ADVERTISEMENT

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಮೋಹನ್‌, ತೇಜಸ್ವಿ ಸೂರ್ಯ ಬಿರುಸಿನ ಪ್ರಚಾರ

‘ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕೇಂದ್ರದಿಂದ ₹1.30 ಲಕ್ಷ ಕೋಟಿ ಅನುದಾನ’

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 15:54 IST
Last Updated 8 ಏಪ್ರಿಲ್ 2024, 15:54 IST
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.   

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರು ಸೋಮವಾರ ತಮ್ಮ ಕ್ಷೇತ್ರದ ಹಲವು ಕಡೆ ಬಿರುಸಿನ ಪ್ರಚಾರ ನಡೆಸಿದರು.

ಉದ್ಯಾನ, ಅಪಾರ್ಟ್‌ಮೆಂಟ್‌ ಸೇರಿದಂತೆ ನಾನಾ ಕಡೆ ತೆರಳಿ ಮತದಾರರ ಬೆಂಬಲ ಕೋರಿದರು. ಇದೇ ವೇಳೆ ಕರಪತ್ರ ಹಂಚಿಕೆ ಮಾಡಿದರು.

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಬಾಣಸವಾಡಿಯ ಬಂಡೆ ಪಾರ್ಕ್, ಗ್ರೀನ್ ಪಾರ್ಕ್ ಮತ್ತು ಒಎಂಬಿಆರ್ ಲೇಔಟ್ ಪಾರ್ಕ್‌ಗಳಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ, ಬೆಂಬಲ ಕೋರಿದರು.

ADVERTISEMENT

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀರಾಮ್ ಲಕ್ಸರ್ ಅಪಾರ್ಟ್‌ಮೆಂಟ್‌ ಸಂಘದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ಇದೇ ವೇಳೆ, ಸಾರ್ವಜನಿಕರ ಕುಂದುಕೊರತೆ ಆಲಿಸಿದರು.

ಬ್ಯೂನಾ ವಿಸ್ಟಾ ಅಪಾರ್ಟ್‌ಮೆಂಟ್ ಸಂಘದ ಸದಸ್ಯರ ಜತೆಗೆ ಸಮಾಲೋಚನೆ ನಡೆಸಿ ಬೆಂಬಲ ಕೋರಿದರು.

ಶ್ರೀರಾಮ್ ಗ್ರೀನ್‌ಫೀಲ್ಡ್‌ ಅಪಾರ್ಟ್‌ಮೆಂಟ್ ಸಂಘದ ಸದಸ್ಯರನ್ನೂ ಭೇಟಿ ಮಾಡಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಬೊಮ್ಮನಹಳ್ಳಿಯಲ್ಲಿ ಪ್ರಚಾರ: ಮತ್ತೊಂದೆಡೆ ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರೂ ಪ್ರಚಾರ ನಡೆಸಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಇಬ್ಬಲೂರಿನ ಸನ್‌ ಸಿಟಿ ಅಪಾರ್ಟ್‌ಮೆಂಟ್‌ ನಿವಾಸಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ‘ಐದು ವರ್ಷಗಳಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ₹1.30 ಲಕ್ಷ ಕೋಟಿ ಅನುದಾನ ಬಂದಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರದ ಅನೇಕ ಪ್ರಮುಖ ಯೋಜನೆಗಳು ಬೆಂಗಳೂರಿನಲ್ಲಿ ಜಾರಿಗೊಂಡಿವೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮೆಟ್ರೊ ಮಾರ್ಗಗಳ ವಿಸ್ತರಣೆ, ಉಪನಗರ ರೈಲು ಯೋಜನೆ, ಉಪನಗರ ವರ್ತುಲ ರಸ್ತೆ ಯೋಜನೆಗಳಿಗೆ ಕೇಂದ್ರದಿಂದ ಮಂಜೂರಾತಿ ದೊರೆತಿದೆ. ಬಿಎಂಟಿಸಿಗೆ 1,600 ಎಲೆಕ್ಟ್ರಿಕ್ ಬಸ್‌ಗಳನ್ನು ಕೇಂದ್ರ ಸರ್ಕಾರ ಒದಗಿಸಿದೆ’ ಎಂದು ಹೇಳಿದರು.

‘ರಕ್ತದ ಒತ್ತಡ, ಮಧುಮೇಹದಂತಹ ಕಾಯಿಲೆಗಳಿಂದ ಬಳಲುತ್ತಿರುವ ಕ್ಷೇತ್ರದ ನಾಗರಿಕರಿಗೆ ಉಚಿತ ಔಷಧ ಒದಗಿಸುವ ಸಲುವಾಗಿ ನಮೋ ಆರೋಗ್ಯ ನಿಧಿ ಯೋಜನೆ ಆರಂಭಿಸಲಾಗಿದೆ. ಈ ಯೋಜನೆ ಅಡಿ 1,000ಕ್ಕೂ ಅಧಿಕ ಹಿರಿಯರಿಗೆ ಪ್ರತಿ ತಿಂಗಳು ಔಷಧ ನೀಡಲಾಗುತ್ತಿದೆ. ದಕ್ಷಿಣ ಕ್ಷೇತ್ರದಲ್ಲಿ 5 ವರ್ಷಗಳ ಹಿಂದೆ ಶೇ 14ರಷ್ಟಿದ್ದ ಜನೌಷಧಿ ಕೇಂದ್ರಗಳ ಸಂಖ್ಯೆ ಇದೀಗ ಶೇ 120ಕ್ಕೆ ಏರಿಕೆಯಾಗಿವೆ. ಇಡೀ ದೇಶದಲ್ಲೇ ಅತಿಹೆಚ್ಚು ಜನೌಷಧಿ ಕೇಂದ್ರಗಳನ್ನು ಹೊಂದಿರುವ ಕ್ಷೇತ್ರ ಎನಿಸಿದೆ’ ಎಂದು ಹೇಳಿದರು.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಸನ್‌ ಸಿಟಿ ಅಪಾರ್ಟ್‌ಮೆಂಟ್‌ನ ಪ್ರಸಾದ್‌ ಜೋಶಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.