ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿದಿದ್ದು ಇದೀಗ ಸಾರ್ವಜನಿಕ ವಲಯದಲ್ಲಿ ಸೋಲು ಗೆಲುವಿನ ಲೆಕ್ಕಾಚಾರಗಳು ಆರಂಭವಾಗಿವೆ.
ಬಿಸಿಲಿನ ಧಗೆಯನ್ನೂ ಮೀರಿಸುವಂತೆ ರಾಜಕೀಯ ಚರ್ಚೆಗಳು ನಡೆಯುತ್ತಿವೆ. ಹೋಟೆಲ್, ಉದ್ಯಾನ, ಬಸ್ ನಿಲ್ದಾಣ, ಮದುವೆ ಮನೆ, ಸಾರ್ವಜನಿಕ ಸಮಾರಂಭ ಧಾರ್ಮಿಕ ಉತ್ಸವಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಚರ್ಚೆಗಳು ಜೋರಾಗಿ ನಡೆಯುತ್ತಿವೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಜಯಪ್ರಕಾಶ್ ಹೆಗ್ಡೆ ಸೇರಿದಂತೆ 10 ಮಂದಿ ಸ್ಪರ್ಧಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ನಡೆದಿರುವುದರಿಂದ ಮತದಾರರು ಇಬ್ಬರಲ್ಲಿ ಯಾರು ಗೆಲ್ಲಬಹುದು ಎಂಬ ಚರ್ಚೆಯಲ್ಲಿ ನಿರತರಾಗಿದ್ದಾರೆ.
ಯಾವ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಲೀಡ್ ಬರಬಹುದು ? ಯಾರಿಗೆ ಹಿನ್ನೆಡೆಯಾಗಬಹುದು, ಗೆಲುವಿಗೆ ಯಾವ ಅಂಶಗಳು ಕಾರಣವಾಗಬಹುದು, ಸೋಲಿಗೆ ಏನು ಕಾರಣ, ಯಾವ ಸಮುದಾಯ ಯಾರಿಗೆ ಮತ ಹಾಕಿರಬಹುದು, ಹಿಂದಿನ ಚುನಾವಣೆಗಳಂತೆ ಈ ಬಾರಿಯೂ ಹಿಂದುತ್ವ ಪ್ರಭಾವ ಬೀರಲಿದೆಯೇ ಅಥವಾ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಗೆ ಮತದಾರ ಮತ ಹಾಕಿರಬಹುದೇ ಎಂಬ ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ.
ಸೋಲು ಗೆಲುವಿನ ಲೆಕ್ಕಾಚಾರಗಳು ಸದ್ದು ಮಾಡಲು ಕಾರಣಗಳೂ ಇವೆ. 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರನ್ನು 3,49,599 ಮತಗಳ ಅಂತರದಿಂದ ಮಣಿಸಿದ್ದರು. ಹಿಂದುತ್ವ ಹಾಗೂ ಮೋದಿ ಅಲೆ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಆದರೆ, ಈ ಬಾರಿಯ ಚುನಾವಣೆಯನ್ನು ಮತದಾರರು ವಿಭಿನ್ನವಾಗಿ ವಿಶ್ಲೇಷಿಸುತ್ತಿದ್ದು ಇಬ್ಬರಲ್ಲಿ ಯಾರೇ ಗೆದ್ದರೂ ಗೆಲುವಿನ ಅಂತರ ಹಿಂದಿನ ಚುನಾವಣೆಯಷ್ಟು ಇರಲಾರದು, ಇಬ್ಬರ ಮಧ್ಯೆ ಪೈಪೋಟಿಯಂತೂ ಇರುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕೆ.ಜಯಪ್ರಕಾಶ್ ಹೆಗ್ಡೆ ಅವರ ಬಗ್ಗೆ ಮತದಾರರಲ್ಲಿ ತಕರಾರು ಕಾಣುತ್ತಿಲ್ಲ. ಇಬ್ಬರ ಬಗ್ಗೆಯೂ ಉತ್ತಮ ಅಭಿಪ್ರಾಯ ಹೊಂದಿರುವುದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಮತದಾರರು ಯಾರ ಕಡೆಗೆ ವಾಲಿದ್ದಾರೆ ಎಂಬುದು ಕುತೂಹಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.