ADVERTISEMENT

ಬೆಂಗಳೂರು | ಚುನಾವಣೆ: ಬಸ್‌ ನಿಲ್ದಾಣದಲ್ಲಿ ಜನ ಜಮಾವಣೆ

​ಪ್ರಜಾವಾಣಿ ವಾರ್ತೆ
Published 6 ಮೇ 2024, 23:52 IST
Last Updated 6 ಮೇ 2024, 23:52 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಉತ್ತರ ಕರ್ನಾಟಕದ ಕ್ಷೇತ್ರಗಳು ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಮತದಾನ ಜರುಗಲಿದ್ದು, ಬೆಂಗಳೂರಿನಲ್ಲಿರುವ ಹಲವರು ಹೆಚ್ಚಿನ ಸಂಖ್ಯೆಯಲ್ಲಿ ಸೋಮವಾರ ರಾತ್ರಿ ತಮ್ಮೂರಿನತ್ತ ಪ್ರಯಾಣ ಬೆಳೆಸಿದರು.

ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಉತ್ತರ ಕನ್ನಡ, ಹಾವೇರಿ ಹಾಗೂ ಇತರೆ ಜಿಲ್ಲೆಗಳ ವಲಸೆ ಕಾರ್ಮಿಕರು ಹಾಗೂ ಹಲವು ಕಂಪನಿಗಳ ಉದ್ಯೋಗಿಗಳು ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಈ ಪೈಕಿ ಬಹುತೇಕರ ಹೆಸರುಗಳು, ಅವರ ಸ್ವಂತ ಊರಿನ ಮತದಾರರ ಪಟ್ಟಿಯಲ್ಲಿವೆ.

ADVERTISEMENT

ಮತದಾನ ಮಾಡುವ ಉದ್ದೇಶದಿಂದ ಹಲವರು, ಕುಟುಂಬ ಸಮೇತರಾಗಿ ಮೆಜೆಸ್ಟಿಕ್‌ ಕೇಂದ್ರ ನಿಲ್ದಾಣ ಹಾಗೂ ಇತರೆ ನಿಲ್ದಾಣಗಳಿಂದ ಬಸ್‌ಗಳಲ್ಲಿ ತಮ್ಮೂರಿನತ್ತ ಪ್ರಯಾಣ ಬೆಳೆಸಿದರು. ಇದರಿಂದಾಗಿ, ನಿಲ್ದಾಣಗಳಲ್ಲಿ ಸೋಮವಾರ ರಾತ್ರಿ ಜನದಟ್ಟಣೆ ಹೆಚ್ಚಿತ್ತು.

ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಹೆಚ್ಚಿನ ಬಸ್‌ಗಳ ವ್ಯವಸ್ಥೆ ಮಾಡಿತ್ತು. ಬಿಎಂಟಿಸಿ ಬಸ್‌ಗಳನ್ನು ಸಹ ಹೊರ ಜಿಲ್ಲೆಗಳಿಗೆ ಕಳುಹಿಸಲಾಯಿತು. ಎಲ್ಲ ಬಸ್‌ಗಳು ಪ್ರಯಾಣಿಕರಿಂದ ಭರ್ತಿಯಾಗಿ ಸಂಚರಿಸಿದವು.

ಖಾಸಗಿ ಬಸ್‌ಗಳು ಹಾಗೂ ಸ್ವಂತ ವಾಹನಗಳಲ್ಲಿಯೂ ಜನರು ಪ್ರಯಾಣಿಸಿದರು. ಇದರಿಂದಾಗಿ ಮೆಜೆಸ್ಟಿಕ್‌ ಸುತ್ತಮುತ್ತ ವಿಪರೀತ ದಟ್ಟಣೆ ಉಂಟಾಯಿತು. ತುಮಕೂರು ರಸ್ತೆಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಕಂಡುಬಂದವು. ಟೋಲ್‌ಗೇಟ್‌ಗಳಲ್ಲಿಯೂ ವಾಹನಗಳು ಸಾಲುಗಟ್ಟಿ ನಿಂತಿದ್ದು ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.