ಖಾನಾಪುರ: ‘ಪ್ರಧಾನಿ ನರೇಂದ್ರ ಮೋದಿ ಅವರು ರಾಮಸೇನೆ ಮುನ್ನಡೆಸುತ್ತಿದ್ದಾರೆ. ಆದರೆ ‘ಇಂಡಿ’ ಒಕ್ಕೂಟ ಹತ್ತು ತಲೆಯ ರಾವಣ ಸೇನೆಯನ್ನು ಒಳಗೊಂಡಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಟೀಕಿಸಿದರು.
ಉತ್ತರಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರವಾಗಿ ಖಾನಾಪುರದಲ್ಲಿ ಗುರುವಾರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ದೇಶಕ್ಕಾಗಿ ತಮ್ಮ ಜೀವನ ಸಮರ್ಪಿಸಿದ ಮೋದಿ ಎಲ್ಲಿ? ಮತ್ತು ವಿದೇಶಗಳಲ್ಲಿ ಭಾರತ ಮಾನ ಹಾನಿ ಮಾಡುವ ಕಾಂಗ್ರೆಸ್ ‘ಯುವರಾಜ’ ಎಲ್ಲಿ’ ಎಂದೂ ಅವರು ರಾಹುಲ್ ಗಾಂಧಿ ಹೆಸರು ಹೇಳದೆ ಲೇವಡಿ ಮಾಡಿದರು.
‘ನರೇಂದ್ರ ಮೋದಿ ಕಳೆದ 10 ವರ್ಷಗಳಲ್ಲಿ ದೇಶವನ್ನು ಪ್ರಗತಿಪಥದತ್ತ ಮುನ್ನಡೆಸಿದ್ದಾರೆ. ಜನರಿಗೆ ಭ್ರಷ್ಟರಹಿತ ಆಡಳಿತ ನೀಡಿದ್ದಾರೆ. ದೇಶದ ಬಗ್ಗೆ ಅವರ ಅಜೆಂಡಾಗಳು ವಿಶ್ವಮಾನ್ಯವಾಗಿವೆ. ಯಾವುದೇ ಅಜೆಂಡಾ ಇಲ್ಲದ ‘ಇಂಡಿ’ ಮೈತ್ರಿ ಕೂಟದಿಂದ ಮೋದಿ ಅವರನ್ನು ಸೋಲಿಸುವುದು ಅಸಾಧ್ಯ’ ಎಂದರು.
‘ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಮಾಡದಷ್ಟು ಅಭಿವೃದ್ಧಿ ಕೆಲಸಗಳನ್ನು ಮೋದಿ ಸರ್ಕಾರ ಹತ್ತೇ ವರ್ಷಗಳಲ್ಲಿ ಮಾಡಿದೆ. ಕಾಂಗ್ರೆಸ್ ಅಧಿಕಾರವಧಿಯಲ್ಲಿ ಹಗರಣಗಳು, ಭ್ರಷ್ಟಾಚಾರ ಮತ್ತು ಬಾಂಬ್ ಸ್ಫೋಟ ಸಾಮಾನ್ಯವಾಗಿದ್ದವು. ಆದರೆ, ಇಂದು ದೇಶ ಅಭಿವೃದ್ಧಿಯತ್ತ ಹೆಜ್ಜೆಹಾಕುತ್ತಿದೆ’ ಎಂದರು.
‘ಮೋದಿ ಅವರ ರ್‍ಯಾಲಿಗಳು ಅಭೂತಪೂರ್ವ ಸ್ಪಂದನೆಗೆ ಸಾಕ್ಷಿಯಾಗುತ್ತಿವೆ. ದೇಶಭಕ್ತಿಯ ಉತ್ಸಾಹ ಹರಡುತ್ತಿವೆ. ಮೋದಿ ಅವರು ದೇಶಕ್ಕಾಗಿ ಅಭಿವೃದ್ಧಿ ಯೋಜನೆಗಳು ಮತ್ತು ಅಜೆಂಡಾ ಹೊಂದಿದ್ದಾರೆ. ಆದರೆ, ‘ಇಂಡಿ’ ಮೈತ್ರಿಕೂಟದ ನಾಯಕರು ಮೋದಿ ಅವರನ್ನು ಸೋಲಿಸಬೇಕೆಂಬ ಏಕೈಕ ಉದ್ದೇಶ ಹೊಂದಿದ್ದಾರೆ. ಅದು ಕೈಗೂಗಡದು’ ಎಂದರು.
ಶಾಸಕ ವಿಠ್ಠಲ ಹಲಗೇಕರ, ಮಾಜಿ ಸಚಿವ ಪ್ರಮೋದ ಮಧ್ವರಾಜ, ಮಾಜಿ ಶಾಸಕರಾದ ಅರವಿಂದ ಪಾಟೀಲ, ಸುನೀಲ ಹೆಗಡೆ, ಜೆಡಿಎಸ್ ಮುಖಂಡ ನಾಸೀರ್ ಬಾಗವಾನ, ಮಹೇಶ ಮೋಹಿತೆ, ಸಂಜಯ ಕುಬಲ, ಪ್ರಮೋದ ಕೊಚೇರಿ, ಧನಶ್ರೀ ದೇಸಾಯಿ, ಜ್ಯೋತಿಬಾ ರೇಮಾಣಿ, ಅಪ್ಪಯ್ಯ ಕೋಡೊಳಿ, ಬಾಬುರಾವ್ ದೇಸಾಯಿ, ಪಂಡಿತ ಓಗಲೆ, ಚೇತನ ಮನೇರಿಕರ, ಸದಾನಂದ ಪಾಟೀಲ, ಸುರೇಶ ದೇಸಾಯಿ, ಸುಂದರ ಕುಲಕರ್ಣಿ ಇದ್ದರು.
‘ಕಾಂಗ್ರೆಸ್ ಸುಡುವ ಮನೆ ಎಂದಿದ್ದು ಅಂಬೇಡ್ಕರ್’
‘ಮೋದಿ ಅವರು ಸಂವಿಧಾನ ಬದಲಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ನವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇಂತಹ ಅಪಪ್ರಚಾರಕ್ಕೆ ಜನರು ಬಲಿಯಾಗಬಾರದು. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಸೋಲಿಸಿದ ಕಾಂಗ್ರೆಸ್, ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ವಿರೋಧಿಸಿತ್ತು. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಸುಡುವ ಮನೆ ಎಂದು ಅಂಬೇಡ್ಕರ್ ಟೀಕಿಸಿದ್ದರು’ ಎಂದು ಏಕನಾಥ ಶಿಂದೆ ಹೇಳಿದರು.
ಮಾಜಿ ಶಾಸಕ ಸಂಜಯ ಪಾಟೀಲ, ‘ತಮ್ಮನ್ನು ಕಿತ್ತೂರು ರಾಣಿ ಚನ್ನಮ್ಮ ಎಂದು ಕರೆದುಕೊಳ್ಳುವ ಜಿಲ್ಲೆಯ ಸಚಿವೆ, ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ನಂತರ ಬಾಯಿ ಮುಚ್ಚಿಕೊಂಡಿದ್ದಾರೆ. ಇಂತಹ ವಿಕೃತ ಮನಸ್ಥಿತಿಯ ನಾಯಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು’ ಎಂದು ಕೋರಿದರು.
ಹತ್ತಿರ ಸುಳಿಯದ ಎಂಇಎಸ್
ಉತ್ತರಕನ್ನಡ ಕ್ಷೇತ್ರದಲ್ಲಿ ಎಂಇಎಸ್ ಅಭ್ಯರ್ಥಿ ಕೂಡ ಕಣದಲ್ಲಿದ್ದಾರೆ. ಆದರೆ, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಗುರುವಾರ ಬಿಜೆಪಿ ಪರವಾಗಿ ಬಹಿರಂಗ ಪ್ರಚಾರ ಮಾಡಿದರು.
ಒಂದುವೇಳೆ ಏಕನಾಥ ಅವರು ಬಿಜೆಪಿ ಪರ ಪ್ರಚಾರಕ್ಕೆ ಬಂದರೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಎಂಇಎಸ್ ಮುಖಂಡರು ಹೇಳಿಕೆ ನೀಡಿದ್ದರು. ಆದರೆ, ಗುರುವಾರ ಯಾರೂ ಹತ್ತಿರ ಸುಳಿಯಲಿಲ್ಲ.
ಗಡಿ ತಂಟೆ ವಿಚಾರದಲ್ಲಿ ಯಾವಾಗಲೂ ಎಂಇಎಸ್‌ಗೆ ಬೆಂಬಲ ನೀಡಿದ ಏಕನಾಥ ಶಿಂದೆ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಪರವಾಗಿ ನಿಂತಿದ್ದು ಎಂಇಎಸ್ ನಾಯಕರನ್ನು ಮುಜುಗರಕ್ಕೆ ತಳ್ಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.