ADVERTISEMENT

ರಾಘವೇಂದ್ರಗೆ BJP ಟಿಕೆಟ್ ಕೊಡಿಸಲು BSY ನನ್ನ ಬಲಿ ಕೊಟ್ಟರು: ಆಯನೂರು ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 16:15 IST
Last Updated 5 ಏಪ್ರಿಲ್ 2024, 16:15 IST
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ಶಿವಮೊಗ್ಗ: ‘2009ರ ಲೋಕಸಭಾ ಚುನಾವಣೆಯಲ್ಲಿ ಪುತ್ರ ಬಿ.ವೈ.ರಾಘವೇಂದ್ರ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸಲು ಬಿ.ಎಸ್.ಯಡಿಯೂರಪ್ಪ ನನ್ನನ್ನು ರಾಜಕೀಯವಾಗಿ ಬಲಿ ಕೊಟ್ಟಿದ್ದರು. ಆಗ ಯಡಿಯೂರಪ್ಪ ಜೊತೆ ನಿಂತಿದ್ದ ಕೆ.ಎಸ್‌.ಈಶ್ವರಪ್ಪ ಅವರಿಗೆ ಈಗ ತಮ್ಮ ಪುತ್ರನ ವಿಷಯ ಬಂದಾಗ ಮೋಸದ ಅರಿವಾಯಿತೇ?’ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಪ್ರಶ್ನಿಸಿದರು.

‘ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2007ರ ವಿಧಾನಸಭಾ ಚುನಾವಣೆಯಲ್ಲಿ ಬೇಡ ಎಂದರೂ ಬಲವಂತವಾಗಿ ಯಡಿಯೂರಪ್ಪ ಭದ್ರಾವತಿಯಿಂದ ಟಿಕೆಟ್ ಕೊಟ್ಟಿದ್ದರು. ಪ್ರಚಾರಕ್ಕೂ ಬಾರದೇ, ಪಕ್ಷದಿಂದ ಹಣ ಕೂಡ ಕೊಡದೇ ನಾನು ಸೋಲಬೇಕಾಯಿತು. ವಿಧಾನಸಭೆ ಚುನಾವಣೆಯಲ್ಲಿ ಸೋತರೆ ಲೋಕಸಭೆ ಚುನಾವಣೆ ಟಿಕೆಟ್‌ಗೆ ನಾನು ಬೇಡಿಕೆ ಇಡುವುದು ತಪ್ಪುತ್ತದೆ ಎಂಬ ಉದ್ದೇಶ ಆಗ ಯಡಿಯೂರಪ್ಪ ಅವರಿಗೆ ಇತ್ತು’ ಎಂದರು.

‘2009ರ ಚುನಾವಣೆ ವೇಳೆ ಏಕಾಏಕಿ ಎಸ್‌.ರುದ್ರೇಗೌಡರನ್ನು ಕರೆಸಿಕೊಂಡು ಅವರ ಬಾಯಿಗೆ ಯಡಿಯೂರಪ್ಪ ಸಿಹಿ ತುರುಕಿದ್ದರು. ರುದ್ರೇಗೌಡರು ವಿಷಯ ಏನು ಎಂದು ಕೇಳಿದಾಗ ಲೋಕಸಭಾ ಚುನಾವಣೆಯಲ್ಲಿ ಗೆದ್ದು ನೀವು ದೆಹಲಿಗೆ ಹೋಗುತ್ತೀರಿ ಎಂದು ಹೇಳಿದ್ದರು. ಇದಕ್ಕೆ ಆಗ ಕೆ.ಎಸ್‌.ಈಶ್ವರಪ್ಪ, ಡಿ.ಎಚ್‌.ಶಂಕರಮೂರ್ತಿ, ಆಗಿನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಪಟೇಲ್ ಸಾಕ್ಷಿಯಾಗಿದ್ದರು. ರುದ್ರೇಗೌಡರು ಅಭ್ಯರ್ಥಿ ಎಂಬ ಸುದ್ದಿ ಆಗ ಮಾಧ್ಯಮದಲ್ಲೂ ಪ್ರಕಟವಾಗಿತ್ತು. ಅತ್ತ ರುದ್ರೇಗೌಡರು ಚುನಾವಣೆ ಸಿದ್ಧತೆಯಲ್ಲಿ ನಿರತರಾದರೆ ಇತ್ತ ಯಡಿಯೂರಪ್ಪ ಏಕಾಏಕಿ ರುದ್ರೇಗೌಡರ ಹೆಸರು ಹೇಳುವುದು ಬಿಟ್ಟರು’

ADVERTISEMENT

‘ದೇವರಾಣೆಗೂ ಮಗನನ್ನು ಚುನಾವಣೆಗೆ ನಿಲ್ಲಿಸೊಲ್ಲ ಎನ್ನುತ್ತಿದ್ದವರು, ಆಗ ಆಕಾಂಕ್ಷಿಗಳ ಪಟ್ಟಿಯಲ್ಲಿಯೇ ಇಲ್ಲದ ತಮ್ಮ ಪುತ್ರ ಬಿ.ವೈ.ರಾಘವೇಂದ್ರ ಹೆಸರನ್ನೇ ಮುಂಚೂಣಿಗೆ ತಂದರು. ಮಗನಿಗೆ ಟಿಕೆಟ್ ಕೊಡಲು ಸಂಘದ ಹಿರಿಯರು ಒಪ್ಪದೇ ಇದ್ದಾಗ ಅವರನ್ನು ಒಪ್ಪಿಸಲು ನನ್ನನ್ನೇ ನಿಯೋಜಿಸಿದ್ದರು’ ಎಂದು ಆಯನೂರು ಮಂಜುನಾಥ್ ಹೇಳಿದರು.

‘ಯಡಿಯೂರಪ್ಪ ನಮಗೆಲ್ಲ ಮೋಸ, ಅನ್ಯಾಯ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಅವರಿಗೆ ಈಗ ಅರ್ಥವಾಗಿದೆ. ಆ ಪರಂಪರೆ ಇವತ್ತಿನದಲ್ಲ ಆಗಿನಿಂದಲೂ ಇತ್ತು ಎಂಬುದು ಗೊತ್ತಿಲ್ಲವೇ’ ಎಂದು ಛೇಡಿಸಿದರು.

‘ಈ ಹಿಂದೆ ಬಂಗಾರಪ್ಪನ ಪ್ರವೇಶದಿಂದ ಪಕ್ಷಕ್ಕೆ ಅಗಾಧವಾದ ಲಾಭ ಆಗಿತ್ತು. ಬಿಜೆಪಿಯ ಎಲ್ಲರನ್ನೂ ಆವತ್ತು ಗೆಲ್ಲಿಸಿದ್ದು ಬಂಗಾರಪ್ಪ. ಇತಿಹಾಸ ಗೊತ್ತಿಲ್ಲದ ರಾಘವೇಂದ್ರ ಈಗ ಏನೇನೋ ಹೇಳುತ್ತಿದ್ದಾರೆ. ಅವರಿಗೆ ರಾಜಕೀಯ ಅಸ್ಥಿರತೆ ಕಾಡುತ್ತಿದೆ. ಚುನಾವಣೆಯಲ್ಲಿ ಸೋಲುವ ಭೀತಿಯಿಂದು ಸುಳ್ಳು ಹೇಳುವುದು ಕಲಿತಿದ್ದಾರೆ’ ಎಂದು ಆಯನೂರು ಮಂಜುನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.