ADVERTISEMENT

ಲೋಕಸಭಾ ಚುನಾವಣೆ | ರಾಜ್ಯದಲ್ಲಿ 1,832 ವಿಶೇಷ ಮತಗಟ್ಟೆ: ಮನೋಜ್‌ ಕುಮಾರ್‌ ಮೀನಾ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 16:17 IST
Last Updated 21 ಏಪ್ರಿಲ್ 2024, 16:17 IST
ಮನೋಜ್‌ ಕುಮಾರ್‌ ಮೀನಾ
ಮನೋಜ್‌ ಕುಮಾರ್‌ ಮೀನಾ   

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 1,832 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ಎರಡು ಹಂತದ ಚುನಾವಣೆಗೆ ಒಟ್ಟು 58,834 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾರರನ್ನು ಆಕರ್ಷಿಸಲು ವಿವಿಧ ವಿಷಯ ಆಧಾರಿತವಾಗಿ 1,832 ವಿಶೇಷ ಮತಗಟ್ಟೆಗಳಿರಲಿವೆ ಎಂದು ಮಾಹಿತಿ ನೀಡಿದರು.

ಮಹಿಳಾ ಮತದಾರರನ್ನು ಉತ್ತೇಜಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಐದರಂತೆ ಒಟ್ಟು 1,120 ಸಖಿ ಮತಗಟ್ಟೆ ಸ್ಥಾಪಿಸಲಾಗುವುದು. ಭದ್ರತಾ ಸಿಬ್ಬಂದಿ, ‘ಡಿ’ ದರ್ಜೆ ಸಿಬ್ಬಂದಿ  ಎಲ್ಲ ಮಹಿಳೆಯರೇ ಇರುತ್ತಾರೆ ಎಂದರು.

ADVERTISEMENT

ಅಂತೆಯೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ‘ಅಂಗವಿಕಲರ ವಿಶೇಷ ಮತಗಟ್ಟೆ’ ಸ್ಥಾಪಿಸಲಿದ್ದು, ಅಲ್ಲಿಗೆ ಅಂಗವಿಕಲ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಯುವ ಮತಗಟ್ಟೆ ತೆರೆದು ಅಲ್ಲಿಗೆ ಯುವ ಅಧಿಕಾರಿಗಳು, ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಹೇಳಿದರು.

ಎಲ್ಲ ಮತದಾರರಲ್ಲಿ ಚುನಾವಣೆ ಮತ್ತು ಮತದಾನದ ಕುರಿತು ಅರಿವು ಮೂಡಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಧ್ಯೇಯ ಆಧಾರಿತ ಮತಗಟ್ಟೆ ತೆರೆಯಲಾಗುವುದು.

ಪರಿಶಿಷ್ಟ ಪಂಗಡಗಳ ಜನರನ್ನು ಮತಗಟ್ಟೆಗಳತ್ತ ಸೆಳೆಯಲು ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಬುಡಕಟ್ಟು ಜನರ ಸಾಂಸ್ಕೃತಿಕ ವೈವಿಧ್ಯ ಬಿಂಬಿಸುವ 40 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಮೀನಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.