ADVERTISEMENT

Election Results: ದಳದ ನೆರವಿನಡಿ 17 ಗೆದ್ದ ಕಮಲ

ಜೆಡಿಎಸ್‌ ಮೈತ್ರಿಯಿಂದ ಸಂಖ್ಯಾಬಲ ವೃದ್ಧಿ l ಎರಡೂ ಪಕ್ಷಗಳಿಗೂ ಅನುಕೂಲ

ಎಸ್.ರವಿಪ್ರಕಾಶ್
Published 5 ಜೂನ್ 2024, 1:11 IST
Last Updated 5 ಜೂನ್ 2024, 1:11 IST
<div class="paragraphs"><p>ಲೋಕಸಭಾ ಚುನಾವಣೆ ‌ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾರ್ಯಕರ್ತರೊಂದಿಗೆ ಮಂಗಳವಾರ ಸಂಭ್ರಮಿಸಿದರು </p></div>

ಲೋಕಸಭಾ ಚುನಾವಣೆ ‌ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾರ್ಯಕರ್ತರೊಂದಿಗೆ ಮಂಗಳವಾರ ಸಂಭ್ರಮಿಸಿದರು

   

ಪ್ರಜಾವಾಣಿ ಚಿತ್ರ

ಬಿಜೆಪಿಯ ಈ ಬಾರಿಯ ಸಾಧನೆಗೆ ಜೆಡಿಎಸ್‌ ಜತೆಗಿನ ಮೈತ್ರಿಯೇ ಪ್ರಮುಖ ಕಾರಣ. ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಜೆಡಿಎಸ್‌ ಮತಗಳು ವರ್ಗಾವಣೆ ಆಗಿವೆ. ಹೀಗಾಗಿ ಬಿಜೆಪಿ ಬಲ ವರ್ಧನೆ ಆಗಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲೂ ಜೆಡಿಎಸ್‌ ಜತೆಗಿನ ಮೈತ್ರಿ ಬಿಜೆಪಿಗೆ ಅನಿವಾರ್ಯ. ಎರಡೂ ಪಕ್ಷಗಳು ಸೇರಿದರೆ ಸ್ಥಳೀಯ ಸಂಸ್ಥೆ, ಬಿಬಿಎಂಪಿ ಮತ್ತು ವಿಧಾನಸಭಾ ಚುನಾವಣೆಯಲ್ಲೂ ಪ್ರಬಲ ಪೈಪೋಟಿ ನೀಡಲು ಸಾಧ್ಯ.

ಬೆಂಗಳೂರು: ರಾಜ್ಯದ ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಕಳೆದ ಬಾರಿ (2019) ಗರಿಷ್ಠ ಸಾಧನೆ ಮಾಡಿದ್ದ ಬಿಜೆಪಿ ಈ ಬಾರಿ ಜೆಡಿಎಸ್‌ ಜತೆಗಿನ ಮೈತ್ರಿಯಿಂದಾಗಿ ಮುಖ ಉಳಿಸಿಕೊಂಡಿದೆ. ಜೆಡಿಎಸ್‌ ಊರುಗೋಲಾಗದಿದ್ದರೆ, ಬಿಜೆಪಿ ಸಂಖ್ಯಾಬಲ ಒಂದಂಕಿಗೆ ಕುಸಿಯುವ ಸಾಧ್ಯತೆ ಇತ್ತು. ಈ ಮೈತ್ರಿಯಿಂದ ಜೆಡಿಎಸ್‌ಗೂ ಅನುಕೂಲವಾಗಿದೆ.

ADVERTISEMENT

ಬಣ ರಾಜಕೀಯದಿಂದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿತ್ತು. ಆದರೆ, 20 ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಈ ಚುನಾವಣೆಯಲ್ಲೂ ಕೆಲ ಕ್ಷೇತ್ರಗಳಲ್ಲಿ ಒಳ ಏಟು ಮತ್ತು ಟಿಕೆಟ್ ಹಂಚಿಕೆಯಲ್ಲಿ ಮಾಡಿದ ಎಡವಟ್ಟುಗಳ ಕಾರಣ ಈ ಹಿಂದೆ ಗೆಲ್ಲುತ್ತಿದ್ದ ದಾವಣಗೆರೆ, ಬೀದರ್‌, ರಾಯಚೂರು, ಕೊಪ್ಪಳ, ಬಳ್ಳಾರಿಯಂತಹ ಕ್ಷೇತ್ರಗಳೂ ಬಿಜೆಪಿ ಕೈತಪ್ಪಿ ಹೋಗಿವೆ. ಆದರೂ 2014 ರಲ್ಲಿ ಮಾಡಿದ್ದ ಸಾಧನೆ ಮರುಕಳಿಸಿದೆ. ಆ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿಯೂ ಅಷ್ಟೇ ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದೆ. ಮಿತ್ರ ಪಕ್ಷ ಜೆಡಿಎಸ್‌ 2 ಸ್ಥಾನ ಗೆದ್ದಿದೆ. ಒಟ್ಟು 19 ಗೆದ್ದಂತಾಗಿದೆ. 2019ರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಜೆಪಿ 25 ಸ್ಥಾನಗಳನ್ನು ಗೆದ್ದು ಬೀಗಿತ್ತು. ಎಂಟು ಸ್ಥಾನ ಕಳೆದುಕೊಂಡಿದೆ.

ಟಿಕೆಟ್‌ ಹಂಚಿಕೆಯಲ್ಲಿ ಮಾಡಿದ ಕೆಲವು ಪ್ರಯೋಗಗಳು ಫಲ ನೀಡಿದೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಮತ್ತು ಹೊಸಬರಿಗೆ ಅವಕಾಶ ನೀಡಿದ್ದು ಅನುಕೂಲವಾಗಿದೆ. ಚಿಕ್ಕಮಗಳೂರು– ಉಡುಪಿ, ಮಂಗಳೂರು, ಉತ್ತರ ಕನ್ನಡ, ಮೈಸೂರು, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಪ್ರಯೋಗ ಫಲ ನೀಡಿದೆ.

ಅಲ್ಲದೇ, ಒಕ್ಕಲಿಗ, ಲಿಂಗಾಯತ ಮತಗಳು ಬಿಜೆಪಿಯ ಕೈ ಹಿಡಿದಿವೆ. ವಿಧಾನಸಭಾ ಚುನಾವಣೆಯಲ್ಲಿ ಈ ಎರಡೂ ಸಮುದಾಯಗಳು ಕಾಂಗ್ರೆಸ್‌ನತ್ತ ಮುಖ ಮಾಡಿದ್ದವು. ಪಕ್ಷದ ಭದ್ರಕೋಟೆ ಎನಿಸಿರುವ ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡು ಮತ್ತು ಬೆಂಗಳೂರಿನ ಮೂರು ಕ್ಷೇತ್ರಗಳಲ್ಲೂ ತನ್ನ ಪ್ರಾಬಲ್ಯವನ್ನು ಬಿಜೆಪಿ ಉಳಿಸಿಕೊಂಡಿದೆ. ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪುನಃ ಆದ್ಯತೆ ನೀಡಿದ್ದು ಹಾಗೂ ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನ ತಂದಿದ್ದು, ಈ ಚುನಾವಣೆಯಲ್ಲಿ ಅನುಕೂಲವೂ ಆಗಿದೆ. ಪಕ್ಷದೊಳಗಿನ ಅಸಮಾಧಾನ ಮತ್ತು ಅತೃಪ್ತಿಯ ಮಧ್ಯೆಯೂ ಯಡಿಯೂರಪ್ಪ ಮತ್ತು ವಿಜಯೇಂದ್ರ ಪಕ್ಷಕ್ಕೆ ಕೊಂಚ ಮಟ್ಟಿಗೆ ಶಕ್ತಿ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಕ್ಷೇತ್ರದಲ್ಲಿ ಬಂಡಾಯವಾಗಿ ಸ್ಪರ್ಧಿಸಿದ ಕೆ.ಎಸ್‌.ಈಶ್ವರಪ್ಪ ಅವರು ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರ ಗೆಲುವನ್ನು ತಡೆಯುವಲ್ಲಿ ಯಶಸ್ವಿ ಆಗಲಿಲ್ಲ. ಕೊಪ್ಪಳ ಕ್ಷೇತ್ರದಲ್ಲಿ ಕರಡಿ ಸಂಗಣ್ಣ ಅವರ ರಾಜೀನಾಮೆ ಪಕ್ಷದ ಹಿನ್ನಡೆಗೆ ಕಾರಣವಾಯಿತು. ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್ ಅವರಿಗೆ ಪ್ರಬಲ ಪೈಪೋಟಿ ಇದ್ದರೂ ಗೆಲುವಿನ ದಡ ದಾಟಿದರು. ಹಾವೇರಿಯಲ್ಲಿ ಮಾಜಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ಮೂರು– ನಾಲ್ಕು ತಿಂಗಳಿಂದ ಕಠಿಣ ಪರಿಶ್ರಮ ಹಾಕಿದರೂ ಪ್ರಯಾಸದ ಗೆಲುವು ಕಂಡಿದ್ದಾರೆ.

ಆದರೆ, ಲೋಕಸಭಾ ಚುನಾವಣೆ ಬಳಿಕ ಪಕ್ಷದಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತವೆ ಎಂದು ಭವಿಷ್ಯ ನುಡಿದಿದ್ದ ನಾಯಕರು ಮುಂದೆ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು. ರಾಷ್ಟ್ರಮಟ್ಟದಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸದೇ ಸಂಕಷ್ಟದಲ್ಲಿ ಇರುವುದರಿಂದ ಯಡಿಯೂರಪ್ಪ ವಿರೋಧಿಗಳ ಮುಂದಿನ ನಡೆಯ ಬಗ್ಗೆಯೂ ಕುತೂಹಲ ಮೂಡಿಸಿದೆ. ಪಕ್ಷಕ್ಕೆ ಸವಾಲುಗಳು ಸಾಕಷ್ಟಿವೆ. ಈ ಹಿಂದಿನಂತೆ ಕೇಂದ್ರದಲ್ಲಿ ಬಿಜೆಪಿಯ ಪ್ರಬಲ ಸರ್ಕಾರವೂ ಇರುವುದಿಲ್ಲ. ರಾಷ್ಟ್ರೀಯ ಮಟ್ಟದಲ್ಲೂ ಪಕ್ಷದಲ್ಲಿ ಹಿಂದಿನಂತೆ ಮೋದಿ– ಶಾ ಅವರ ಹಿಡಿತ ಮುಂದುವರೆಯುತ್ತದೆ ಎಂಬುದು ಯಕ್ಷ ಪ್ರಶ್ನೆ. ಇದೂ ರಾಜ್ಯದ ಮೇಲು ಪ್ರಭಾವ ಬೀರಲಿದೆ.

‘ದುಬಾರಿಯಾದ ಅನಂತಕುಮಾರ್ ಹೆಗಡೆ ಹೇಳಿಕೆ’

ಸಂವಿಧಾನ ಬದಲಾವಣೆ ಕುರಿತು ಅನಂತಕುಮಾರ್ ಹೆಗಡೆ ಅವರು ನೀಡಿದ ಹೇಳಿಕೆ ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಹಿನ್ನಡೆಗೆ ಕಾರಣವಾಗಿರಬಹುದೇ ಎಂಬ ಚರ್ಚೆ ಈಗ ಪಕ್ಷದಲ್ಲಿ ಆರಂಭವಾಗಿದೆ. ‘ಚುನಾವಣೆಗೂ ಮೊದಲೇ ಸಕ್ರಿಯರಾದ ಅನಂತಕುಮಾರ್ ಹೆಗಡೆ ಅವರು ಪಕ್ಷ ಈ ಬಾರಿ 400 ಸ್ಥಾನಗಳನ್ನು ಗೆದ್ದರೆ ಸಂವಿಧಾನವನ್ನು ಬದಲಿಸಲಿದೆ ಎಂಬುದಾಗಿ ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ದೊಡ್ಡ ಪ್ರಚಾರ ಪಡೆದುಕೊಂಡಿತು. ಇದನ್ನು ಕಾಂಗ್ರೆಸ್‌ ಪ್ರಬಲ ಅಸ್ತ್ರವಾಗಿ ಬಳಸಿಕೊಂಡಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಪತ್ರಿಕಾಗೋಷ್ಠಿ ಮಾಡಿ ಬಿಜೆಪಿ ಮೇಲೆ ಹರಿಹಾಯ್ದರು. ರಾಹುಲ್‌ಗಾಂಧಿ ತಮ್ಮ ಪ್ರಚಾರದ ಉದ್ದಕ್ಕೂ ಇದನ್ನು ಪ್ರಸ್ತಾಪಿಸಿದರು. ಇದರ ಪರಿಣಾಮ ಪರಿಶಿಷ್ಟ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಸೋಲು ಅನುಭವಿಸಿದೆ’ ಎಂಬ ವ್ಯಾಖ್ಯಾನ ಬಿಜೆಪಿ ವಲಯದಲ್ಲಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.