ಬೆಂಗಳೂರು: ‘ಅತ್ಯಾಚಾರ ಸಂತ್ರಸ್ತೆ ಅಪಹರಣ’ ಪ್ರಕರಣದಲ್ಲಿ ಬಂಧಿಸಲಾಗಿರುವ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರನ್ನು ಅರಮನೆ ರಸ್ತೆಯಲ್ಲಿರುವ ಸಿಐಡಿ ಕಟ್ಟಡದ ಸೆಲ್‌ನಲ್ಲಿ ಇರಿಸಿ, ವಿಚಾರಣೆ ಮುಂದುವರಿಸಲಾಗಿದೆ.
ರೇವಣ್ಣ ಅವರನ್ನು ಶನಿವಾರ ಸಂಜೆ ಬಂಧಿಸಿದ್ದ ಎಸ್‌ಐಟಿ ಅಧಿಕಾರಿಗಳು, ತಮ್ಮ ಕಚೇರಿಗೆ ಕರೆತಂದು ಸಿಐಡಿ ಅನೆಕ್ಸ್–1 ಕಟ್ಟಡದ ನೆಲಮಹಡಿಯಲ್ಲಿರುವ ಸೆಲ್‌ನಲ್ಲಿ ಇರಿಸಿದ್ದರು.
‘ರೇವಣ್ಣ ಅವರನ್ನು ಸೆಲ್‌ನಿಂದ ಬೌರಿಂಗ್ ಆಸ್ಪತ್ರೆಗೆ ರಾತ್ರಿ ಕರೆದೊಯ್ದಾಗ, ಅವರ ಇಸಿಜಿಯಲ್ಲಿ ವ್ಯತ್ಯಾಸವಿರುವುದಾಗಿ ವೈದ್ಯರು ಹೇಳಿದ್ದರು. ಸ್ವಲ್ಪ ಹೊತ್ತಿನ ನಂತರ ಚೇತರಿಕೆ ಕಾಣಿಸಬಹುದೆಂದು ತಿಳಿಸಿದ್ದರು. ಹೀಗಾಗಿ, ಆಸ್ಪತ್ರೆಯಿಂದ ರೇವಣ್ಣ ಅವರನ್ನು ಪುನಃ ಕಚೇರಿಗೆ ಕರೆತಂದು ಸೆಲ್‌ನಲ್ಲಿ ಇರಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.
‘ಸೆಲ್‌ನಲ್ಲಿ ಮಲಗಲು ಹಾಗೂ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಇದೆ. ಕುರ್ಚಿ ಮೇಲೆಯೇ ರೇವಣ್ಣ ಅವರು ಹಲವು ಗಂಟೆ ಕುಳಿತಿದ್ದರು. ಅವರ ಇಸಿಜಿಯಲ್ಲಿ ವ್ಯತ್ಯಾಸವಿರುವುದು ಗೊತ್ತಿದ್ದರಿಂದ, ಆರಂಭದಲ್ಲಿ ಪ್ರಕರಣದ ಬಗ್ಗೆ ಅವರಿಂದ ಯಾವುದೇ ಮಾಹಿತಿ ಪಡೆಯಲಿಲ್ಲ. ಊಟ ಕೊಟ್ಟ ಬಳಿಕ, ಕೆಲ ನಿಮಿಷ ವಿಚಾರಣೆ ನಡೆಸಲಾಯಿತು.’
‘ಸೆಲ್‌ನಲ್ಲಿ ಮಲಗಿ ವಿಶ್ರಾಂತಿ ಪಡೆಯುವಂತೆ ರೇವಣ್ಣ ಅವರಿಗೆ ಹೇಳಲಾಗಿತ್ತು. ಆದರೆ, ಮಲಗಲು ಅವರು ನಿರಾಕರಿಸಿದರು. ನಸುಕಿನವರೆಗೂ ಕುರ್ಚಿ ಮೇಲೆಯೇ ಕುಳಿತು ಅರೆಬರೆ ನಿದ್ದೆ ಮಾಡಿದರು’ ಎಂದು ಮೂಲಗಳು ಹೇಳಿವೆ.
‘ನಸುಕಿನಲ್ಲಿ ಎಚ್ಚರಗೊಂಡ ಅವರು, ಕಚೇರಿಯಲ್ಲಿಯೇ ಸ್ನಾನ ಮಾಡಿದರು. ಸಿಬ್ಬಂದಿ ತಂದುಕೊಟ್ಟಿದ್ದ ಹೊಸ ಅಂಗಿ ಹಾಗೂ ಪಂಚೆ ಧರಿಸಿದರು. ಅವರು ತಿಂಡಿ ತಿಂದ ನಂತರ, ಬೆಳಿಗ್ಗೆ 10 ಗಂಟೆಯಿಂದ ಅವರ ವಿಚಾರಣೆ ಆರಂಭಿಸಲಾಯಿತು. ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಹಾಗೂ ಇತರೆ ಅಧಿಕಾರಿಗಳು, ಕೆಲ ಪ್ರಶ್ನೆಗಳನ್ನು ಕೇಳಿದರು. ಉತ್ತರ ನೀಡದ ರೇವಣ್ಣ, ‘ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಏಕೆ ಪದೇ ಪದೇ ವಿಚಾರಣೆ. ಯಾರದ್ದಾದರೂ ಒತ್ತಡ ಇದೆಯಾ’ ಎಂದು ಪ್ರಶ್ನಿಸಿದರು. ಕೆಲ ಪುರಾವೆಗಳನ್ನು ಮುಂದಿಟ್ಟು ಅಧಿಕಾರಿಗಳು ಪ್ರಶ್ನೆ ಕೇಳಿದಾಗ, ರೇವಣ್ಣ ಮೌನವಾದರು’ ಎಂದು ಮೂಲಗಳು ತಿಳಿಸಿವೆ.
‘ಬಂಧನಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಅಧಿಕಾರಿಗಳು, ರೇವಣ್ಣ ಅವರ ಫೋಟೊಗಳನ್ನು ಕ್ಲಿಕ್ಕಿಸಿಕೊಂಡರು. ಬೆರಳಚ್ಚು ಸಹ ಪಡೆದುಕೊಂಡರು. ಫೋಟೊ ತೆಗೆಯಲು ಹಾಗೂ ಸಹಿ ಮಾಡಲು ರೇವಣ್ಣ ಆರಂಭದಲ್ಲಿ ವಿರೋಧಿಸಿದರು. ‘ನಮ್ಮ ಕೆಲಸ ಮಾಡುತ್ತಿದ್ದೇವೆ. ಸಹಕರಿಸಬೇಕು. ಇಲ್ಲದಿದ್ದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದರು. ಬಳಿಕವೇ ರೇವಣ್ಣ, ಫೋಟೊ ತೆಗೆಸಿಕೊಳ್ಳಲು ಹಾಗೂ ಸಹಿ ಮಾಡಲು ಸಹಕರಿಸಿದರು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.
‘ಕೆ.ಆರ್. ನಗರ ಠಾಣೆ ಪ್ರಕರಣದ ಪುರಾವೆಗಳು ಹಾಗೂ ಬಂಧಿಸಲಾದ ಆರೋಪಿಗಳ ಬಗ್ಗೆಯೂ ರೇವಣ್ಣ ಅವರನ್ನು ವಿಚಾರಿಸಲಾಯಿತು. ‘ಪುರಾವೆಗಳು ಸುಳ್ಳು. ಬಂಧಿತ ಆರೋಪಿಯನ್ನು ನಾನು ಭೇಟಿಯಾಗದೇ ಹಲವು ವರ್ಷವಾಯಿತು’ ಎಂದು ಹೇಳಿದರು.’
‘ಸಂಜೆ 5.30 ಗಂಟೆ ಸುಮಾರಿಗೆ ರೇವಣ್ಣ ಅವರನ್ನು ಎರಡನೇ ಬಾರಿ ವೈದ್ಯಕೀಯ ಪರೀಕ್ಷೆಗೆಂದು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ, ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು, ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಯನ್ನು ಎಸ್‌ಐಟಿ ಕಸ್ಟಡಿಗೆ ಒಪ್ಪಿಸಿದ್ದಾರೆ. ರೇವಣ್ಣ ಅವರನ್ನು ಪುನಃ ಎಸ್‌ಐಟಿ ಕಚೇರಿಗೆ ಕರೆತಂದು ಸೆಲ್‌ನಲ್ಲಿ ಇರಿಸಲಾಗಿದೆ’ ಎಂದು ತಿಳಿಸಿವೆ.
ಸೆಲ್‌ನಲ್ಲೂ ಕಣ್ಣೀರು: ‘ಸೆಲ್‌ನಲ್ಲಿ ಕುಳಿತಿದ್ದ ರೇವಣ್ಣ, ‘ನನಗೆ ಏಕೆ ಈ ಶಿಕ್ಷೆ’ ಎಂಬುದಾಗಿ ಹೇಳಿ ಸಿಬ್ಬಂದಿ ಎದುರು ಕಣ್ಣೀರು ಹಾಕಿದರೆಂದು ಗೊತ್ತಾಗಿದೆ.
‘ಹೇಳಿಕೆಗೆ ಸಂತ್ರಸ್ತೆ ನಕಾರ: ಅಧಿಕಾರಿಗಳ ಮನವೊಲಿಕೆ’
ಮೈಸೂರು ಜಿಲ್ಲೆಯ ಕೆ.ಆರ್.ನಗರದಿಂದ ಅಪಹರಿಸ ಲಾಗಿದ್ದ ಸಂತ್ರಸ್ತೆಯನ್ನು ಶನಿವಾರ ರಕ್ಷಿಸಿದ್ದ ಎಸ್‌ಐಟಿ ಅಧಿಕಾರಿಗಳು, ಪ್ರಕರಣ ಸಂಬಂಧ ಅವರಿಂದ ಭಾನುವಾರ ಹೇಳಿಕೆ ದಾಖಲಿಸಿಕೊಂಡಿದ್ದಾರೆಂದು ಗೊತ್ತಾಗಿದೆ.
ಬೆಂಗಳೂರಿಗೆ ಶನಿವಾರವೂ ಸಂತ್ರಸ್ತೆಯನ್ನು ಕರೆತಂದಿದ್ದ ಅಧಿಕಾರಿಗಳು, ವೈದ್ಯರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಕೌನ್ಸೆಲಿಂಗ್‌ಗೆ ಒಳಪಡಿಸಿದ್ದರು. ಅರಮನೆ ರಸ್ತೆಯಲ್ಲಿರುವ ಕಚೇರಿಗೆ ಸಂತ್ರಸ್ತೆಯನ್ನು ಶನಿವಾರ ಸಂಜೆ ಕರೆತಂದಿದ್ದ ಅಧಿಕಾರಿಗಳು, ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡರು.
ಅಧಿಕಾರಿಗಳ ಸಾಲು ಸಾಲು ಪ್ರಶ್ನೆಗಳಿಂದ ಹೆದರಿದ್ದ ಮಹಿಳೆ, ಹೇಳಿಕೆ ನೀಡಲು ತಡವರಿಸಿದ್ದರು. ನಂತರ, ಮಹಿಳೆಯನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಪುನಃ ಮಹಿಳೆಯನ್ನು ಕಚೇರಿಗೆ ಕರೆಸಲಾಗಿತ್ತು.
‘ನಾವು ಬಡವರು. ನಮಗ್ಯಾಕೆ ಬೇಕು ಇದೆಲ್ಲಾ?’ ಎಂದು ಮಹಿಳೆ ಹೇಳಿಕೆ ನೀಡಲು ನಿರಾಕರಿಸಿದ್ದರು. ಇದರಿಂದಾಗಿ ಎಸ್‌ಐಟಿ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದರು. ನಂತರ, ಮಗ ಹಾಗೂ ಸಂಬಂಧಿಕರ ಮೂಲಕ ಸಂತ್ರಸ್ತೆಗೆ ತಿಳಿ ಹೇಳಲಾಯಿತು. ‘ನಮಗಾದ ಅನ್ಯಾಯಕ್ಕೆ ನ್ಯಾಯ ಬೇಕು. ಅದಕ್ಕಾಗಿ ಹೇಳಿಕೆ ನೀಡು’ ಎಂದು ಮಗ ಹಾಗೂ ಸಂಬಂಧಿಕರು ಧೈರ್ಯ ತುಂಬಿದರು. ಇದರಿಂದಾಗಿ, ಮಹಿಳೆ ಹೇಳಿಕೆ ನೀಡಲು ಒಪ್ಪಿದರೆಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.