ADVERTISEMENT

ಬಳ್ಳಾರಿ ಲೋಕಸಭಾ ಕ್ಷೇತ್ರ | ಹೊಸ ಸಂಸದರ ಮೇಲೆ ನಿರೀಕ್ಷೆ ಭಾರ

ಬಳ್ಳಾರಿ ಸಂಸದ ತುಕಾರಾಂ ಅವರತ್ತ ಜನರ ನಿರೀಕ್ಷೆಯ ಕಣ್ಣು

ಎಂ.ಜಿ.ಬಾಲಕೃಷ್ಣ
ಆರ್. ಹರಿಶಂಕರ್
Published 6 ಜೂನ್ 2024, 4:50 IST
Last Updated 6 ಜೂನ್ 2024, 4:50 IST
<div class="paragraphs"><p>ಇ. ತುಕಾರಾಂ</p></div>

ಇ. ತುಕಾರಾಂ

   

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಇ. ತುಕಾರಾಂ ಅವರು ಬಿಜೆಪಿಯ ಬಿ. ಶ್ರೀರಾಮುಲು ವಿರುದ್ಧ ಅನಾಯಾಸ ವಿಜಯ ಸಾಧಿಸಿದರು. ಆದರೆ, ಮುಂದಿನ ಐದು ವರ್ಷ ಅವರು ಮಾಡಬೇಕಾದ ಕೆಲಸಗಳ ಪಟ್ಟಿ ದೊಡ್ಡದಾಗಿಯೇ ಇದೆ. 

ತುಕಾರಾಂ ಅವರು ಚುನಾವಣಾ ಪ್ರಚಾರದ ವೇಳೆ ಮುಖ್ಯವಾಗಿ ಪ್ರಸ್ತಾಪ ಮಾಡುತ್ತಿದ್ದದ್ದು ‘ಸೋನಿಯಾ ಪ್ಯಾಕೇಜ್‌’ ಬಗ್ಗೆ. 1999ರ ಲೋಕಸಭೆ ಸಾರ್ವತ್ರಿಕಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿಯಿಂದಲೂ, ಕರ್ನಾಟಕದ ಬಳ್ಳಾರಿಯಿಂದಲೂ ಸ್ಪರ್ಧೆ ಮಾಡಿದ್ದರು. ಫಲಿತಾಂಶ ಬಂದಾಗ ಅಮೇಥಿ ಮತ್ತು ಬಳ್ಳಾರಿಗಳೆರಡರಲ್ಲೂ ಗೆದ್ದಿದ್ದರು. ನಿರೀಕ್ಷೆಯಂತೇ ಅಮೇಥಿಯನ್ನು ಉಳಿಸಿಕೊಂಡಿದ್ದ ಸೋನಿಯಾ, ಬಳ್ಳಾರಿಯನ್ನು ತೊರೆದಿದ್ದರು.

ADVERTISEMENT

ಇಲ್ಲಿನ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು, 25 ವರ್ಷಗಳ ಹಿಂದೆಯೇ  ₹3300 ಕೋಟಿ ಪ್ಯಾಕೇಜ್‌ ಅನ್ನು ಕ್ಷೇತ್ರಕ್ಕೆ ಘೋಷಣೆ ಮಾಡಿದ್ದರು. ಅದನ್ನು ಇಂದಿಗೂ ‘ಸೋನಿಯಾ ಪ್ಯಾಕೇಜ್‌’ ಎಂದೇ ಇಲ್ಲಿನ ಜನ ಕರೆಯುತ್ತಾರೆ. ಆ ಪ್ಯಾಕೇಜ್‌ನಲ್ಲಿ ₹2500 ಕೋಟಿಯನ್ನು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೂ, ₹800 ಕೋಟಿಯನ್ನು ಆರೋಗ್ಯ, ಶಿಕ್ಷಣ ಮೂಲಸೌಕರ್ಯ ಅಭಿವೃದ್ಧಿಗೂ ಬಳಸಲಾಗಿತ್ತು. 

‘ಸೋನಿಯಾ ಪ್ಯಾಕೇಜ್‌ ಮಾದರಿಯಲ್ಲೇ ಕ್ಷೇತ್ರಕ್ಕೆ ಅನುದಾನ ತರಬೇಕು, ಅಭಿವೃದ್ಧಿ ಮಾಡಬೇಕು ಎಂದು ಹೇಳುತ್ತಲೇ’ ಬಂದ ತುಕಾರಾಂ ಅವರಿಗೆ ಸದ್ಯ ಅವಕಾಶ ಸಿಕ್ಕಿದೆ. ಈಗ ಅವರ ಮುಂದೆ ಮಾಡಲು ಬಹಳಷ್ಟು ಕೆಲಸಗಳಿವೆ.  ಕನಿಷ್ಠ ಮೂಲಸೌಕರ್ಯ, ಉತ್ತಮ ರಸ್ತೆ, ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗಬೇಕೆಂಬ ಆಶಯವಿದೆ.   ಹೊಸ ಸಂಸದರು ಆಯ್ಕೆಯಾಗಿರುವ ಈ ಸಂದರ್ಭದಲ್ಲಿ ಅವಳಿ ಜಿಲ್ಲೆಗಳು ಹೊಸ ಅವರಿಂದ ಬಯಸುತ್ತಿರುವುದೇನು ಎಂಬುದರ ಪಟ್ಟಿ ಇಲ್ಲಿದೆ.  

ಬಳ್ಳಾರಿ ಜಿಲ್ಲೆಯ ಬೇಡಿಕೆಗಳು

* ಬಳ್ಳಾರಿ ಜಿಲ್ಲೆಯ ಬಹುಕಾಲದ ಬೇಡಿಕೆಯಾಗಿರುವ ವಿಮಾನ ನಿಲ್ದಾಣ ನಿರ್ಮಾಣವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು. 

* ಬ್ಯಾಡಗಿ ಮಾದರಿಯಲ್ಲಿ ಜಿಲ್ಲೆಯಲ್ಲಿ ಮಣಸಿನಕಾಯಿಗೆ ದೊಡ್ಡ ಮಾರುಕಟ್ಟೆ ಒದಗಿಸಬೇಕು.  

* ಚುನಾವಣೆಯಲ್ಲಿ ಭರವಸೆ ನೀಡಿದಂತೆ ಜೀನ್ಸ್‌ ಉದ್ಯಮಕ್ಕೆ ಕಾಯಕಲ್ಪ ಒದಗಿಸುವುದು ಮತ್ತು ಜೀನ್ಸ್‌ ಉದ್ಯಮದಿಂದಾಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಯುವುದು.  

* ಸಂಡೂರು, ಕುಡುತಿನಿ, ತೋರಣಗಲ್‌ ಭಾಗದಲ್ಲಿ ಕಾರ್ಖಾನೆಗಳಿಂದಾಗುತ್ತಿರುವ ಮಾಲಿನ್ಯ, ನಾಗರಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು.

* ಸುದಾ ಕ್ರಾಸ್‌, ರೇಡಿಯೋ ಪಾರ್ಕ್‌ ಬಳಿ ಮೇಲ್ಸೇತುವೆ ನಿರ್ಮಾಣವಾಗಬೇಕು.  

* ಬಳ್ಳಾರಿ ನಗರ ಮತ್ತು ಗ್ರಾಮಾಂತರ ಪ್ರದೇಶದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ತತ್ವಾರವಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಮತ್ತಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕು. 

* ಪ್ರಾಗೈತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಸಂಗನಕಲ್ಲಿನ ಗುಡ್ಡಗಳು ಮತ್ತು ಚಾರಿತ್ರಿಕ ಹಿನ್ನೆಲೆ ಹೊಂದಿರುವ ಬಳ್ಳಾರಿ ಕೋಟೆಯ ರಕ್ಷಣೆಯಾಗಬೇಕು. 

*  ಬಳ್ಳಾರಿ ನಗರಕ್ಕೆ ಬೈಪಾಸ್‌ ರಸ್ತೆ ನಿರ್ಮಾಣ ಆಗಬೇಕು. 

* ಬಳ್ಳಾರಿ - ಸಿರುಗುಪ್ಪ - ಸಿಂದನೂರು ರಾಜ್ಯ ಹೆದ್ದಾರಿ 4 ಪಥ ರಸ್ತೆ ನಿರ್ಮಾಣ ಮಾಡಬೇಕು.  

* ಬಳ್ಳಾರಿಗೆ ಮತ್ತಷ್ಟು ರೈಲುಗಳು ಮತ್ತು ವಂದೇ ಭಾರತ್‌ ರೈಲು ಸಂಚಾರ ಆರಂಭವಾಗಬೇಕು. 

ವಿಜಯನಗರ ಜಿಲ್ಲೆಯ ಬೇಡಿಕೆ

*ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಲೋಕರ್ಪಣೆ ಮಾಡಬೇಕು

*ಮರಿಯಮ್ಮಹಳ್ಳಿ-ಹಗರಿಬೊಮ್ಮನಹಳ್ಳಿ-ಹರಪನಹಳ್ಳಿ ಹರಿಹರ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಬೇಕು

*ಹೊಸಪೇಟೆ ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಸರ್ಕಾರ ಸಹಕಾರ ಮತ್ತು ಆರ್ಥಿಕ ನೆರವು ನೀಡಬೇಕು

*ತುಂಗಭದ್ರಾ ಜಲಾಶಯಕ್ಕೆ ಸಮತೋಲಿತ ಜಲಾಶಯ ನಿರ್ಮಿಸುವುದು

*ಹಂಪಿಯನ್ನು ಅಂತರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಪರಸ್ಪರ ಸಮನ್ವಯತೆ ಸಾಧಿಸಬೇಕು

*ನ್ಯಾ.ಬಚಾವತ್ ಆಯೋಗದ ಶಿಫಾರಸಿನಂತೆ ವಿಜಯನಗರ (ರಾಯ, ಬಸವಣ್ಣ, ಬೆಲ್ಲ, ತುರ್ತ) ಕಾಲುವೆಗಳಿಗೆ ನೀರು ಹಂಚಿಕೆ ಪ್ರಮಾಣವನ್ನು ಶಾಸನಬದ್ಧ ಗೊಳಿಸಬೇಕು

*ಹೊಸಪೇಟೆ ರೈಲು ನಿಲ್ದಾಣದ ವಿಸ್ತರಣೆ, ನೂತನವಾಗಿ ಎರಡು ಪ್ಲಾಟ್ ಫಾರಂ ನಿರ್ಮಾಣ, ಪಿಟ್ ಲೈನ್ ನಿರ್ಮಾಣ, ಕಾರಿಗನೂರಿನಲ್ಲಿ ಗೂಡ್ಸ್ ಗಾಡಿಗಳ ಕಾರ್ಯಾಗಾರ ಸ್ಥಾಪನೆ

*ಅನಂತಶಯನಗುಡಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು

*ಹಗರಿಬೊಮ್ಮನಹಳ್ಳಿಯಲ್ಲಿ ರೈಲ್ವೇ ಮೇಲುಸೇತುವೆ ಮತ್ತು ಅಂಡರ್‌ಪಾಸ್ ನಿರ್ಮಾಣಕ್ಕೆ ಚಾಲನೆ ನೀಡಬೇಕು

*ಹರಪನಹಳ್ಳಿ, ಹಡಗಲಿ, ಮುಂಡರಗಿ ಗದಗ ನಡುವೆ ನೂತನ ರೈಲು ಮಾರ್ಗ ಸ್ಥಾಪಿಸಬೇಕು

*ಕೊಟ್ಟೂರಿನಲ್ಲಿ ನೂತನ ಗೂಡ್ಸ್  ರೈಲ್ವೆ ರೇಕ್‌ ನಿರ್ಮಿಸಬೇಕು

*ವಿಜಯನಗರ ಜಿಲ್ಲೆಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.