ADVERTISEMENT

ಮೋದಿ ಅವರೇ, ಮೇಕೆದಾಟು ಯೋಜನೆಗೆ ಅನುಮತಿ ಕೊಡುತ್ತಿಲ್ಲ ಯಾಕೆ: ಸಿದ್ದರಾಮಯ್ಯ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2024, 5:37 IST
Last Updated 22 ಏಪ್ರಿಲ್ 2024, 5:37 IST
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿದ್ದರಾಮಯ್ಯ   

ಬೆಂಗಳೂರು: ‘ನರೇಂದ್ರ ಮೋದಿ ಅವರೇ, ಬೆಂಗಳೂರಿನ ಕುಡಿಯುವ ನೀರಿನ ಮೇಕೆದಾಟು ಯೋಜನೆಗೆ ಅನುಮತಿ ಏಕೆ ಕೊಡುತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕೋಣನಕುಂಟೆ ಕ್ರಾಸ್‌ನಲ್ಲಿ ನಡೆದ ‘ಪ್ರಜಾಧ್ವನಿ-2’ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ.

‘ಸಂಸದ ಡಿ.ಕೆ. ಸುರೇಶ್ ಅವರು ಮೋದಿಯವರಿಂದ ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯವನ್ನು, ನಿಮ್ಮ ತೆರಿಗೆ ಹಣಕ್ಕೆ ಆಗುತ್ತಿರುವ ದ್ರೋಹದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸುರೇಶ್‌ ಅವರು ಗೆದ್ದರೆ ಮಾತ್ರ ನಮ್ಮ-ನಿಮ್ಮೆಲ್ಲರ ಧ್ವನಿಯಾಗಿ ಹೋರಾಟ ಮಾಡುತ್ತಾರೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಬೆಲೆ ಏರಿಕೆ ಭಾರತೀಯರ ಶತ್ರು. ನಾನು ಪ್ರಧಾನಿಯಾದರೆ ಬೆಲೆ ಏರಿಕೆ ತಡೆಯುವುದಾಗಿ ಹೇಳಿ ದೇಶದ ಜನರನ್ನು ಮೋದಿ ಅವರು ನಂಬಿಸಿದ್ದರು. ಆದರೆ, ಇದೇ ಮೋದಿಯವರು ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ ಸೇರಿ ಎಲ್ಲದರ ಬೆಲೆಯನ್ನೂ ಗಗನಕ್ಕೆ ಏರಿಸಿದ್ದಾರೆ’ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

‘ಮೋದಿಯವರ ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಮಧ್ಯಮ ವರ್ಗದ ಜನ ಮತ್ತು ದುಡಿಯುವ ವರ್ಗಗಳು ಹಾಗೂ ಬಡ ಜನರ ಬದುಕಿಗೆ ಸ್ಪಂದಿಸುವ ಉದ್ದೇಶದಿಂದ ನಾನು ಐದು ಗ್ಯಾರಂಟಿಗಳನ್ನು ರೂಪಿಸಿ ಐದನ್ನೂ ಜಾರಿ ಮಾಡಿದ್ದೇವೆ. ನಾವು ನುಡಿದಂತೆ ನಡೆದು ನಿಮ್ಮ ಮತಕ್ಕೆ ಗೌರವ ತಂದು ಘನತೆ ಹೆಚ್ಚಿಸಿದ್ದೇವೆ‌. ಈ ಅರ್ಹತೆಯಿಂದ ನಿಮ್ಮ ಎದುರಿಗೆ ನಿಂತು ಮತ ಕೇಳುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.