ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗೆ ಲೀಡ್ ಕೊಡಿಸುವಲ್ಲಿ ಕಾಂಗ್ರೆಸ್ ಶಾಸಕರು ಎಡವಿದ್ದರೆ, ಜೆಡಿಎಸ್ ಶಾಸಕರು ಸಂಪೂರ್ಣ ಯಶಸ್ವಿಯಾಗಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್, ಬಂಗಾರಪೇಟೆ, ಕೋಲಾರ, ಮಾಲೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳು (ಒಟ್ಟು 8) ಬರುತ್ತವೆ.
ಈ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್‌ನ ವಿಜೇತ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ, ಕೋಲಾರ, ಮಾಲೂರು, ಚಿಂತಾಮಣಿ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಲೀಡ್ ಪಡೆದು ಮೇಲುಗೈ ಸಾಧಿಸಿದ್ದಾರೆ. ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಕೆ.ವಿ.ಗೌತಮ್ ಕೆಜಿಎಫ್‌ನಲ್ಲಿ ಮಾತ್ರ ಲೀಡ್ ಪಡೆದಿದ್ದಾರೆ.
ಮಲ್ಲೇಶ್ ಬಾಬು ಒಟ್ಟೊ 6,91,481 ಮತ ಪಡೆದು 711,388 ಮತಗಳ ಅಂತರದಿಂದ ಗೆದ್ದಿದ್ದಾರೆ. ಗೌತಮ್ ಒಟ್ಟು 6,20,093 ಮತ ಪಡೆದು ಪರಾಭವಗೊಂಡಿದ್ದಾರೆ.
2023ರ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಗೆದ್ದು, ಎಂಟು ಕ್ಷೇತ್ರಗಳಿಂದ ಒಟ್ಟು 4.71 ಲಕ್ಷ ಮತ ಪಡೆದಿತ್ತು. ಐದು ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಒಟ್ಟು 5.80 ಲಕ್ಷ ಮತ ಗಳಿಸಿತ್ತು. ಐದು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡು ಶೂನ್ಯ ಸಾಧನೆ ಮಾಡಿದ್ದ ಬಿಜೆಪಿ ಒಟ್ಟು 1.94 ಲಕ್ಷ ಮತ ಪಡೆದಿತ್ತು.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಹೈಕಮಾಂಡ್ ತಮ್ಮ ಪಕ್ಷದ ಶಾಸಕರಿಗೆ, ಮಾಜಿ ಶಾಸಕರಿಗೆ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಅಭ್ಯರ್ಥಿಗಳಿಗೆ ಲೀಡ್ ಕೊಡಿಸುವ ಜವಾಬ್ದಾರಿ ಕೊಟ್ಟಿತ್ತು. ಜೆಡಿಎಸ್‌ಗೆ ಬಿಜೆಪಿ ಮೈತ್ರಿ ಬೆಂಬಲ ಬೇರೆ ಇತ್ತು. ಹೀಗಾಗಿ, ಅವರಿಗೆಲ್ಲಾ ದೊಡ್ಡ ಸವಾಲು ಇತ್ತು.
ಕಾಂಗ್ರೆಸ್‌ನಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಮಾತ್ರ ಮುನ್ನಡೆ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 33,505 ಮತಗಳ ಮುನ್ನಡೆ ಲಭಿಸಿದೆ. ಇನ್ನು ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಶಾಸಕರಿಲ್ಲ. ಈ ಕ್ಷೇತ್ರದಲ್ಲಿ ಜೆಡಿಎಸ್ ಕೇವಲ 423 ಮತ ಮುನ್ನಡೆ ಪಡೆದಿದೆ. ಆ ನಿಟ್ಟಿನಲ್ಲಿ ಈ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ರಾಜೀವ್ ಗೌಡ ಹಾಗೂ ಪುಟ್ಟು ಆಂಜಿನಪ್ಪ ಯಶ ಕಂಡಿದ್ದಾರೆ.
ಕಾಂಗ್ರೆಸ್‌ನ ಇನ್ನುಳಿದೆಲ್ಲಾ ಶಾಸಕರು ವಿಫಲರಾಗಿದ್ದಾರೆ. ಅವರಲ್ಲಿ ಚಿಂತಾಮಣಿ ಕ್ಷೇತ್ರದ ಶಾಸಕ ಹಾಗೂ ಡಾ.ಎಂ.ಸಿ.ಸುಧಾಕರ್ ಕೂಡ ಸೇರಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ 7,250 ಮತಗಳ ಮುನ್ನಡೆ ಲಭಿಸಿದೆ. ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ ತಮ್ಮದೇ ಕ್ಷೇತ್ರದಲ್ಲಿ ಲೀಡ್ ಕೊಡಿಸಲು ಸಾಧ್ಯವಾಗಿಲ್ಲ.
ಮುಳಬಾಗಿಲು, ಬಂಗಾರಪೇಟೆ ಕ್ಷೇತ್ರದಲ್ಲಿ ಅತಿ ಹೆಚ್ಚು ಮುನ್ನಡೆ ಪಡೆದುಕೊಳ್ಳುವಲ್ಲಿ ಜೆಡಿಎಸ್‌ನ ಮಲ್ಲೇಶ್ ಬಾಬು ಯಶಸ್ವಿಯಾಗಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದರು. ಮುಳಬಾಗಿಲಿನಲ್ಲೇ ಕಾಂಗ್ರೆಸ್ ಪ್ರಚಾರಕ್ಕೆ ಚಾಲನೆ ಲಭಿಸಿತ್ತು. ಆಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಹಲವರು ಸಚಿವರು ಬಂದಿದ್ದರು. ಮಾಲೂರಿಗೆ ರಾಹುಲ್ ಗಾಂಧಿ ಬಂದು ಪ್ರಚಾರ ಮಾಡಿದ್ದರು. ಶಿಡ್ಲಘಟ್ಟ, ಚಿಂತಾಮಣಿಯಲ್ಲಿ ಮುಖ್ಯಮಂತ್ರಿ ಪ್ರಚಾರದಲ್ಲಿ ಭಾಗಿಯಾಗಿದ್ದರು.
ಮಾಲೂರಿನಲ್ಲಿ ಜೆಡಿಎಸ್‌ನ ರಾಮೇಗೌಡ, ಬಿಜೆಪಿಯ ಮಂಜುನಾಥ್ ಗೌಡ, ಪಕ್ಷೇತರ ಅಭ್ಯರ್ಥಿಯಾಗಿದ್ದ ಹೂಡಿ ವಿಜಯಕುಮಾರ್ ಜೊತೆಗೂಡಿ ಮಲ್ಲೇಶ್ ಬಾಬು ಅವರಿಗೆ ಲೀಡ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಳಬಾಗಿಲಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಬಂದು ಪ್ರಚಾರ ನಡೆಸಿದ್ದಾಗ ಲೀಡ್ ಕೊಡಿಸುವ ಭರವಸೆಯನ್ನು ಶಾಸಕ ಸಮೃದ್ಧಿ ಮಂಜುನಾಥ್ ನೀಡಿದ್ದರು. ಆ ಮಾತು ಉಳಿಸಿಕೊಂಡಿದ್ದಾರೆ. ಶಿಡ್ಲಘಟ್ಟದಲ್ಲಿ ಶಾಸಕ ರವಿಕುಮಾರ್, ಶ್ರೀನಿವಾಸಪುರದಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಬಹಳ ಪ್ರಯತ್ನ ಹಾಕಿದ್ದು, ಯಶಸ್ಸು ಕಂಡಿದ್ದಾರೆ, ಕೋಲಾರದಲ್ಲಿ ಸಿಎಂಆರ್ ಶ್ರೀನಾಥ್, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಸಚಿವ ವರ್ತೂರು ಪ್ರಕಾಶ್, ಚಿಂತಾಮಣಿಯಲ್ಲಿ ಕೃಷ್ಣಾರೆಡ್ಡಿ ಬಹಳಷ್ಟು ಓಡಾಡಿದ್ದರು. ಟಿಕೆಟ್ ತಪ್ಪಿಸಿಕೊಂಡಿದ್ದರೂ ಸಂಸದ ಎಸ್.ಮುನಿಸ್ವಾಮಿ ಕಾಂಗ್ರೆಸ್ ವಿರುದ್ಧ ಗುಡುಗುತ್ತಾ ಮೋದಿ ನಾಮ ಜಪಿಸುತ್ತಾ ಪ್ರಚಾರ ನಡೆಸಿದ್ದರು. ಅದು ಯಶಸ್ಸು ತಂದುಕೊಟ್ಟಿದೆ.
ಸಚಿವ ಕೆ.ಎಚ್.ಮುನಿಯಪ್ಪ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಇದ್ದದ್ದು ಕಾಂಗ್ರೆಸ್‌ಗೆ ಹೊಡೆತ ನೀಡಿದೆ.
ಸಚಿವ ಡಾ.ಎಂ.ಸಿ.ಸುಧಾಕರ್ ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ ಮುಳಬಾಗಿಲು, ಬಂಗಾರಪೇಟೆ ಕ್ಷೇತ್ರಲ್ಲಿ ಜೆಡಿಎಸ್‌ಗೆ ಭಾರಿ ಮುನ್ನಡೆ ಜೆಡಿಎಸ್‌ನ ಮೂವರು ಶಾಸಕರು ಮೇಲುಗೈ, ರೂಪಕಲಾ ಯಶಸ್ವಿ
2019ರಲ್ಲೂ ಏಳು ಕ್ಷೇತ್ರದಲ್ಲಿ ಬಿಜೆಪಿ ಲೀಡ್!
2019ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ಎಸ್.ಮುನಿಸ್ವಾಮಿ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಏಳರಲ್ಲಿ ಲೀಡ್ ಪಡೆದುಕೊಂಡಿದ್ದರು. ಕೆಜಿಎಫ್ ಕ್ಷೇತ್ರದಲ್ಲಿ ಮಾತ್ರ ಹಿನ್ನಡೆ ಉಂಟಾಗಿತ್ತು. ಮುಳಬಾಗಿಲು ಕ್ಷೇತ್ರದಲ್ಲಿ ಸುಮಾರು 56 ಸಾವಿರ ಮತಗಳ ಲೀಡ್ ಗಿಟ್ಟಿಸಿಕೊಂಡಿದ್ದರು. ಈ ಕ್ಷೇತ್ರದಲ್ಲಿ ಮುನಿಸ್ವಾಮಿ 104700 ಮತ ಪಡೆದಿದ್ದರೆ ಕೆ.ಎಚ್.ಮುನಿಯಪ್ಪ ಕೇವಲ 48772 ಮತ ಗಳಿಸಿದ್ದರು. ಶ್ರೀನಿವಾಸಪುರ ಹಾಗೂ ಮಾಲೂರು ಕ್ಷೇತ್ರದಲ್ಲಿ ಉತ್ತಮ ಲೀಡ್ ಬಂದಿತ್ತು. ಈ ಬಾರಿಯೂ ಅದು ಪುನರಾವರ್ತನೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.