ADVERTISEMENT

ಕೇಂದ್ರ ಕೃಷಿ ಸಚಿವನಾಗುವೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 15:37 IST
Last Updated 5 ಏಪ್ರಿಲ್ 2024, 15:37 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರಲಿದ್ದು, ಪ್ರಧಾನಿ ಮೋದಿ ಅವರು ವಿಶ್ವಾಸವಿಟ್ಟು ಅವಕಾಶ ಕೊಟ್ಟರೆ ಕೃಷಿ ಸಚಿವನಾಗುವೆ’ ಎಂದು ಮಂಡ್ಯ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

‘ಲೋಕಸಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನೀಡಿರುವ ಮೂರು ಕ್ಷೇತ್ರದ ಜತೆಗೆ ಎಲ್ಲ 28 ಕ್ಷೇತ್ರಗಳ ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಬಿಜೆಪಿ ಜತೆ ದೀರ್ಘಕಾಲ ಸಂಬಂಧ ಮುಂದುವರಿಕೆಗೆ ಆದ್ಯತೆ ನೀಡುತ್ತೇವೆ. ಮುಂದೆ ಅವರು ಜೆಡಿಎಸ್‌ ನಾಯಕರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಮೇಲೆ ಎನ್‌ಡಿಎ ಭಾಗವಾಗಿರುವುದು ಅವಲಂತವಾಗಿರುತ್ತದೆ’ ಎಂದಿದ್ದಾರೆ.

‘ನಾನು ಕೇಂದ್ರ ಸಚಿವನಾಗಬೇಕು ಎನ್ನುವುದು ಮಂಡ್ಯ ಕ್ಷೇತ್ರದ ಜನರ ಆಸೆಯಷ್ಟೇ ಅಲ್ಲ, ಬಿಜೆಪಿ–ಜೆಡಿಎಸ್‌ ಗೆಳೆಯರ ಆಶಯವೂ ಆಗಿದೆ. ರೈತ ಕುಟುಂಬದಿಂದ ಬಂದ ಕಾರಣ ಕೃಷಿ ಸಚಿವನಾದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ ಎನ್ನುವ ನಂಬಿಕೆ ಅವರಿಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಕರ್ನಾಟಕದ ಉತ್ತಮ ಭವಿಷ್ಯಕ್ಕಾಗಿ ಹೋರಾಟ ಮಾಡಲು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ರಾಜಕೀಯ ಉಳಿವಿಗಾಗಿ ಅಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ನಡುವಿನ ಮತ ವಿಭಜನೆಯ ಲಾಭವನ್ನು ಕಾಂಗ್ರೆಸ್‌ ಪಡೆಯಿತು. ಅಂತಹ ತಪ್ಪು ಮರುಕಳಿಸದಂತೆ ಲೋಕಸಭಾ ಚುನಾವಣೆಯಲ್ಲಿ ಹೆಜ್ಜೆ ಇಟ್ಟಿದ್ದೇವೆ. ಈ ಬಾರಿ ನಮ್ಮ ನಡುವೆ ಸಾಕಷ್ಟು ಸಾಮ್ಯತೆ ಏರ್ಪಟ್ಟಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.