ರಬಕವಿ ಬನಹಟ್ಟಿ: ‘ನನ್ನ ಮನೆ, ಊರು, ಸಮಾಜ ಮತ್ತು ನನ್ನ ದೇಶ ಅಭಿವೃದ್ಧಿಗಾಗಿ ಮೋದಿ ಪ್ರಧಾನಿಯಾಗಬೇಕು. ಅದಕ್ಕಾಗಿ ಇಲ್ಲಿನ ಲೋಕಸಭಾ ಅಭ್ಯರ್ಥಿ ಪಿ. ಸಿ. ಗದ್ದಿಗೌಡರ ಅವರನ್ನು ಗೆಲ್ಲಿಸಬೇಕು’ ಎಂದು ಬಿಜೆಪಿ ಮುಖಂಡ ಅಣ್ಣಾಮಲೈ ತಿಳಿಸಿದರು.
ಗುರುವಾರ ಸಮೀಪದ ದಾನೇಶ್ವರಿ ಕಲ್ಯಾಣ ಮಂಟಪದಲ್ಲಿ ಬೃಹತ್ ಬೈಕ್ ಮೆರವಣಿಗೆಯ ನಂತರ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.
‘ದೇಶದ ಶೇ 40ರಷ್ಟು ಸ್ಥಳದಲ್ಲಿ ಕಾಂಗ್ರೆಸ್ ಪಕ್ಷ ತನ್ನಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಭಾರತೀಯ ಜನತಾ ಪಕ್ಷ ತನ್ನ ಅಧಿಕಾರ ಅವಧಿಯಲ್ಲಿ ಹಿಂದುಗಳಿದ ಜನಾಂಗದ ಇಬ್ಬರು ವ್ಯಕ್ತಿಗಳನ್ನು ರಾಷ್ಟ್ರಪತಿಗಳನ್ನಾಗಿಸಿದೆ. ದೇಶದ ಶ್ರೇಷ್ಠ ಪ್ರಶಸ್ತಿಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸಾಧನೆ ಮಾಡಿದವರಿಗೆ ನೀಡಿದ್ದು ಮೋದಿ ಸರ್ಕಾರ. ನಮ್ಮ ಮಕ್ಕಳ, ಯುವಕರ, ಮಹಿಳೆಯರ ಉತ್ತಮ ಭವಿಷ್ಯಕ್ಕಾಗಿ ಮೋದಿಯವರು ಪ್ರಧಾನಿಯಾಗಬೇಕು’ ಎಂದು ಅನ್ನಾಮಲೈ ತಿಳಿಸಿದರು.
ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಮಾತನಾಡಿ, ‘ಮಂತ್ರಿಗಳ ಮಕ್ಕಳಿಗೆ ಟಿಕೆಟ್ ನೀಡುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾದರೆ ಸಾಮಾನ್ಯ ವ್ಯಕ್ತಿಗಳಿಗೆ ಟಿಕೆಟ್ ನೀಡಿದ್ದು ಬಿಜೆಪಿ ವಿಶೇಷ. ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ಯಾವುದೇ ಭಷ್ಟಾಚಾರ ಮತ್ತು ಅವ್ಯವಹಾರ ನಡೆದಿಲ್ಲ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ₹12 ಲಕ್ಷ ಕೋಟಿಯಷ್ಟು ಅವ್ಯವಹಾರ ನಡೆದಿತ್ತು. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಅದು ದೇಶದ ಪ್ರಗತಿಗೆ ವಿರುದ್ಧವಾಗಿ ಮತ ನೀಡಿದಂತೆ’ ಎಂದರು.
ರಬಕವಿ, ಬನಹಟ್ಟಿ, ರಾಮಪುರ ಮತ್ತು ಹೊಸೂರಗಳಲ್ಲಿ ಬೃಹತ್ ರೋಡ್ ಶೋ ಹಾಗೂ ಬೈಕ್ ಮೆರವಣಿಗೆ ನಡೆಯಿತು.
ಶಾಸಕ ಸಿದ್ದು ಸವದಿ ಮಾತನಾಡಿದರು. ಶ್ರೀಶೈಲ ಬೀಳಗಿ, ಡಾ.ಮಹಾವೀರ ದಾನಿಗೊಂಡ, ಸುರೇಶ ಅಕ್ಕಿವಾಟ, ಧರೆಪ್ಪ ಉಳ್ಳಾಗಡ್ಡಿ, ಡಿ.ಆರ್. ಪಾಟೀಲ, ಪುಂಡಲೀಕ ಪಾಲಭಾವಿ, ಪರಶುರಾಮ ಬಸವ್ವಗೋಳ, ಪವಿತ್ರಾ ತುಕ್ಕನ್ನವರ, ಸವಿತಾ ಹೊಸೂರ, ಸಂಜಯ ತೆಗ್ಗಿ, ಬಸವರಾಜ ತೆಗ್ಗಿ, ಬಸು ಅಮ್ಮಣಗಿಮಠ, ಸಿದ್ದು ಅಮ್ಮಣಗಿ, ರಾಮಣ್ಣ ಭದ್ರನವರ, ಎಸ್.ಎಸ್.ಹೂಲಿ, ಸುವರ್ಣಾ ಕೊಪ್ಪದ, ಗೌರಿ ಮಿಳ್ಳಿ, ಶ‍್ರೀಶೈಲ ಯಾದವಾಡ, ಶಿವಾನಂದ ಗಾಯಕವಾಡ ಸೇರಿದಂತೆ ಅನೇಕರು ಇದ್ದರು.
ಇಂಡಿಯಾ ಮೈತ್ರಿ ಕೂಟದಲ್ಲಿ ಯಾರು ಪ್ರಧಾನಿಯಾಗಬೇಕು ಎಂಬುದೇ ಸ್ಪಷ್ಟವಾಗಿಲ್ಲ. ಐದು ಪ್ರಮುಖ ಪಕ್ಷಗಳು ವರ್ಷಕ್ಕೆ ಒಬ್ಬರಂತೆ ಪ್ರಧಾನಿಯನ್ನಾಗಿಸಲು ಚಿಂತನೆ ಮಾಡುತ್ತಿವೆ
-ಅಣ್ಣಾಮಲೈ ಬಿಜೆಪಿ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.