ತುಮಕೂರು: ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಭಾನುವಾರ ಬಿಜೆಪಿ ಮುಖಂಡ ಜೆ.ಸಿ.ಮಾಧುಸ್ವಾಮಿ ಅವರನ್ನು ಭೇಟಿ ಮಾಡಿ, ಬೆಂಬಲ ಕೋರಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ.ಪುರದಲ್ಲಿರುವ ಮಾಧುಸ್ವಾಮಿ ಅವರ ಮನೆಗೆ ತೆರಳಿದ ಮುದ್ದಹನುಮೇಗೌಡ ಅವರು ಕೆಲಹೊತ್ತು ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಮಾಧುಸ್ವಾಮಿ, ‘ಮುದ್ದಹನುಮೇಗೌಡ ನನ್ನ ಹಳೆಯ ಸ್ನೇಹಿತರು. ಇದೊಂದು ಸೌಜನ್ಯದ ಭೇಟಿ. ಅವರು ಒಬ್ಬ ಅಭ್ಯರ್ಥಿಯಾಗಿ ನಮ್ಮ ಮನೆಗೆ ಬಂದಿದ್ದಾರೆ. ಅಭ್ಯರ್ಥಿಯಾದವರು ಬೆಂಬಲ ಕೇಳುವುದು ಸಹಜ’ ಎಂದರು.
‘ಇಬ್ಬರು ಒಟ್ಟಿಗೆ ಶಾಸಕರಾಗಿ ಕೆಲಸ ಮಾಡಿದ್ದೇವೆ. ಸ್ನೇಹಿತರು ಅಂತ ಮನೆಗೆ ಬಂದಾಗ ವಿಶೇಷ ಅರ್ಥ ಕಲ್ಪಿಸುವುದು ಬೇಡ. ನಾವು ಬೇರೆ ಪಕ್ಷದಲ್ಲಿ ಇದ್ದೇವೆ ಬೆಂಬಲ ನೀಡಲು ಆಗುತ್ತಾ’ ಎಂದು ಪ್ರಶ್ನಿಸಿದರು.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಧುಸ್ವಾಮಿ ಅವರು ವಿ.ಸೋಮಣ್ಣಗೆ ಟಿಕೆಟ್ ಘೋಷಣೆಯಾದ ನಂತರ ಅಸಮಾಧಾನ ವ್ಯಕ್ತಪಡಿಸಿ, ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಸೋಮಣ್ಣ ನಾಮಪತ್ರ ಸಲ್ಲಿಸುವ ವೇಳೆಯೂ ಕಾಣಿಸಿಕೊಂಡಿರಲಿಲ್ಲ. ಪ್ರಚಾರದಿಂದಲೂ ದೂರ ಉಳಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.