ADVERTISEMENT

ಪ್ರಚೋದನಕಾರಿ ಹೇಳಿಕೆ: ಸಚಿವೆ ಶೋಭಾ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 15:15 IST
Last Updated 21 ಮಾರ್ಚ್ 2024, 15:15 IST
ಶೋಭಾ ಕರಂದ್ಲಾಜೆ 
ಶೋಭಾ ಕರಂದ್ಲಾಜೆ    

ಬೆಂಗಳೂರು: ‘ಯಾರೋ ತಮಿಳುನಾಡಿನಿಂದ ಬಂದು ದಿ ರಾಮೇಶ್ವರ ಕೆಫೆಯಲ್ಲಿ ಬಾಂಬ್‌ ಇರಿಸಿ ಹೋಗುತ್ತಾರೆ ಎಂಬುದಾಗಿ ಹೇಳಿಕೆ ನೀಡಿ ಪ್ರಚೋದಿಸಿದ್ದಾರೆ’ ಎಂಬ ಆರೋಪದಡಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಚುನಾವಣಾ ಆಯೋಗದ ನಿರ್ದೇಶನದಂತೆ ಬೆಂಗಳೂರು ಚುನಾವಣಾಧಿಕಾರಿಯವರು ಮಾರ್ಚ್ 21ರಂದು ದೂರು ನೀಡಿದ್ದರು. ಎನ್‌ಸಿಆರ್‌ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ನ್ಯಾಯಾಲಯದ ನಿರ್ದೇಶನದಂತೆ, ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗೆ ನೋಟಿಸ್ ನೀಡಿ, ತನಿಖೆ ಮುಂದುವರಿಸಲಾಗುವುದು’ ಎಂದು ಪೊಲೀಸರು ಹೇಳಿದರು.

‘ಮೊಬೈಲ್ ಮಳಿಗೆ ಮಾಲೀಕನ ಕೊಲೆ ಯತ್ನ ಪ್ರಕರಣ ಖಂಡಿಸಿ ನಗರ್ತಪೇಟೆಯಲ್ಲಿ ಇತ್ತೀಚೆಗೆ ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶೋಭಾ ಕರಂದ್ಲಾಜೆ, ‘ವಿಧಾನಸೌಧ ಆವರಣಕ್ಕೆ ಯಾರೋ ಬಂದು ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗುತ್ತಾರೆ. ಮತ್ತೊಬ್ಬ ಹೆಣ್ಣು ಮಕ್ಕಳ ಮೇಲೆ ಆ್ಯಸಿಡ್‌ ದಾಳಿ ನಡೆಸುತ್ತಾನೆ. ಸ್ವಂತ ಅಂಗಡಿಯಲ್ಲಿ ಹನುಮಾನ್‌ ಚಾಲೀಸಾ ಸಿ.ಡಿ ಹಾಕಿದ್ದಕ್ಕೆ ಯುವಕನ ಮೇಲೆ ಇನ್ನೊಂದು ಗುಂಪು ಹಲ್ಲೆ ನಡೆಸುತ್ತದೆ. ಯಾರೋ ತಮಿಳುನಾಡಿನಿಂದ ಬಂದು ಬಾಂಬ್‌ ಇರಿಸಿ ಹೋಗುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ದೂರಿದ್ದರು. ಈ ಹೇಳಿಕೆಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ADVERTISEMENT

ತಮ್ಮ ಹೇಳಿಕೆ ಹಿಂಪಡೆಯುವುದಾಗಿ ತಿಳಿಸಿದ್ದ ಶೋಭಾ, ‘ತಮಿಳು ಸಹೋದರ, ಸಹೋದರಿಯರಿಗೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ತಮಿಳುನಾಡಿನ ಜನರಲ್ಲಿ ನನ್ನ ಹೃದಯಾಂತರಾಳದಿಂದ ಕ್ಷಮೆ ಕೋರುತ್ತೇನೆ’ ಎಂದಿದ್ದರು. ಇದರ ಬೆನ್ನಲ್ಲೆ ಚುನಾವಣಾಧಿಕಾರಿಯವರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಕರ್ನಾಟಕ ಮತ್ತು ತಮಿಳುನಾಡು ಜನರ ನಡುವೆ ಶತ್ರುತ್ವ ಮತ್ತು ದ್ವೇಷದ ಭಾವನೆ ಉತ್ತೇಜಿಸುವ ಹೇಳಿಕೆಯನ್ನು ಶೋಭಾ ಅವರು ನೀಡಿದ್ದಾರೆ. ಈ ಹೇಳಿಕೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಪ್ರಜಾ ಪ್ರತಿನಿಧೀ ಕಾಯ್ದೆಯ ಸೆಕ್ಷನ್ 123 (3A), 123 (3) ಹಾಗೂ 125 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪ ಸಾಬೀತಾದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ನ್ಯಾಯಾಲಯಕ್ಕೆ ಅವಕಾಶವಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.