ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರ ಪ್ರಚಾರ ಕಾರ್ಯದಿಂದ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಹಾಲಿ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ದೂರ ಉಳಿದಿದ್ದಾರೆ. ಇವರಿಬ್ಬರ ಧೋರಣೆ ಕ್ಷೇತ್ರದಲ್ಲಿ ಚರ್ಚೆಗೆ ಕಾರಣವಾಗಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಶಿವರಾಮ ಹೆಬ್ಬಾರ್ ಮತ್ತು ಅನಂತಕುಮಾರ ಹೆಗಡೆ ಅವರ ಶೀತಲಸಮರ ಮೊದಲಿನಿಂದ ಇದೆ. ಹಿಂದಿನ ಏಳು ಅವಧಿಯಿಂದಲೂ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಂತಕುಮಾರ ಹೆಗಡೆ ಟಿಕೆಟ್ ಕೈತಪ್ಪಿದ ಬೇಸರದಿಂದ ಕ್ಷೇತ್ರದಿಂದ ದೂರ ಉಳಿದಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವ ವದಂತಿ ಬಗ್ಗೆ ಸ್ವತಃ ಶಿವರಾಮ ಹೆಬ್ಬಾರ್ ಅಲ್ಲಗಳೆದಿದ್ದರು. ಆದರೆ, ಅವರ ಪುತ್ರ ವಿವೇಕ ಹೆಬ್ಬಾರ್ ಕಾಂಗ್ರೆಸ್ ಸೇರಿದ್ದು, ಅವರ ನಡೆ ಇನ್ನಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಅವರು ಪ್ರಚಾರ ಕಾರ್ಯಕ್ಕೆ ಬಾರದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.
‘ಬಿಜೆಪಿಯ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಶಿವರಾಮ ಹೆಬ್ಬಾರ್ ಅವರು ಚುನಾವಣಾ ಪ್ರಚಾರಕ್ಕೆ ಬಾರದೇ ತಟಸ್ಥರಾಗುವ ಸಾಧ್ಯತೆ ಇದೆ. ಆದರೆ, ತಮ್ಮ ಪುತ್ರನ ನೇತೃತ್ವದಲ್ಲಿ ಬೆಂಬಲಿಗರನ್ನು ಕಾಂಗ್ರೆಸ್ ಸೇರಲು ಮತ್ತು ಆ ಪಕ್ಷದ ಪರ ಕೆಲಸ ಮಾಡಲು ಬಿಟ್ಟಿದ್ದು ಸರಿಯಲ್ಲ’ ಎಂದು ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಭ್ಯರ್ಥಿ ಬದಲಿಸುವ ಪಕ್ಷದ ನಿರ್ಣಯಕ್ಕೆ ಅನಂತಕುಮಾರ ಹೆಗಡೆಯವರ ತಕರಾರು ಇರಲಿಲ್ಲ. ಆದರೆ ತಮ್ಮ ರಾಜಕೀಯ ವಿರೋಧಿಯಾದ ಕಾಗೇರಿಗೆ ಟಿಕೆಟ್ ನೀಡಿದ್ದು ಅವರಲ್ಲಿ ಅಸಮಾಧಾನಕ್ಕೆ ಕಾರಣವಾಗಿರಬಹುದು. ಹೀಗಾಗಿ ಅವರು ಪ್ರಚಾರದಿಂದ ದೂರವಿದ್ದಾರೆ’ ಎಂದು ಅನಂತಕುಮಾರ ಆಪ್ತರೊಬ್ಬರು ತಿಳಿಸಿದರು.
ಪುತ್ರ ಕಾಂಗ್ರೆಸ್ ಸೇರಿದ್ದರ ಬಗ್ಗೆ ಏನನ್ನೂ ಹೇಳಲ್ಲ. ನಾನು ಬಿಜೆಪಿ ಶಾಸಕ. ಆದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡುವ ಬಗ್ಗೆ ಇನ್ನೂ ನಿರ್ಣಯಿಸಿಲ್ಲ.–ಶಿವರಾಮ ಹೆಬ್ಬಾರ್, ಶಾಸಕ ಯಲ್ಲಾಪುರ
ಶಿವರಾಮ ಹೆಬ್ಬಾರ್ ಅನಂತಕುಮಾರ ಹೆಗಡೆ ಜತೆ ಪಕ್ಷದ ಹಲವು ಮುಖಂಡರು ಮಾತನಾಡಿದ್ದಾರೆ. ಇಬ್ಬರೂ ಪ್ರಚಾರಕ್ಕೆ ಬರುವರು ಎಂಬ ವಿಶ್ವಾಸ ನನಗಿದೆ.–ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಅಭ್ಯರ್ಥಿ ಉತ್ತರಕನ್ನಡ ಲೋಕಸಭಾ ಕ್ಷೇತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.