ADVERTISEMENT

LS Polls | ದ್ವೇಷ ಭಾಷಣ ಆರೋಪ: ವಿವಿಧ ಪಕ್ಷಗಳ ವಿರುದ್ಧ 23 ಪ್ರಕರಣ ದಾಖಲು– EC

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 9:45 IST
Last Updated 24 ಏಪ್ರಿಲ್ 2024, 9:45 IST
<div class="paragraphs"><p>ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ</p></div>

ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ

   

ಪ್ರಜಾವಾಣಿ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ವಿವಿಧ ರಾಜಕೀಯ ಪಕ್ಷಗಳ ವಿರುದ್ಧ 23 ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದರು.

ADVERTISEMENT

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ‘ದ್ವೇಷ ಭಾಷಣದ ಆರೋಪದಡಿ ಬಿಜೆಪಿ ನಾಯಕರ ವಿರುದ್ಧ 12, ಕಾಂಗ್ರೆಸ್‌ ನಾಯಕರ ವಿರುದ್ಧ ಒಂಬತ್ತು ಮತ್ತು ಜೆಡಿಎಸ್ ನಾಯಕರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದರು.

ಮತದಾರರಿಗೆ ಆಮಿಷ ಒಡ್ಡಿದ ಆರೋಪದಡಿ 28 ಪ್ರಕರಣ ದಾಖಲಿಸಲಾಗಿದೆ. ಬಿಜೆಪಿ ವಿರುದ್ಧ ಎಂಟು, ಕಾಂಗ್ರೆಸ್‌ ವಿರುದ್ಧ ಒಂಬತ್ತು ಮತ್ತು ಜೆಡಿಎಸ್‌ ವಿರುದ್ಧ ಮೂರು ಹಾಗೂ ಪಕ್ಷೇತರರ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿವೆ. ಚುನಾವಣಾ ಪ್ರಚಾರಕ್ಕೆ ಧಾರ್ಮಿಕ ಸ್ಥಳಗಳನ್ನು ಬಳಸಿಕೊಂಡ ಆರೋಪದಡಿ ಬಿಜೆಪಿ ವಿರುದ್ಧ ಎಂಟು, ಕಾಂಗ್ರೆಸ್‌ ವಿರುದ್ಧ ಆರು ಮತ್ತು ಜೆಡಿಎಸ್‌ ವಿರುದ್ಧ ಒಂದು ಪ್ರಕರಣ ದಾಖಲಿಸಲಾಗಿದೆ ಎಂದು ವಿವರ ನೀಡಿದರು.

ಗಂಭೀರ ಸ್ವರೂಪದ ಚುನಾವಣಾ ಮಾದರಿ ಸಂಹಿತೆ ಉಲ್ಲಂಘನೆ ಆರೋಪದಡಿ ಈವರೆಗೆ 189 ಪ್ರಕರಣ ದಾಖಲು ಮಾಡಲಾಗಿದೆ ಎಂದರು.

ಕಾನೂನಿನಂತೆ ತನಿಖೆ: ತಮ್ಮ ವಿರುದ್ಧ ಪೆನ್‌ಡ್ರೈವ್‌ ಹಂಚಿ, ತೇಜೋವಧೆ ಮಾಡಲಾಗುತ್ತಿದೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರು ದೂರು ನೀಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಮೀನಾ, ‘ಅಭ್ಯರ್ಥಿಯೊಬ್ಬರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಪೆನ್‌ ಡ್ರೈವ್‌ನಲ್ಲಿರುವ ದೃಶ್ಯಗಳನ್ನು ರೆಕಾರ್ಡ್‌ ಮಾಡಿದವರು ಯಾರು? ಹಂಚುತ್ತಿರುವವರು ಯಾರು ಎಂಬುದು ಗೊತ್ತಿಲ್ಲ. ಪೊಲೀಸರು ಕಾನೂನು ಪ್ರಕಾರ ತನಿಖೆ ನಡೆಸುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.