ADVERTISEMENT

ಬಾಗಲಕೋಟೆ: ಗೆಲುವಿನ ನಡುವೆ ಬಿಜೆಪಿಗೆ ಎಚ್ಚರಿಕೆ

ಮುನ್ನಡೆ ಕುಸಿತ: ನರಗುಂದ ಕ್ಷೇತ್ರದಲ್ಲಿ ಗದ್ದಿಗೌಡರಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 4:30 IST
Last Updated 6 ಜೂನ್ 2024, 4:30 IST
<div class="paragraphs"><p>ಪಿ.ಸಿ. ಗದ್ದಿಗೌಡರ</p></div>

ಪಿ.ಸಿ. ಗದ್ದಿಗೌಡರ

   

ಬಾಗಲಕೋಟೆ: ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಐದನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಆದರೆ ಗೆಲುವಿನ ನಡುವೆಯೂ ಮುನ್ನಡೆ ಪ್ರಮಾಣ ಕುಸಿದಿರುವುದು ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ.

ಗದ್ದಿಗೌಡರ ಎದುರಿಸಿರುವ ಹಿಂದಿನ ನಾಲ್ಕು ಚುನಾವಣೆಗಳಲ್ಲಿ ಮೂರು ಬಾರಿ ಅವರ ಲೀಡ್‌ ಲಕ್ಷ ಮತಗಳನ್ನು ದಾಟಿತ್ತು. 2013ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಗೌಡರು 1.16 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು.

ADVERTISEMENT

2019ರ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ಲೀಡ್‌ ಪಡೆದಿದ್ದರು. ಈ ಬಾರಿ ನರಗುಂದ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಬಾದಾಮಿ ಕ್ಷೇತ್ರ ಹೊರತುಪಡಿಸಿದರೆ, ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಲೀಡ್‌ ಪ್ರಮಾಣ ತೀವ್ರವಾಗಿ ಕುಸಿದಿದೆ.

ಜಿಲ್ಲೆಯ ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮಾಜಿ ಶಾಸಕರು ಗದ್ದಿಗೌಡರ ಪರವಾಗಿ ತೀವ್ರವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿಲ್ಲ. ಸ್ಪರ್ಧೆ, ಬೇರೆ ಕ್ಷೇತ್ರಗಳ ಉಸ್ತುವಾರಿ ನೀಡಲಾಗಿದೆ ಎಂದು ಪ್ರಚಾರದಿಂದ ದೂರ ಉಳಿಯುವ ಯತ್ನ ಮಾಡಿದರು. ಕಾಟಾಚಾರಕ್ಕೆ ಎಂಬಂತೆ ಪ್ರಚಾರದಲ್ಲಿ ತೊಡಗಿಸಿಕೊಂಡ ಪರಿಣಾಮ ಬಿಜೆಪಿ ಮುನ್ನಡೆ ಕುಸಿದಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ, 2024ರ ಚುನಾವಣೆಯಲ್ಲಿ ಬಾದಾಮಿಯಲ್ಲಿ ಮಾತ್ರ ಲೀಡ್‌ ಪ್ರಮಾಣ 507 ಮತಗಳಷ್ಟು ಹೆಚ್ಚಿದೆ. ನರಗುಂದ ಕ್ಷೇತ್ರದಲ್ಲಿ ಕಳೆದ ಬಾರಿ 18 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಬಿಜೆಪಿ ಸಿಕ್ಕಿತ್ತು. ಈ ಬಾರಿ ಕಾಂಗ್ರೆಸ್ಸಿಗೆ 925 ಮತಗಳ ಲೀಡ್ ಸಿಕ್ಕಿದೆ.

ಗದ್ದಿಗೌಡರ ಸರಳ ಸ್ವಭಾವ, ಹೊಂದಾಣಿಕೆ ಮನೋಭಾವದವರಾದರೂ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪೂರ್ಣ ಪ್ರಮಾಣದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂಬ ಆರೋಪ ಶಾಸಕರದ್ದಾಗಿದೆ. ಇದರಿಂದಾಗಿ ಕೆಲವರು ಗದ್ದಿಗೌಡರ ಚುನಾವಣೆಯಲ್ಲಿಯೂ ಅಷ್ಟಕಷ್ಟೇ ಪ್ರಚಾರ ನಡೆಸಿದ್ದರು.

10 ವರ್ಷಗಳಿಂದ ಬಿಜೆಪಿಯದ್ದೇ ಸರ್ಕಾರವಿದ್ದರೂ, ಕ್ಷೇತ್ರಕ್ಕೆ ಯಾವುದೇ ವಿಶೇಷ ಅನುದಾನಗಳಿಲ್ಲ ಎಂಬ ದೂರು ವಿರೋಧ ಪಕ್ಷಗಳಿಂದ ಈ ಚುನಾವಣೆಯಲ್ಲಿ ಜೋರಾಗಿ ಕೇಳಿ ಬಂದಿತ್ತು. ಇದನ್ನು ಖಾಸಗಿಯಾಗಿ ಹಲವು ಬಿಜೆಪಿ ಮುಖಂಡರೂ ಒಪ್ಪಿಕೊಳ್ಳುತ್ತಾರೆ, ಜತೆಗೆ ‘ಗದ್ದಿಗೌಡರ ತಾವು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುವುದೇ ಇಲ್ಲ. ಅವುಗಳ ಬಗ್ಗೆ ಆಗಾಗ ಹೇಳಬೇಕು’ ಎನ್ನುತ್ತಾರೆ.

ಪಕ್ಷ ಸಂಘಟನೆಗಾಗಿ ಸಭೆಗಳನ್ನು ನಡೆಸಿದ್ದೂ ಕಡಿಮೆ. ಪಕ್ಷ ಅಥವಾ ಮುಖಂಡರ ಸಭೆಯಲ್ಲಿ ಪಾಲ್ಗೊಳ್ಳುವುದು ಬಿಟ್ಟರೆ, ಅವರೇ ಸಭೆಗಳನ್ನು ಆಯೋಜನೆ ಮಾಡುವುದಿಲ್ಲ ಎಂಬ ದೂರಿದೆ. ಮುನ್ನಡೆ ಕಡಿಮೆಯಾಗಿರುವುದು ಎಚ್ಚರಿಕೆ ಗಂಟೆಯಾಗಿದ್ದು, ಸರಿಪಡಿಸಿಕೊಂಡು ಸಾಗಬೇಕು, ಇಲ್ಲದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.