ಹಾವೇರಿ: ‘ಚಿತ್ರನಟ ಪ್ರಕಾಶ್ ರಾಜ್ ಪೂರ್ವಗ್ರಹ ಪೀಡಿತ ವ್ಯಕ್ತಿ. ಅವರು ಏನೇ ಮಾತನಾಡಿದರೂ ಅಜೆಂಡಾ ಇಟ್ಟುಕೊಂಡು ಮಾತನಾಡುತ್ತಾರೆ. ಅವರ ಮಾತಲ್ಲಿ ಯಾವುದೇ ಸತ್ಯಾಂಶ ಇಲ್ಲ’ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
‘ಕೇಂದ್ರದಲ್ಲಿ ಆತಂಕವಾದಿಗಳ ಸರ್ಕಾರ ಇದೆ’ ಎಂದು ಪ್ರಕಾಶ್ ರಾಜ್ ನೀಡಿರುವ ಹೇಳಿಕೆಗೆ, ರಾಣೆಬೆನ್ನೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಬೊಮ್ಮಾಯಿ ತಿರುಗೇಟು ನೀಡಿದರು.
‘ಆತಂಕವಾದಿಗಳಿಗೆ ನಾವು ಆತಂಕವಾದಿಗಳು’ ಎಂದು ಈಗಾಗಲೇ ಮೋದಿ ಹೇಳಿದ್ದಾರೆ. ಭಯೋತ್ಪಾದಕರಿಗೆ ಆತಂಕವಾದಿಗಳಿಗೆ ಈ ನೆಲದ ಮೇಲೆ ಅವಕಾಶ ಇಲ್ಲ. ಭಯೋತ್ಪಾದಕ ಕೃತ್ಯ ಮಾಡಿದವರಿಗೆ ಭಯೋತ್ಪಾದಕ ಅನ್ನುತ್ತಾರೆ. ಪ್ರಕಾಶ್ ರಾಜ್ ಒಳ್ಳೆಯ ನಟ. ಆದರೆ ವಿವಾದಗಳ ಮೂಲಕ ಸಾರ್ವಜನಿಕ ಜೀವನದಲ್ಲಿ ಪ್ರಸ್ತುತ ಇರಬೇಕು ಅಂತ ತೀರ್ಮಾನ ಮಾಡಿದಂತಿದೆ ಎಂದು ಕುಟುಕಿದರು.
ಅಮಾಯಕರಿಗೆ ನ್ಯಾಯ ಸಿಗಲಿ: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರದಲ್ಲಿ ಬಿಜೆಪಿ ನಾಯಕರ ಮೌನ ವಹಿಸಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ, ‘ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತನಿಖೆಯಲ್ಲಿ ಎನ್.ಐ.ಎ ಬಂದರೂ ಕೂಡಾ ನಾವು ಒಪ್ಪಿಕೊಳ್ಳುತ್ತೇವೆ. ಇಂಥ ಘಟನೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಗಂಭೀರವಾಗಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲಿ ಅಮಾಯಕರಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು. ಎಂದರು.
ಪ್ರಜ್ವಲ್ ರೇವಣ್ಣಗೆ ಒಂದೇ ದಿನದಲ್ಲಿ ವೀಸಾ ಹೇಗೆ ಸಿಕ್ಕಿತು ಎಂಬ ಶಾಸಕ ವಿನಯ್ ಕುಲಕರ್ಣಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ವೀಸಾ ಜರ್ಮನಿ ಸರ್ಕಾರ ಕೊಡುತ್ತದೆ. ವೀಸಾ ಕೊಡುವವರು ಕೇಂದ್ರ ಸರ್ಕಾರದವರಲ್ಲ. ಕಾಮನ್ ಸೆನ್ಸ್ ಇರಬೇಕು ಅಷ್ಟು ಗೊತ್ತಿಲ್ಲವಾ ಎಂದು ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.