ADVERTISEMENT

ಸಂದರ್ಶನ: ಕಾಂಗ್ರೆಸ್‌ ‘ಗ್ಯಾರಂಟಿ’ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ– BS ಯಡಿಯೂರಪ್ಪ

ಕರ್ನಾಟಕದಲ್ಲಿ ಮೋದಿ ಅಲೆ 10 ಪಟ್ಟು ಹೆಚ್ಚಾಗಿದೆ: ಬಿ.ಎಸ್.ಯಡಿಯೂರಪ್ಪ

ವೆಂಕಟೇಶ ಜಿ.ಎಚ್.
Published 30 ಏಪ್ರಿಲ್ 2024, 23:36 IST
Last Updated 30 ಏಪ್ರಿಲ್ 2024, 23:36 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ರಾಜ್ಯದಾದ್ಯಂತ ಚುನಾವಣಾ ಪ್ರಚಾರ ಸಭೆಗಳ ತರಾತುರಿ ನಡುವೆಯೇ ಹಿರಿಯ ಪುತ್ರ, ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಜಿಲ್ಲೆಯಾದ್ಯಂತ ಆಯೋಜಿಸಲಾದ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ. ಕಿರಿಯ ಪುತ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಆಗಾಗ ಕರೆ ಮಾಡಿ ಕರ್ನಾಟಕದಲ್ಲಿ 2ನೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವ 14 ಜಿಲ್ಲೆಗಳಲ್ಲಿನ ಪ್ರಚಾರ, ರಾಜಕೀಯ ಬೆಳವಣಿಗೆಗಳ ಮಾಹಿತಿ ಪಡೆಯುವ ಧಾವಂತಲ್ಲಿದ್ದ ಸಂದರ್ಭ 'ಪ್ರಜಾವಾಣಿ'ಯೊಂದಿಗೆ ಮಾತಿಗೆ ಸಿಕ್ಕರು.

* ಕರ್ನಾಟಕದ ಜನತೆ ಬಿಜೆಪಿಯನ್ನು ಏಕೆ ಗೆಲ್ಲಿಸಬೇಕು?

ಮೊದಲನೆಯದ್ದು ಕಾಂಗ್ರೆಸ್ ಸರ್ಕಾರದಲ್ಲಿನ ವ್ಯಾಪಕ ಭ್ರಷ್ಟಾಚಾರ. ಎರಡನೇಯದ್ದು ಅಭಿವೃದ್ಧಿ ಯೋಜನೆಗಳು ಸಂಪೂರ್ಣ ಸ್ಥಗಿತಗೊಂಡಿರುವುದು. ಈ ಸರ್ಕಾರ ಬಂದ ಮೇಲೆ ರಾಜ್ಯದ ಯಾವುದೇ ಭಾಗದಲ್ಲಿ ಹೊಸದಾಗಿ ಒಂದು ಕಿ.ಮೀ ರಸ್ತೆ ಕೂಡ ನಿರ್ಮಾಣ ಆಗಿಲ್ಲ. ಮೂರನೆಯದ್ದು ಅನುದಾನ ದೊರೆಯದೇ ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಈ ಎಲ್ಲ ಅಂಶಗಳು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶ ಮೂಡಿಸಿವೆ. ಈ ಸರ್ಕಾರ ಕೇವಲ 10 ತಿಂಗಳಲ್ಲಿಯೇ ರಾಜ್ಯದ ಜನರ ನಂಬಿಕೆ, ವಿಶ್ವಾಸ ಕಳೆದುಕೊಂಡಿದೆ.

ADVERTISEMENT

ಸಿದ್ದರಾಮಯ್ಯ ಇಲ್ಲವೇ ಕಾಂಗ್ರೆಸ್‌ನವರು ತಮ್ಮ ಪ್ರಧಾನಿ ಅಭ್ಯರ್ಥಿಯ ಹೆಸರು ಹೇಳಲಿ ನೋಡೋಣ. ಅವರ ಮುಂದೆ ಯಾರ ಹೆಸರೂ ಇಲ್ಲ. ಆದರೆ, ನರೇಂದ್ರ ಮೋದಿ ಇಡೀ ವಿಶ್ವವೇ ಕೊಂಡಾಡುತ್ತಿರುವ ವ್ಯಕ್ತಿ. ಮೋದಿ ಕೇಂದ್ರದಲ್ಲಿ ಮತ್ತೆ ಸರ್ಕಾರ ರಚಿಸುವುದನ್ನು ಜನರು ಕಾತರದಿಂದ ಕಾಯುತ್ತಿದ್ದಾರೆ. 

* ಬಿಜೆಪಿಗೆ ಕರ್ನಾಟಕದಲ್ಲಿ ಅನುಕೂಲಕರ ಪರಿಸ್ಥಿತಿ ಇದೆಯೇ?

ಖಂಡಿತಾ ಇದೆ. ಬೇರೆ ಎಲ್ಲ ಕಡೆಗಿಂತ ಪ್ರಧಾನಿ ಮೋದಿ ಅವರ ಗಾಳಿ ಕರ್ನಾಟಕದಲ್ಲಿ ಹೆಚ್ಚಾಗಿ ಬೀಸುತ್ತಿದೆ. ಹಿಂದಿನ ಎರಡು ಚುನಾವಣೆಗಳಿಗಿಂತ ಈ ಬಾರಿ ಕರ್ನಾಟಕದಲ್ಲಿ ಮೋದಿ ಅಲೆ 10 ಪಟ್ಟು ಹೆಚ್ಚಾಗಿದೆ. ಅದರ ನೆರವಿನಿಂದ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇವೆ. ಕರ್ನಾಟಕದಲ್ಲಿ ಈಗಾಗಲೇ ಮೊದಲ ಹಂತದಲ್ಲಿ ಚುನಾವಣೆ ನಡೆದಿರುವ 14 ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸಲಿದ್ದೇವೆ. ಈ ದಾಖಲೆಯ ಗೆಲುವಿನೊಂದಿಗೆ ಬಿಜೆಪಿ–ಜೆಡಿಎಸ್‌ ಮೈತ್ರಿಯ ಲೋಕಸಭಾ ಸದಸ್ಯರನ್ನು ದೆಹಲಿಗೆ ಕರೆದೊಯ್ದು ಮೋದಿ ಅವರ ಮುಂದೆ ನಿಲ್ಲಿಸುವೆ.

* ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲವೇ ಇಲ್ಲ. ಇಲ್ಲಿರೋದು ಗ್ಯಾರಂಟಿ ಅಲೆ ಮಾತ್ರ ಅನ್ನುತ್ತಿದ್ದಾರೆ?

ಆ ಸಿದ್ದರಾಮಯ್ಯನವರು ಏನು ಬೇಕಾದರೂ ಮಾತಾಡಲಿ. ರಾಜ್ಯದ ಜನರು ಗ್ಯಾರಂಟಿ ಮತ್ತೊಂದನ್ನು ಲೆಕ್ಕಕ್ಕೆ ಇಟ್ಟಿಲ್ಲ. ಅದಕ್ಕೆಲ್ಲ ಕವಡೆ ಕಾಸಿನ ಕಿಮ್ಮತ್ತಿಲ್ಲ. ಈ ಚುನಾವಣೆ ವಿಧಾನಸಭೆಯದ್ದಲ್ಲ. ಬದಲಿಗೆ, ಲೋಕಸಭೆಗೆ ನಡೆಯುತ್ತಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂಬ ಆಶಯ ಮಾತ್ರ ಈ ಚುನಾವಣೆಯಲ್ಲಿ ಕೆಲಸ ಮಾಡಲಿದೆ. ‘ಗ್ಯಾರಂಟಿ’ ಯೋಜನೆಗಳಿಂದ ಯಾವುದೇ ಪರಿಣಾಮ ಆಗುವುದಿಲ್ಲ. ಅಲೆ ಮೋದಿಯದ್ದೋ, ಗ್ಯಾರಂಟಿಯದ್ದೋ ಎಂದು ತಿಳಿಯಲು ಫಲಿತಾಂಶ ಬರುವವರೆಗೂ ಕಾಯಿರಿ.

* ಮೋದಿ ಅಲೆ ಇದ್ದಿದ್ದಾದರೆ ರಾಜ್ಯದ 10 ಜನ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿದ್ದೇಕೆ?

ಆಯಾ ಪರಿಸ್ಥಿತಿ, ಮಾನದಂಡ ಆಧರಿಸಿ ಪಕ್ಷದ ವರಿಷ್ಠರು ಅಭ್ಯರ್ಥಿ ಬದಲಾವಣೆ ಮಾಡಿದ್ದಾರೆ. ಟಿಕೆಟ್‌ ಕೈ ತಪ್ಪಿದ್ದರಿಂದ ಚುನಾವಣೆಯಲ್ಲಿ ಯಾವುದೇ ಪರಿಣಾಮ ಆಗುವುದಿಲ್ಲ. ಎಲ್ಲರೂ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಟಿಕೆಟ್ ಸಿಗಲಿ, ಸಿಗದಿರಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲಿಯೂ ಒಡಕಿನ ಒಂದು ಶಬ್ದ ಕೇಳುತ್ತಿಲ್ಲ.

* ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಕೈ ಸುಟ್ಟುಕೊಂಡಿತ್ತು ಎಂದೇ ವಿಶ್ಲೇಷಿಸಲಾಯಿತು. ಈ ಬಾರಿ ಜೆಡಿಎಸ್‌ ಜೊತೆಗಿನ ಹೊಂದಾಣಿಕೆ ಬಿಜೆಪಿಗೆ ಯಾವ ರೀತಿಯ ಅನುಭವ ತಂದುಕೊಡಲಿದೆ?

ಪ್ರಧಾನಿ ಮೋದಿ ಅವರೊಂದಿಗೆ ದೇವೇಗೌಡರ ಸಂಬಂಧ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿಯೇ ಈ ಹೊಂದಾಣಿಕೆ ಸಾಧ್ಯವಾಗಿದೆ. ಇದು ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲು ದೊಡ್ಡ ಶಕ್ತಿ ತಂದುಕೊಟ್ಟಿದೆ. ಈ ಮೈತ್ರಿ ಬರೀ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಲ್ಲ. ಮುಂದೆಯೂ ಇರಲಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಎಚ್‌.ಡಿ.ಕುಮಾರಸ್ವಾಮಿ, ದೇವೇಗೌಡರು ಸೇರಿದಂತೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ.

* ಹಾಸನ, ಮಂಡ್ಯದಲ್ಲಿ ಬಿಜೆಪಿ ನಮಗೆ ಸಹಕಾರ ಕೊಡಲಿಲ್ಲ ಎಂದು ದೇವೇಗೌಡರು ಅಸಹನೆ ವ್ಯಕ್ತಪಡಿಸಿದ್ದಾರೆ?

ದೇವೇಗೌಡರು ಹೇಳಿದ ಮಾತು ಕೇಳಿಸಿಕೊಂಡಿದ್ದೇನೆ. ಹಾಸನ, ಮಂಡ್ಯದಲ್ಲಿ ಯಾರೋ ಒಬ್ಬಿಬ್ಬರು ಕಾರ್ಯಕರ್ತರು ನಾವು ಹೇಳಿದರೂ ಕೇಳದೇ ಅಸಹಕಾರ ತೋರಿದ್ದಾರೆ. ಸಣ್ಣಪುಟ್ಟ ಕಾರ್ಯಕರ್ತರು ಮಾಡಿದ ತಪ್ಪಿಸಿನಿಂದ ಒಂದೆರಡು ಕಡೆ ಸಮಸ್ಯೆ ಆಗಿರುವುದು ನಿಜ. ಅದೆಲ್ಲವನ್ನೂ ಸರಿಪಡಿಸಿದ್ದೇವೆ. ಎರಡೂ ಪಕ್ಷಗಳ ನಡುವಿನ ಮೈತ್ರಿಗೆ ಅದರಿಂದ ಅಡ್ಡಿಯಾಗುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಪರಸ್ಪರ ಬೆಂಬಲ ನೀಡುತ್ತಿದ್ದೇವೆ. ಇದು ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳ ಗೆಲುವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

* ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 65 ಸ್ಥಾನಕ್ಕೆ ಕುಸಿದಿದೆ. ವರ್ಷದೊಳಗೆ ಆ ನಷ್ಟ ಹೇಗೆ ಕಟ್ಟಿಕೊಳ್ಳುತ್ತೀರಿ?

ಬೇರೆ ಬೇರೆ ಕಾರಣಕ್ಕೆ ವಿಧಾನಸಭೆ ಚುನಾವಣೆ ವೇಳೆ ಹಿನ್ನಡೆ ಆಗಿದ್ದು ನಿಜ. ಈಗ ಆ ಪರಿಸ್ಥಿತಿ ಇಲ್ಲ. 28 ಲೋಕಸಭಾ ಕ್ಷೇತ್ರಗಳಲ್ಲೂ ಗೆದ್ದು ತೋರಿಸುತ್ತೇವೆ. ಫಲಿತಾಂಶ ಬರುವವರೆಗೂ ಕಾದು ನೋಡಿ. ವಿಧಾನಸಭಾ ಚುನಾವಣೆಯಲ್ಲಿ ಆದ ನಷ್ಟವನ್ನು ಹೇಗೆ ಕಟ್ಟಿಕೊಂಡಿದ್ದೇವೆ ಎಂಬುದು ಗೊತ್ತಾಗಲಿದೆ.

* ಕಾಂಗ್ರೆಸ್ 136 ಸ್ಥಾನಗಳೊಂದಿಗೆ ಸುಭದ್ರವಾಗಿದೆ. ಲೋಕಸಭಾ ಚುನಾವಣೆ ನಂತರ ಸರ್ಕಾರ ಬೀಳಲಿದೆ ಎಂದು ನೀವು ಹೇಳುತ್ತಿದ್ದೀರಿ. ಮತ್ತೆ ಆಪರೇಷನ್ ಕಮಲ ಆರಂಭಿಸುವಿರಾ?

ಇಲ್ಲ. ಆಪರೇಷನ್ ಕಮಲ ಮಾಡುವ ಅಗತ್ಯವೇ ಇಲ್ಲ. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಲ್ಲೂ ಸೋತ ಮೇಲೆ ನೈತಿಕ ಹೊಣೆ ಹೊತ್ತು ಸಹಜವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜೀನಾಮೆ ಕೊಡುವ ವಾತಾವರಣ ಸೃಷ್ಟಿಯಾಗಲಿದೆ. ಆಗ ಸರ್ಕಾರ ತಾನಾಗಿಯೇ ಪತನವಾಗಲಿದೆ. ಎಲ್ಲದಕ್ಕೂ ಕಾದು ನೋಡೋಣ. ನಾವಂತೂ (ಬಿಜೆಪಿ) ಯಾವ ಕಾರಣಕ್ಕೂ ಈ ಸರ್ಕಾರ ಬೀಳಿಸಲು ಪ್ರಯತ್ನ ಮಾಡುವುದಿಲ್ಲ

* ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ನಿಮ್ಮ ಕುಟುಂಬದ ವಿರುದ್ಧ ಬಂಡಾಯ ಎದ್ದಿದ್ದಾರಲ್ಲ?

ನಾನು ಆ ಬಗ್ಗೆ ಏನೂ ಪ್ರತಿಕ್ರಿಯೆ ವ್ಯಕ್ತಪಡಿಸೊಲ್ಲ. ಅವರ (ಕೆ.ಎಸ್‌.ಈಶ್ವರಪ್ಪ) ಹೆಸರು ಹೇಳಲು ಇಷ್ಟಪಡುವುದಿಲ್ಲ.

* ಟಿಕೆಟ್ ಹಂಚಿಕೆ ನಂತರ ಬಿಜೆಪಿಯಲ್ಲಿ ನಡೆದಿದ್ದ ಒಳಜಗಳ ನಿಂತಿದೆಯೇ? ಮುನಿಸು ಮರೆತು ಎಲ್ಲರೂ ಒಟ್ಟಾಗಿದ್ದಾರಾ?

ರಾಜ್ಯದ ಜನರು ನೂರಕ್ಕೆ ನೂರು ಬಿಜೆಪಿಯ ಜೊತೆ ಇದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಪಕ್ಷದಲ್ಲಿನ ಒಳಜಗಳ ಏನೂ ಪರಿಣಾಮ ಬೀರುವುದಿಲ್ಲ. ಯಾರದ್ದೇ ಯಾವುದೇ ರೀತಿಯ ಹೇಳಿಕೆಗಳು ನಮ್ಮ ಪಕ್ಷದ ಮೇಲೆ ಪರಿಣಾಮ ಬೀರೊಲ್ಲ. ದಾವಣಗೆರೆಯಲ್ಲಿ ರೇಣುಕಾಚಾರ್ಯ ಸೇರಿದಂತೆ ಮುನಿಸಿಕೊಂಡಿದ್ದ ಎಲ್ಲರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಮತ್ತೊಮ್ಮೆ ಮಾತನಾಡುವೆ.

* ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ಪದೇಪದೇ ಹೇಳುತ್ತಿದ್ದೀರಿ. ಇಷ್ಟೊಂದು ವಿಶ್ವಾಸ ಹೇಗೆ? ನಿಮ್ಮ ಈ ಉತ್ಸಾಹದ ಗುಟ್ಟೇನು?

ನಾನು ಎಲ್ಲ ಕಡೆ ಪ್ರವಾಸ ಮಾಡುತ್ತಿದ್ದೇನೆ. ಶಿವಮೊಗ್ಗ ಜಿಲ್ಲೆ ಮಾತ್ರವಲ್ಲ. ಇಡೀ ರಾಜ್ಯ ಸುತ್ತುತ್ತಿದ್ದೇನೆ. ಜನರ ಪ್ರತಿಕ್ರಿಯೆ ಕಂಡು ಫಲಿತಾಂಶದ ಬಗ್ಗೆ ಇಷ್ಟೊಂದು ವಿಶ್ವಾಸದಿಂದ ಹೇಳುತ್ತಿದ್ದೇನೆ. ಈಗ ನನಗೆ 82 ವರ್ಷ. ದೇವರು ಶಕ್ತಿ ಕೊಟ್ಟರೆ ಇನ್ನೊಂದು ಲೋಕಸಭಾ ಚುನಾವಣೆ ಇದೇ ರೀತಿ ಮಾಡಬೇಕು ಅಂದುಕೊಂಡಿದ್ದೇನೆ. ದೇವರು ಆ ಶಕ್ತಿ ಕೊಡಬೇಕು ಅಷ್ಟೇ. ಓಡಾಟ ಮಾಡಿದಷ್ಟು ಜನರೊಂದಿಗೆ ಬೆರೆತಷ್ಟು, ಸಭೆ–ಸಮಾರಂಭಗಳಿಗೆ ಹೋದಷ್ಟು ನನಗೆ ಉತ್ಸಾಹ ಹೆಚ್ಚುತ್ತದೆ. ಆರೋಗ್ಯವೂ ಸುಧಾರಿಸುತ್ತದೆ.

* ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಧೋರಣೆ ಸರಿಯೇ?

ಬರ ಪರಿಹಾರಕ್ಕೆ ಅನುದಾನ ಬಿಡುಗಡೆ ವಿಚಾರವನ್ನು ಕಾಂಗ್ರೆಸ್‌ ಸರ್ಕಾರ ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಕೆಲವೊಂದು ಆಡಳಿತಾತ್ಮಕ ಪ್ರಕ್ರಿಯೆಗಳ ಕಾರಣಕ್ಕೆ ಕೇಂದ್ರದಿಂದ ಅನುದಾನ ಬಿಡುಗಡೆ ವಿಳಂಬವಾಗಿತ್ತು. ಆಗ ರಾಜ್ಯದ ಖಜಾನೆಯಿಂದಲೇ ರೈತರಿಗೆ ಪರಿಹಾರ ಕೊಟ್ಟು ನೆರವಾಗಿದ್ದೆ. ನಂತರ ಕೇಂದ್ರ ಅನುದಾನ ಬಿಡುಗಡೆ ಮಾಡಿತ್ತು.

* ಮಹಿಳೆಯರ ಮಾಂಗಲ್ಯ, ಆಸ್ತಿ ಹಂಚಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಸಮರ್ಥಿಸುವಿರಾ?

ನಾನು ಆ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ. ನರೇಂದ್ರ ಮೋದಿ ಅವರು ಎರಡೂ ವಿಷಯಗಳ ಬಗ್ಗೆ ಗಂಭೀರವಾಗಿ ತಮ್ಮದೇ ಧಾಟಿಯಲ್ಲಿ ಹೇಳಿದ್ದಾರೆ. ಅದನ್ನು ಯಾರೂ ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ.

* ಶಿವಮೊಗ್ಗದಲ್ಲಿ ತ್ರಿಕೋನ ಸ್ಪರ್ಧೆಯಿಂದ ಬಿಜೆಪಿಗೆ ಹಿನ್ನಡೆ ಆಗಲಿದೆಯೇ?

ಇಲ್ಲ. ಶಿವಮೊಗ್ಗದಲ್ಲಿ ಪುತ್ರ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಲಿದ್ದಾರೆ. ಸಂಸದರಾಗಿ ಕಳೆದ 10 ವರ್ಷಗಳಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಾವೂ ಭದ್ರಾವತಿಯ ವಿಐಎಸ್‌ಎಲ್‌ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಅದನ್ನು ಶಾಶ್ವತವಾಗಿ ಉಳಿಸಲು ಇನ್ನೂ ಶಕ್ತಿ ಮೀರಿ ಪ್ರಯತ್ನ ಮುಂದುವರೆಸಲಿದ್ದೇವೆ. ಮೀಸಲಾತಿ ಕಾರಣಕ್ಕೆ ಜಿಲ್ಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆ ವೇಳೆ ಮುನಿಸಿಕೊಂಡಿದ್ದ ಲಂಬಾಣಿ, ಬೋವಿ ಸಮಾಜದವರೂ ನಮ್ಮೊಂದಿಗೆ ಇದ್ದಾರೆ. ಈಗ ಅವರಿಗೂ ವಾಸ್ತವ ಅರ್ಥವಾಗಿದೆ.

* ಚುನಾವಣೆ ನಂತರ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಲಾಗುತ್ತದೆ ಎಂದು ಬಿಜೆಪಿ ಮುಖಂಡರೇ ಹೇಳುತ್ತಿದ್ದಾರೆ?

ಯಾರು ಹೇಳುತ್ತಿದ್ದಾರೆ. ಯಾರೋ ತಲೆಕೆಟ್ಟವರು ಹೇಳಿದ ಮಾತಿಗೆ ನೀವು ನನಗೆ ಪ್ರಶ್ನೆ ಕೇಳಿದರೆ ಏನು ಉತ್ತರ ಕೊಡಲಿ. ವಿಜಯೇಂದ್ರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಆಗಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ರಾಜ್ಯದ ಜನರು ಇಷ್ಟೊಂದು ಪ್ರೀತಿ–ವಿಶ್ವಾಸ ಗೌರವ ತೋರುತ್ತಿದ್ದಾರೆ. ಅವರು ಅಧ್ಯಕ್ಷರಾದ ಮೇಲೇ ಪಕ್ಷ ಇವತ್ತು ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಕಾರಣವಾಗಿದೆ. ಯಾರೋ ಅಲ್ಲೊಬ್ಬರು ಇಲ್ಲೊಬ್ಬರು ಮಾತಾಡಿದರೆ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.