ADVERTISEMENT

ಹತ್ತು ವರ್ಷದಲ್ಲಿ ದೇಶದ ಚಿತ್ರಣವೇ ಬದಲು: ಅಣ್ಣಾಮಲೈ

ವಿಜಯಪುರ: ಬಿಜೆಪಿ ಯುವ ಸಮಾವೇಶದಲ್ಲಿ ಅಣ್ಣಾಮಲೈ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಮೇ 2024, 16:24 IST
Last Updated 2 ಮೇ 2024, 16:24 IST
ವಿಜಯಪುರ ನಗರದ ಹುತಾತ್ಮ ವೃತ್ತದ (ಮೀನಾಕ್ಷಿ ಚೌಕ್‌) ಆವರಣದಲ್ಲಿ ಗುರುವಾರ ಸಂಜೆ ನಡೆದ ಬಿಜೆಪಿ ಯುವ ಸಮಾವೇಶವನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಚಾಲನೆ ನೀಡಿದರು.
ವಿಜಯಪುರ ನಗರದ ಹುತಾತ್ಮ ವೃತ್ತದ (ಮೀನಾಕ್ಷಿ ಚೌಕ್‌) ಆವರಣದಲ್ಲಿ ಗುರುವಾರ ಸಂಜೆ ನಡೆದ ಬಿಜೆಪಿ ಯುವ ಸಮಾವೇಶವನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಚಾಲನೆ ನೀಡಿದರು.   

ವಿಜಯಪುರ: ‘2014 ರಿಂದ ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಅದಕ್ಕೆ ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ. ಕಳೆದ ಹತ್ತು ವರ್ಷದಲ್ಲಿ ನಮ್ಮ ದೇಶದ ಚಿತ್ರಣವೇ ಬದಲಾಗಿದೆ‘ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಹೇಳಿದರು.

ನಗರದ ಮೀನಾಕ್ಷಿ ಚೌಕಿಯಲ್ಲಿ ಗುರುವಾರ ಸಂಜೆ ನಡೆದ ಬಿಜೆಪಿ ಯುವ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ಹತ್ತು ವರ್ಷದಲ್ಲಿ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ, 41 ಕೋಟಿ ಜನರಿಗೆ ಉಳಿತಾಯ ಖಾತೆ ಆರಂಭ, ಶೇ 100 ರಷ್ಟು ಮನೆಯಲ್ಲಿ ಎಲ್‌ಪಿಜಿ ಸಿಲೆಂಡರ್‌, 11 ಕೋಟಿ ಶೌಚಾಲಯ ನಿರ್ಮಾಣ, ಪಿ.ಎಂ ಆವಾಸ್‌ ಯೋಜನೆಯಲ್ಲಿ 4 ಕೋಟಿ ಮನೆಗಳ ನಿರ್ಮಾಣವಾಗಿದ್ದು, ದೇಶದಲ್ಲಿ ಆಗಿರುವ ಬದಲಾವಣೆಯನ್ನು ಆಧರಿಸಿ ಯುವಜನತೆ ಬಿಜೆಪಿಗೆ ಬೆಂಬಲಿಸಬೇಕು ಎಂದರು.

ADVERTISEMENT

2014ರಲ್ಲಿ ನರೇಂದ್ರ ಮೋದಿ ಮೊದಲ ಬಾರಿ ಪ್ರಧಾನಿಯಾದ ಸಂದರ್ಭದಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಇರಲಿಲ್ಲ, ವಿಶ್ವ ಬ್ಯಾಂಕ್ ಪ್ರಕಾರ ಶೇ 32 ರಷ್ಟು ಬಡತನ ರೇಖೆಗಿಂತ ಕೆಳಗೆ ಇದ್ದರು, ವೈಯುಕ್ತಿಕ ಶೌಚಾಲಯ, ಬ್ಯಾಂಕ್ ಖಾತೆಯಂತೂ ಕನಸಿನ ಮಾತಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೋದಿ ಪ್ರಧಾನಿ ಹುದ್ದೆ ಅಲಂಕರಿಸಿದ್ದರು ಎಂದರು.

ದೇಶಕ್ಕೆ ಸ್ವಾತಂತ್ರ್ಯಸಿಕ್ಕಾಗಿನಿಂದ ಆಳ್ವಿಕೆ ನಡೆಸಲು ಅವಕಾಶ ದೊರಕಿಸಿಕೊಂಡ ಕಾಂಗ್ರೆಸ್ ಕೇವಲ ಗರೀಬಿ ಹಠಾವೋ ಎಂದು ಘೋಷಣೆ ಮಾಡಿದರೆ ಹೊರತು, ಬಡತನ ನಿವಾರಣೆಗೆ ಕೆಲಸ ಮಾಡಲಿಲ್ಲ, ಬಡತನ ನಿವಾರಿಸುತ್ತೇವೆ ಎನ್ನುವ ಘೋಷಣೆ ಕಾಂಗ್ರೆಸ್ ಪಕ್ಷ ಇನ್ನೂ ಪುನರಾವರ್ತನೆ ಮಾಡುತ್ತಲೇ ಬರುತ್ತಿದೆ ಎಂದರು.

ಮೋದಿ ಅವರ ಕಾರ್ಯವೈಖರಿಯೇ ಬೇರೆ, ಅವರು ತಾವು 10 ವರ್ಷದಲ್ಲಿ ಮಾಡಿದ ಸಾಧನೆ ಟ್ರೇಲರ್‌ ಮಾತ್ರ ಎಂದಿದ್ದಾರೆ. 10 ವರ್ಷದಲ್ಲಿ ಕಾಶ್ಮೀರ ವಿಶೇಷ ಸ್ಥಾನಮಾನ ರದ್ಧತಿ, ಕಪ್ಪು ಹಣದ ವಿರುದ್ಧ ಸಮರ, ಶ್ರೀರಾಮ ಮಂದಿರ ನಿರ್ಮಾಣ, 11ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕ ಶಕ್ತಿ ಇಂದು 5ನೇ ಸ್ಥಾನಕ್ಕೆ ಬಂದಿದೆ. ಹೀಗೆ ಅನೇಕ ಮಹತ್ವದ ಕಾರ್ಯಗಳನ್ನು ಸಾಧಿಸಿದ್ದರೂ ಟ್ರೇಲರ್‌ ಎನ್ನುತ್ತಾರೆ ಅಂದರೇ ಅವರಿಗೆ ಇನ್ನೂ ಎಷ್ಟು ದೊಡ್ಡ ಕನಸಿರಬಹುದು ಚಿಂತಿಸಿ ಎಂದು ವಿವರಿಸಿದರು.

ಕಾಂಗ್ರೆಸ್‌ ಬರೆ ಮಾತುಗಳಿಂದ ಚುನಾವಣೆ ಗೆಲ್ಲಬಹುದು ಎಂಬ ಭ್ರಮೆಯಲ್ಲಿದೆ. 5 ಗ್ಯಾರಂಟಿ ಕೊಟ್ಟಿದ್ದು, ವಾಷಿಂಗ್‌ ಮಷಿನ್‌ನಲ್ಲಿ ಬಟ್ಟೆ ಹಾಕಿ ಕಾಯುವಂತಾಗಿದೆ. ಲೋಕಸಭೆ ಚುನಾವಣೆ ಈ ದೇಶದಲ್ಲಿ ಪ್ರಧಾನಿ ಯಾರಾಗಬೇಕು ಎಂಬುವುದರ ಮೇಲೆ ಜನರು ಮತ ಹಾಕುತ್ತಾರೆ ಎಂದರು. 

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಒಂದು ಲಕ್ಷ ಕೋಟಿ ಅನುದಾನವನ್ನು ವಿಜಯಪುರದ ಪ್ರಗತಿಗಾಗಿ ತರುವಲ್ಲಿ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ, ದೇಶದಲ್ಲಿ ನರೇಂದ್ರ ಮೋದಿ ಸಾರಥ್ಯದಲ್ಲಿ ಉತ್ತಮವಾದ ಆಡಳಿತ ಫಲವಾಗಿ ಭಾರತ ಪ್ರಗತಿಪಥದತ್ತ ಮುನ್ನಡೆದು ವಿಶ್ವದ ಗಮನ ಸೆಳೆಯುತ್ತಿದೆ ಎಂದರು.

ಇದು ನನ್ನ ಕೊನೆಯ ಚುನಾವಣೆ ಮುಂದೆ ನಾನು ರಾಜಕಾರಣದಲ್ಲಿ ಮುಂದುವರೆದಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇಯ ಬಾರಿಗೆ ಪ್ರಧಾನಿಯಾಗುವ ನಿಟ್ಟಿನಲ್ಲಿ ಸಂಸತ್‌ನಲ್ಲಿ ಕೈ ಎತ್ತಬೇಕು ಎಂಬುದು ನನ್ನ ಕೊನೆ ಆಸೆ ಎಂದರು.

ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ, ಶಾಸಕ ಧೀರಜ್ ಮುನಿರಾಜು, ಮಾಜಿ ಸಚಿವ ಅರವಿಂದ ಲಿಂಬಾವಳಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ವಿಜುಗೌಡ ಪಾಟೀಲ, ಸಂಜೀವ ಐಹೊಳಿ, ರಾಮನಗೌಡ ಪಾಟೀಲ ಯತ್ನಾಳ, ಬಸವರಾಜ ಬಿರಾದಾರ, ವಿವೇಕಾನಂದ ಡಬ್ಬಿ, ಕಿರಣ ಪಾಟೀಲ, ಸಾಬು ಮಾಶ್ಯಾಳ, ಮಳುಗೌಡ ಪಾಟೀಲ, ಸ್ವಪ್ನಾ ಕಣಮುಚನಾಳ ಇದ್ದರು.

ಲೋಕಸಭೆ ಚುನಾವಣೆಯಲ್ಲಿ ಮೋದಿಜಿ ಪ್ರಧಾನಿಯಾಗಲು ಶೇ 51ರಷ್ಟು ಬಿಜೆಪಿಗೆ ಮತ ಹಾಕಬೇಕು. ವಿಜಯಪುರದಲ್ಲಿ ಜಿಗಜಿಣಗಿ ಅವರಿಗೆ ಶೇ 70 ರಷ್ಟು ಮತ ಹಾಕಬೇಕು

–ಅಣ್ಣಾಮಲೈ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.