ADVERTISEMENT

ಲೋಕಸಭೆ ಚುನಾವಣೆ |ಏ.2ರಂದು ರಾಜ್ಯದಲ್ಲಿ ಅಮಿತ್ ಶಾ ಪ್ರವಾಸ: ಸುನಿಲ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 16:23 IST
Last Updated 30 ಮಾರ್ಚ್ 2024, 16:23 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

(ಪಿಟಿಐ ಚಿತ್ರ)

ಬೆಂಗಳೂರು: ‘ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಏಪ್ರಿಲ್‌ 2ರಂದು ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಚನ್ನಪಟ್ಟಣಕ್ಕೆ ಸೇರಿದಂತೆ ಹಲವೆಡೆ ಚುನಾವಣಾ ಪ್ರಚಾರ ನಡೆಸಲಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ತಿಳಿಸಿದರು.

ADVERTISEMENT

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮಿತ್‌ ಶಾ ಅವರು ಏ.2ರಂದು ಇಡೀ ದಿನ ಕರ್ನಾಟಕದ ಹಲವೆಡೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ದೇಶ ಒಡೆಯುವ ಮಾತನಾಡಿದ್ದ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ಅವರನ್ನು ಸೋಲಿಸುವ ಗುರಿಯೊಂದಿಗೆ ಆ ದಿನ ಸಂಜೆ 6 ಗಂಟೆಗೆ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಲಿದ್ದಾರೆ’ ಎಂದರು.

ದೇಶವನ್ನು ಒಡೆಯುವ ಮಾನಸಿಕತೆಯವರು ಬೇಕೋ? ಅಥವಾ ದೇಶ ಒಗ್ಗೂಡಿಸುವವರು ಬೇಕೋ? ಎಂಬ ಪ್ರಶ್ನೆಯ ಅಡಿಯಲ್ಲೇ ಈ ಚುನಾವಣೆ ನಡೆಯಲಿದೆ. ದೇಶ ಒಡೆಯುವ ಮಾನಸಿಕತೆಯನ್ನು ಸಮರ್ಥಿಸಿಕೊಳ್ಳುವ ಕಾಂಗ್ರೆಸ್‌ನ ವಿರುದ್ಧ ದೇಶ ಒಗ್ಗೂಡಿಸುವ ಸಂದೇಶ ನೀಡುವ ಅಮಿತ್‌ ಶಾ ಪ್ರಚಾರ ನಡೆಸುತ್ತಾರೆ ಎಂದು ಹೇಳಿದರು.

ಏ.2ರಂದು ಬೆಳಿಗ್ಗೆ ಅಮಿತ್‌ ಶಾ ಅವರು ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರ ಜತೆ ಉಪಾಹಾರ ಸಭೆ ನಡೆಸುವರು. ಬೆಳಿಗ್ಗೆ 11 ಗಂಟೆಗೆ ಅರಮನೆ ಮೈದಾನದಲ್ಲಿ ನಡೆಯುವ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರಗಳ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸುವರು ಎಂದರು.

ಅದೇ ದಿನ ಮಧ್ಯಾಹ್ನ 2ರಿಂದ 5 ಗಂಟೆಯವರೆಗೆ ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳ ಪ್ರಮುಖರ ಜತೆ ಸಂವಾದ ನಡೆಸುವರು ಎಂದು ತಿಳಿಸಿದರು.

ಧನ್ಯವಾದ ಮೋದಿ ಅಭಿಯಾನ:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 10 ವರ್ಷಗಳಲ್ಲಿ ಜಾರಿಗೊಳಿಸಿರುವ ಜನಪರ ಯೋಜನೆಗಳ ಆಧಾರದಲ್ಲಿ ಮುಂದಿನ 40 ದಿನಗಳ ಕಾಲ ‘ಧನ್ಯವಾದ ಮೋದಿ ಅಭಿಯಾನ’ ನಡೆಸಲಾಗುವುದು ಎಂದು ಸುನಿಲ್‌ ಹೇಳಿದರು.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌, ಉಜ್ವಲಾ, ಪ್ರಧಾನ ಮಂತ್ರಿ ಗರೀಬ್‌ ಅನ್ನ ಕಲ್ಯಾಣ ಯೋಜನೆ, ಸ್ಟಾರ್ಟಪ್‌ ಇಂಡಿಯಾ ಸೇರಿದಂತೆ ಮೋದಿ ಸರ್ಕಾರದ ಯೋಜನೆಗಳ ಕುರಿತು ನಿತ್ಯವೂ ಒಂದೆರಡು ವಿಡಿಯೊ ತುಣುಕುಗಳೊಂದಿಗೆ ಅಭಿಯಾನ ನಡೆಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.