ADVERTISEMENT

ಲೋಕಸಭೆ ಚುನಾವಣೆ | ಚಿಕ್ಕಬಳ್ಳಾಪುರ: ಗರಿಗೆದರಿದ ನೀರಾವರಿ ರಾಜಕಾರಣದ ಮಾತು

ಡಿ.ಎಂ.ಕುರ್ಕೆ ಪ್ರಶಾಂತ
Published 8 ಏಪ್ರಿಲ್ 2024, 4:53 IST
Last Updated 8 ಏಪ್ರಿಲ್ 2024, 4:53 IST
<div class="paragraphs"><p>ಚಿಕ್ಕಬಳ್ಳಾಪುರ ಜಿಲ್ಲೆ ಪ್ರವೇಶಿಸುತ್ತಿರುವ ಎಚ್‌.ಎನ್.ವ್ಯಾಲಿ ನೀರು</p></div>

ಚಿಕ್ಕಬಳ್ಳಾಪುರ ಜಿಲ್ಲೆ ಪ್ರವೇಶಿಸುತ್ತಿರುವ ಎಚ್‌.ಎನ್.ವ್ಯಾಲಿ ನೀರು

   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು ಬಯಲು ಸೀಮೆಯ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಬಯಲು ಸೀಮೆಯ ಈ ಕ್ಷೇತ್ರದಲ್ಲಿ ಪ್ರತಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯ ಸಮಯದಲ್ಲಿ ನೀರಾವರಿ ವಿಚಾರವು ಚುನಾವಣೆಯ ಪ್ರಮುಖ ವಿಷಯವಾಗುತ್ತದೆ. 

ಎತ್ತಿನಹೊಳೆ ಮತ್ತು ಎನ್.ಎಚ್.ವ್ಯಾಲಿ ನೀರಾವರಿ ಯೋಜನೆಯ ವ್ಯಾಪ್ತಿಗೆ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಒಳಪಟ್ಟಿದೆ. ನೀರಾವರಿ ಪ್ರತಿ ಚುನಾವಣೆಯಲ್ಲಿ ಚರ್ಚೆಯ ವಿಷಯವಾಗುತ್ತದೆಯೇ ಹೊರತು ‌ಯೋಜನೆಗಳು ಕಾರ್ಯಗತವಾಗುವಲ್ಲಿ ಆಮೆಗತಿಯ ನಡಿಗೆ ಇದೆ.

ADVERTISEMENT

ಬಯಲು ಸೀಮೆಗೆ ಶಾಶ್ವತ ನೀರಾವರಿ ಕಲ್ಪಿಸುತ್ತೇವೆ ಎನ್ನುವ ಮಾತುಗಳು ಈ ಬಾರಿಯ ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಮತ್ತೊಮ್ಮೆ ಜೋರಾಗಿ ಕೇಳುತ್ತಿವೆ. ರಾಜಕಾರಣಿಗಳ ಮಾತಿನಲ್ಲಿ ನೀರಿನ ಹೊಳೆ ಹರಿಯುತ್ತಿದೆ.

2014ರ ಲೋಕಸಭೆ ಚುನಾವಣೆ ಸಮಯದಲ್ಲಿ ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಯೋಜನೆಯ ರೂವಾರಿ ಎನಿಸಿದ್ದ ಎಂ.ವೀರಪ್ಪ ಮೊಯಿಲಿ ಅವರ ಇಂದಿನ ಸನ್ನಿವೇಶ ನೋಡಿದರೆ ಅವರು ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದಂತೆ ಕಾಣುತ್ತಿದೆ. 

ಎರಡು ಬಾರಿ ಈ ಕ್ಷೇತ್ರದಲ್ಲಿ ಗೆದ್ದಿರುವ ಅವರು ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಹೀಗೆ ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಮೊಯಿಲಿ ಯುಗ ಅಂತ್ಯವಾಗುತ್ತ ಬಂದರೂ ಎತ್ತಿನಹೊಳೆ ನೀರು ಮಾತ್ರ ಬರಲೇ ಇಲ್ಲ. ಎತ್ತಿನಹೊಳೆ ಹೆಸರಿನಲ್ಲಿ ಎರಡು ಚುನಾವಣೆಗಳನ್ನು ಅವರು ಪೂರ್ಣಗೊಳಿಸಿದ್ದಾರೆ. 

ಈಗ ಮತ್ತೆ ಈ ಚುನಾವಣೆಯಲ್ಲಿಯೂ ರಾಜಕೀಯ ನಾಯಕರು ಎತ್ತಿನಹೊಳೆ ನೀರು ಹರಿಸುವ ಭರವಸೆ ನೀಡುತ್ತಿದ್ದಾರೆ.  

ಮೂರನೇ ಹಂತದ ಶುದ್ಧೀಕರಣ: ಹೆಬ್ಬಾಳ–ನಾಗವಾರ ಕಣಿವೆ (ಎಚ್‌.ಎನ್.ವ್ಯಾಲಿ) ನೀರಾವರಿ ಯೋಜನೆ ಅಡಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಯ 65 ಕೆರೆಗಳಿಗೆ ಅರೆ ಸಂಸ್ಕರಿತ ತ್ಯಾಜ್ಯ ನೀರನ್ನು ಹರಿಸಲಾಗುತ್ತಿದೆ. ಎರಡು ಬಾರಿ ಸಂಸ್ಕರಿಸಿ ಕೆರೆಗಳಿಗೆ ಹರಿಸುತ್ತಿರುವ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಬೇಕು ಎಂದು ನೀರಾವರಿ ಹೋರಾಟಗಾರರು  ಆಗ್ರಹಿಸುತ್ತಿದ್ದಾರೆ. 

ಬಸವರಾಜ ಬೊಮ್ಮಾಯಿ ಅವರ ಕೊನೆಯ ಬಜೆಟ್‌ನಲ್ಲಿ ಕೊಳಚೆ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಿ ಹರಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ನಂತರ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿರುವ ಬೋಸರಾಜು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ, ‘ಮೂರು ಹಂತದ ಶುದ್ಧೀಕರಣದ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುವೆ’ ಎಂದರು. ಆದರೆ ನಂತರದ ದಿನಗಳಲ್ಲಿ ಯಾವುದೇ ಪ್ರಕ್ರಿಯೆಗಳು ನಡೆಯಲಿಲ್ಲ. 

ಆದರೆ ಈಗ ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಮೂರನೇ ಹಂತದ ಶುದ್ಧೀಕರಣದ ಬಗ್ಗೆ ರಾಜಕೀಯ ನಾಯಕರು ಮಾತನಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ‘ಮೂರು ಹಂತದಲ್ಲಿ ಶುದ್ಧೀಕರಣ ಮಾಡುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಮಾತುಕತೆ ನಡೆಸುತ್ತೇವೆ’ ಎಂದು ಮತ್ತೆ ಭರವಸೆ ನೀಡಿದ್ದಾರೆ. 

ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಯುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ನೀರಾವರಿ ವಿಚಾರ ಚರ್ಚೆಗೆ ಬರುತ್ತದೆ. ಅದರಂತೆ ಈ ಬಾರಿಯೂ ಮತ್ತೊಂದು ಸಲ ಚರ್ಚೆ ನಡೆದಿದೆಯಷ್ಟೇ ಎನ್ನುವುದು ನೀರಾವರಿ ಹೋರಾಟಗಾರರ ಅಭಿಮತ.

ಎಚ್‌.ಎನ್.ವ್ಯಾಲಿ; ಮೂರನೇ ಹಂತದ ಶುದ್ಧೀಕರಣದ ಭರವಸೆ 2014ರ ಚುನಾವಣೆ ಸಮಯದಲ್ಲಿ ಎತ್ತಿನಹೊಳೆಗೆ ಅಡಿಗಲ್ಲು

ನೀರಿಗಾಗಿ ರಾಜೀನಾಮೆ

ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಕ್ರಮವಹಿಸುವೆ. ಈ ವಿಚಾರದಲ್ಲಿ ನಾನು ಯಶಸ್ಸು ಕಾಣದಿದ್ದರೆ  ಮುಂದಿನ ಐದು ವರ್ಷಗಳ ನಂತರ ರಾಜಕೀಯದಲ್ಲಿ ಮುಂದುವರಿಯುವುದಿಲ್ಲ. ಮುಂದಿನ ಐದು ವರ್ಷಗಳ ನಂತರ ರಾಜಕೀಯ ನಿವೃತ್ತಿ ಪಡೆಯುವೆ.

- ಎಚ್‌.ಡಿ.ಕುಮಾರಸ್ವಾಮಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ

ಬಯಲು ಸೀಮೆ;

ನೀರಿಗೆ ಬಲ ಸಂಸದನಾದ ಬಳಿಕ ಬಯಲುಸೀಮೆ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ತರುತ್ತೇನೆ. ಇಲ್ಲಿ ಹಿಂದೆ ಸಂಸದರಾಗಿದ್ದ ವೀರಪ್ಪ ಮೊಯಿಲಿ ನೀರು ತರುತ್ತೇನೆ ಎಂದು ಹದಿನೈದು ವರ್ಷಗಳಿಂದ ಹೇಳುತ್ತಲೇ ಇದ್ದರು. ಹಿಂದಿನ ಬಿಜೆಪಿ ಸರ್ಕಾರ ಎತ್ತಿನಹೊಳೆ ಯೋಜನೆಗೆ ₹ 4 ಸಾವಿರ ಕೋಟಿ ನೀಡಿತ್ತು. ಬಯಲು ಸೀಮೆಯ ನೀರಾವರಿ ಯೋಜನೆಗಳಿಗೆ ಬಲ ತುಂಬುವ ಉದ್ದೇಶದಿಂದ ಮತದಾರರು ನನ್ನ ಬೆಂಬಲಿಸಬೇಕು.

-ಡಾ.ಕೆ.ಸುಧಾಕರ್ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ

ನೀರಾವರಿಗೆ ಆದ್ಯತೆ

ಎತ್ತಿನಹೊಳೆ ಯೋಜನೆಯ ನೀರನ್ನು ಬಯಲು ಸೀಮೆಗೆ ಕಾಂಗ್ರೆಸ್ ಸರ್ಕಾರ ಹರಿಸಲಿದೆ. ಎಚ್‌.ಎನ್.ವ್ಯಾಲಿ ನೀರಿನ ಶುದ್ಧೀಕರಣದ ವಿಚಾರವಾಗಿಯೂ ಸಹ ಕ್ರಮವಹಿಸಲಾಗುವುದು. ಸಂಸದನಾಗಿ ಆಯ್ಕೆಯಾದರೆ ನೀರಾವರಿ ಯೋಜನೆಗಳ ಕಾರ್ಯಗತಕ್ಕೆ ಪ್ರಮುಖವಾಗಿ ಆದ್ಯತೆ ನೀಡುವೆ.

-ರಕ್ಷಾ ರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.