ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಚುನಾವಣೆ ಸಿದ್ಧತೆಗಾಗಿ ಬುಧವಾರ ಜಿಲ್ಲೆಗೆ ಬಂದರು.
ಭದ್ರಾವತಿ ಸಮೀಪದ ಬಾರಂದೂರು ಗ್ರಾಮದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ ನೇತೃತ್ವದಲ್ಲಿ ಎದುರುಗೊಂಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಗೀತಾ ಅವರನ್ನು ಸ್ವಾಗತಿಸಿದರು. ಅಲ್ಲಿಂದ ಶಿವಮೊಗ್ಗಕ್ಕೆ ಮೆರವಣಿಗೆಯಲ್ಲಿ ಕರೆತಂದರು.
ಕಾರ್ಯಕರ್ತರ ಜೈಕಾರದ ನಡುವೆ ತೆರೆದ ವಾಹನದಲ್ಲಿ ಗೀತಾ ಹಾಗೂ ಅವರ ಪತಿ, ನಟ ಶಿವರಾಜಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಿಮ್ಮನೆ ರತ್ನಾಕರ ಸಾಗಿಬಂದರು.
ಶಿವಮೊಗ್ಗದ ಎಂಆರ್ ಎಸ್ ವೃತ್ತದಿಂದ ಆರಂಭವಾದ ಮೆರವಣಿಗೆ ಹೊಳೆ ಬಸ್ ನಿಲ್ದಾಣದ ಮೂಲಕ ಬೆಕ್ಕಿನಕಲ್ಮಠದ ಬಳಿಗೆ ಬಂದಾಗ ಅಲ್ಲಿ ಕಾಂಗ್ರೆಸ್ ಮುಖಂಡರಾದ ಎಚ್.ಸಿ.ಯೋಗೀಶ ನೇತೃತ್ವದಲ್ಲಿ ಕ್ರೇನ್ ಮೂಲಕ ದೊಡ್ಡ ಮೋಸಂಬಿ ಹಾರ ಹಾಕಿ, ಬಲೂನು ಹಾರಿಸಿ ಗೀತಾ ಅವರಿಗೆ ಸ್ವಾಗತ ಕೋರಲಾಯಿತು. ಕಾರ್ಯಕರ್ತರು ಬೈಕ್ ನಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದರು.
ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಗೀತಾ ಶಿವರಾಜ್‌ಕುಮಾರ್ ಬಂದಿದ್ದು, ಪಕ್ಷದಿಂದ ಭರ್ಜರಿ ಸ್ವಾಗತ ದೊರೆಯಿತು. ಇಲ್ಲಿನ ಗೋಪಾಲಗೌಡ ಬಡಾವಣೆಯ ಲಗಾನ್ ಕಲ್ಯಾಣ ಮಂದಿರದಲ್ಲಿ ಕಾರ್ಯಕರ್ತರ ಸಭೆ ಆರಂಭವಾಗಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ ಪಕ್ಷದ ಪರವಾಗಿ ಗೀತಾ ಅವರನ್ನು ಸ್ವಾಗತಿಸಿದರು. ಮಹಿಳೆಯರು ಸೇರಿದಂತೆ ಭಾರೀ ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಬಿರು ಬಿಸಿಲಿನಿಂದ ಬಸವಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.