ADVERTISEMENT

LS Polls | ಬಿಜೆಪಿಯಲ್ಲಿನ ಬಂಡಾಯ ನಾಲ್ಕೈದು ದಿನದಲ್ಲಿ ಶಮನ: ವಿಜಯೇಂದ್ರ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 7:39 IST
Last Updated 27 ಮಾರ್ಚ್ 2024, 7:39 IST
   

ಮೈಸೂರು: ರಾಜ್ಯ ಬಿಜೆಪಿಯಲ್ಲಿನ ಸಮಸ್ಯೆಗಳು ಇನ್ನು ನಾಲ್ಕೈದು ದಿನಗಳಲ್ಲಿ ಬಗೆಹರಿಯಲಿದ್ದು, ಕರ್ನಾಟಕದ 28 ಕ್ಷೇತ್ರಗಳನ್ನೂ ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಚಾಮುಂಡಿ ಬೆಟ್ಟದಲ್ಲಿ ಬುಧವಾರ ಪೂಜೆ ಸಲ್ಲಿಸಿದ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಪಕ್ಷದ ಟಿಕೆಟ್‌ಗೆ ಎಲ್ಲೆಡೆ ಪೈಪೋಟಿ ಹೆಚ್ಚಿದ್ದು, ಒಂದಷ್ಟು ಗೊಂದಲ ಆಗಿತ್ತು. ಎಲ್ಲವನ್ನೂ ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಬೆಳಗಾವಿ ಹಾಗೂ ದಾವಣಗೆರೆಗೆ ಬಿ.ಎಸ್. ಯಡಿಯೂರಪ್ಪ ಭೇಟಿ ಕೊಟ್ಟಿದ್ದು, ಅಲ್ಲಿನ ಸಮಸ್ಯೆ ಬಗೆಹರಿಸಿದ್ದಾರೆ. ಈಶ್ವರಪ್ಪ ಅವರ ಸಮಸ್ಯೆ ಸಹ ಬಗೆಹರಿಯಲಿದೆ ಎಂದರು.

ಯಾರ ಮಾತೂ ಕೇಳಲ್ಲ: ‘ಬಿಜೆಪಿ ಹೈಕಮಾಂಡ್ ಬಲಿಷ್ಠವಾಗಿದ್ದು, ಕೇವಲ ಯಡಿಯೂರಪ್ಪ, ವಿಜಯೇಂದ್ರ ಹೇಳಿದ್ದನ್ನು ಕೇಳಿ ತೀರ್ಮಾನಿಸುವಂತಹ ನಾಯಕತ್ವ ನಮ್ಮದಲ್ಲ. ಮೋದಿ, ನಡ್ಡಾ, ಅಮಿತ್‌ ಶಾ ಸಮ್ಮುಖದಲ್ಲಿ ಎಲ್ಲ ತೀರ್ಮಾನ ಆಗುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ನಾವೆಲ್ಲ ಒಂದಾಗಿಯೇ ಚುನಾವಣೆ ಎದುರಿಸಲಿದ್ದೇವೆ’ ಎಂದರು.

ADVERTISEMENT

ರಾಜ್ಯದಲ್ಲಿ 18–20 ಕ್ಷೇತ್ರದಲ್ಲಿ ಕಾಂಗ್ರೆಸ್‌ ತನ್ನ ಸಚಿವರನ್ನು ಕಣಕ್ಕೆ ಇಳಿಸಲು ತೀರ್ಮಾನಿಸಿತ್ತು. ಆದರೆ ಯಾವುದೇ ಸಚಿವ ಸ್ಪರ್ಧೆಗೆ ಧೈರ್ಯ ತೋರಲಿಲ್ಲ. ಮೋದಿ ಅಲೆಯ ಭಯವೇ ಇದಕ್ಕೆ ಕಾರಣ ಎಂದು ದೂರಿದರು. ‘ಬಿಜೆಪಿ–ಜೆಡಿಎಸ್ ಮೈತ್ರಿ ಯಾರಿಗೆ ಪ್ಲಸ್ ಆಗಲಿದೆ ಎಂದು ರಾಜ್ಯದ ಜನತೆಯೇ ಉತ್ತರ ನೀಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಮುಖಂಡರು ಭಯಭೀತರಾಗಿದ್ದಾರೆ. ಭ್ರಮೆಯಲ್ಲಿದ್ದ ಮುಖ್ಯಮಂತ್ರಿ ಹಾಗೂ ಅವರ ಮಂತ್ರಿಮಂಡಲಕ್ಕೆ ಈಗ ಜ್ಞಾನೋದಯ ಆಗಿದೆ. ರಾಜ್ಯ ಸರ್ಕಾರ ಶೂನ್ಯ ಸಾಧನೆ ಮಾಡಿದೆ. ಕಾಂಗ್ರೆಸ್ ಸರ್ಕಾರ ಅಲ್ಪ ಅವಧಿಯಲ್ಲೇ ತನ್ನ ಜನಪ್ರಿಯತೆ ಕಳೆದುಕೊಂಡಿದೆ’ ಎಂದರು.

ಇದೇ ಸಂದರ್ಭ ವಿಜಯೇಂದ್ರ ಬೆಟ್ಟದಲ್ಲಿ ಗೋಪೂಜೆ ನೆರವೇರಿಸಿ, ರೈತರಿಗೆ ನೇಗಿಲಿನ ಮಾದರಿಗಳನ್ನು ವಿತರಿಸಿದರು. ಬಿಜೆಪಿಯ ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಬಾಲರಾಜ್‌, ಪಕ್ಷದ ಮುಖಂಡರಾದ ಎಸ್‌.ಎ. ರಾಮದಾಸ್‌, ಎನ್‌. ಮಹೇಶ್‌ ಎಲ್‌.ಆರ್‌. ಮಹದೇವಸ್ವಾಮಿ, ಎಲ್‌. ನಾಗೇಂದ್ರ ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.