆದ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಕಟ್ಟಿಕೊಂಡಿದ್ದ ಬಹುತೇಕ ಮುಖಂಡರನ್ನು ಅವರು ಭೇಟಿಯಾಗಿ ಬೆಂಬಲ ಕೋರಿದ್ದಾರೆ.
‘ಮೈತ್ರಿ ವಿರೋಧಿಸಿ ಕಾಂಗ್ರೆಸ್ ಸೇರಲು ಮುಂದಾಗಿದ್ದ ಬಿಜೆಪಿ ಮುಖಂಡ ಕೆ.ಸಿ.ನಾರಾಯಣಗೌಡರನ್ನು ಭೇಟಿಯಾಗಿ ಬೆಂಬಲ ಕೋರಿ, ಅವರು ಬಿಜೆಪಿ ತ್ಯಜಿಸದಂತೆ ನೋಡಿಕೊಂಡಿದ್ದಾರೆ. ಹಾಗೆಯೇ ಸುಮಲತಾ ಅವರನ್ನೂ ಭೇಟಿಯಾಗುತ್ತಾರೆ’ ಎಂದು ಮೂಲಗಳು ತಿಳಿಸಿವೆ.
‘ಶನಿವಾರ ಬೆಂಗಳೂರಿನಲ್ಲಿ ನಡೆಯುವ ಬೆಂಬಲಿಗರ ಸಭೆಗೆ ಮಂಡ್ಯ ಜಿಲ್ಲೆಯ ಸಾವಿರಾರು ಜನ ಪಾಲ್ಗೊಳ್ಳುತ್ತಿದ್ದಾರೆ. ಸಂಸದರ ಸೂಚನೆಗೆ ನಾವೆಲ್ಲರೂ ಬದ್ಧರಾಗಿರುತ್ತೇವೆ’ ಎಂದು ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ಹೇಳಿದರು.
ಬೆಂಬಲ ಪಡೆಯಲು ಕಾಂಗ್ರೆಸ್ ಪ್ರಯತ್ನ ‘ಸುಮಲತಾ ಅವರ ಅಸಮಾಧಾನವನ್ನೇ ಬಂಡವಾಳ ಮಾಡಿಕೊಂಡು ಅವರ ಬೆಂಬಲ ಪಡೆಯಲು ಕಾಂಗ್ರೆಸ್ ಮುಖಂಡರೂ ಪ್ರಯತ್ನಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಸಂದೇಶ ನೀಡುವಂತೆ ಮನವಿ ಮಾಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ‘ಮಂಡ್ಯ ಸ್ವಾಭಿಮಾನದ ಪರವಾಗಿ ಮತಹಾಕಿ ಎಂದು ಸುಮಲತಾ ಸಂದೇಶ ನೀಡಿದರೆ ಅದು ಕಾಂಗ್ರೆಸ್‌ಗೆ ಸಹಾಯವಾಗುತ್ತದೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.