ADVERTISEMENT

ಅಧಿಕಾರಿಗಳ ಅಕ್ರಮದಿಂದ ಸೌಮ್ಯಾ ಸೋಲು: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 16:36 IST
Last Updated 1 ಏಪ್ರಿಲ್ 2024, 16:36 IST
ಸೌಮ್ಯಾ ರೆಡ್ಡಿ ಅವರು ನಾಮಪತ್ರ ಸಲ್ಲಿಸುವ ಮೊದಲು ಜಯನಗರದಲ್ಲಿ ನಡೆದ ರ‍್ಯಾಲಿಯಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದರು.ಯು.ಬಿ.ವೆಂಕಟೇಶ್‌, ರಾಮಲಿಂಗಾರೆಡ್ಡಿ, ಪಿ.ಜಿ.ಆರ್. ಸಿಂಧ್ಯ, ಶಾಸಕ ಪ್ರಿಯ ಕೃಷ್ಣ ಜತೆಗಿದ್ದರು.
ಸೌಮ್ಯಾ ರೆಡ್ಡಿ ಅವರು ನಾಮಪತ್ರ ಸಲ್ಲಿಸುವ ಮೊದಲು ಜಯನಗರದಲ್ಲಿ ನಡೆದ ರ‍್ಯಾಲಿಯಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದರು.ಯು.ಬಿ.ವೆಂಕಟೇಶ್‌, ರಾಮಲಿಂಗಾರೆಡ್ಡಿ, ಪಿ.ಜಿ.ಆರ್. ಸಿಂಧ್ಯ, ಶಾಸಕ ಪ್ರಿಯ ಕೃಷ್ಣ ಜತೆಗಿದ್ದರು.   

ಬೆಂಗಳೂರು: ‘ವಿಧಾನಸಭೆ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಸೋತಿಲ್ಲ. ಅಧಿಕಾರಿಗಳಿಂದ ಸೋಲಬೇಕಾಯಿತು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸೌಮ್ಯಾ ರೆಡ್ಡಿ ನಾಮಪತ್ರ ಸಲ್ಲಿಸುವ ಮೊದಲು ಜಯನಗರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಒತ್ತಡಕ್ಕೆ ಒಳಗಾಗಿ ನಾವು ಸೌಮ್ಯಾ ರೆಡ್ಡಿ ಅವರನ್ನು ಸೋಲಿಸಬೇಕಾಯಿತು ಎಂದು ಅಕ್ರಮದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು, ರಾಮಲಿಂಗಾರೆಡ್ಡಿ ಬಳಿ ಕ್ಷಮಾಪಣೆ ಕೇಳಿರುವ ಸಂಗತಿ ನನಗೆ ತಿಳಿಯಿತು’ ಎಂದರು.

‘ಇಡೀ ರಾಜ್ಯದಲ್ಲಿ ಯಾವ ಮೋದಿ ಅಲೆಯೂ ಇಲ್ಲ, ಬಿಜೆಪಿ ಅಲೆಯೂ ಇಲ್ಲ. ಇರುವುದು ಒಂದೇ ಗಾಳಿ, ಅದು ಕಾಂಗ್ರೆಸ್, ಗ್ಯಾರಂಟಿ ಗಾಳಿ’ ಎಂದ ಅವರು, ‘ಬೊಮ್ಮನಹಳ್ಳಿ, ಬಸವನಗುಡಿ ಸೇರಿದಂತೆ ಈ ಕ್ಷೇತ್ರದ ಎಲ್ಲ ಕಡೆಗಳಲ್ಲಿ ಸೌಮ್ಯಾ ಅವರಿಗೆ ಹೆಚ್ಚು ಮತಗಳು ಬರಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಂಟ, ರೆಡ್ಡಿ, ಸೇರಿ ಒಟ್ಟು ಎಂಟು ಮಂದಿ ಒಕ್ಕಲಿಗರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಒಕ್ಕಲಿಗರನ್ನು ಸಿಎಂ ಮಾಡಲಿಲ್ಲವಲ್ಲ ಎನ್ನುವ ಟೀಕೆಗೆ ನಾವು ಈ ರೀತಿ ಉತ್ತರಿಸಿದ್ದೇವೆ. ಇದರ ಜತೆಗೆ ಆರು ಮಹಿಳೆಯರಿಗೆ ಟಿಕೆಟ್ ನೀಡಿದ್ದೇವೆ‘ ಎಂದರು.

ನಾನೇಕೆ ತಲೆಕೆಡಿಸಿಕೊಳ್ಳಬೇಕು: ಅದಕ್ದೂ ಮೊದಲು ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ‘ವಿಷ’ ಹೇಳಿಕೆ ನೀಡಿದ್ದೇನೆ. ಕುಂಬಳಕಾಯಿ ಕಳ್ಳ ಎಂದರೆ ಸುಮಲತಾ ಅವರು ಏಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು’ ಎಂದು ಪ್ರಶ್ನಿಸಿದರು.

‘ಅಂಬರೀಷ್ ಅವರಿಗೆ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಅವರು ಕೊನೆಯುಸಿರು ಬಿಡುವ ವೇಳೆಯಲ್ಲಿ ಏನು ಹೇಳಿದರು ಎಂಬುದು ಗೊತ್ತಿದೆ. ನಾವು ಈಗ ಆ ವಿಚಾರಗಳನ್ನು ಮಾತನಾಡುವುದಿಲ್ಲ. ಸುಮಲತಾ ಅವರ ವಿಚಾರಕ್ಕೆ ಎಂದೂ ಹೋಗುವುದಿಲ್ಲ. ಅವರ ಬಗ್ಗೆ ನಾನೇಕೆ ತಲೆಕೆಡಿಸಿಕೊಳ್ಳಬೇಕು. ಪಕ್ಷದ ಸಿದ್ದಾಂತದ ಬಗ್ಗೆ ಮಾತನಾಡಲಿ, ಉತ್ತರ ಕೊಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.