ADVERTISEMENT

ನಾಮಪತ್ರ ಸಲ್ಲಿಸಲು ‘ಕಾಲ’ ನೋಡಲ್ಲ: ಸಚಿವ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 13:31 IST
Last Updated 6 ಏಪ್ರಿಲ್ 2024, 13:31 IST
<div class="paragraphs"><p>ಸಚಿವ ಸತೀಶ ಜಾರಕಿಹೊಳಿ</p></div>

ಸಚಿವ ಸತೀಶ ಜಾರಕಿಹೊಳಿ

   

ಬೆಳಗಾವಿ: ‘ನಾಮಪತ್ರ ಸಲ್ಲಿಸುವಾಗ ಮೌಢ್ಯ ಅನುಸರಿಸಲ್ಲ. ಒಳ್ಳೆಯ ಕಾಲ, ಕೆಟ್ಟ ಕಾಲ ಎಂಬುದು ಇಲ್ಲ. ನಮ್ಮ ಎಲ್ಲ ಶಾಸಕರು ಲಭ್ಯವಿದ್ದ ದಿನ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಗಳು ಪ್ರಿಯಾಂಕಾ ನಾಮಪತ್ರ ಸಲ್ಲಿಸುವರು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾವು ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ. ಕೆಟ್ಟದ್ದು ಮಾಡಿದರೆ ಕೆಟ್ಟದ್ದಾಗುತ್ತದೆ. ಕಾಲದ ಮೇಲೆ ಯಾವುದೂ ಅವಲಂಬಿತವಲ್ಲ. ಬೇರೆಡೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ನಾನು ಹೋಗಬೇಕು. ಪ್ರಿಯಾಂಕಾ ನಾಮಪತ್ರ ಸಲ್ಲಿಸುವಾಗ ಸಮಯ ಹೊಂದಿಸಿಕೊಳ್ಳುವೆ’ ಎಂದರು.

ADVERTISEMENT

‘ಚಿಕ್ಕೋಡಿಯಲ್ಲಿ ಪ್ರಿಯಾಂಕಾ ವಿರುದ್ಧ ಮೋದಿ ಎಂಬ ರೀತಿಯ ಸ್ಪರ್ಧೆ ಇಲ್ಲ. ಅಲ್ಲಿ ಮೋದಿ ಪಾತ್ರ ಇಲ್ಲವೇ ಇಲ್ಲ. ಏನಿದ್ದರೂ‌ ಜೊಲ್ಲೆ ವಿರುದ್ಧ ಪ್ರಿಯಾಂಕಾ‌ ಸ್ಪರ್ಧೆ. ಅಭಿವೃದ್ಧಿಯ ಮೇಲೆ ಚುನಾವಣೆ ನಡೆಯಲಿದೆ’ ಎಂದರು.

‘ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ಗೆ ಮತ ತಂದುಕೊಡುವುದಿಲ್ಲ’ ಎಂಬ ಅಣ್ಣಾಸಾಹೇಬ ಜೊಲ್ಲೆ ಅವರ ಮಾತಿಗೆ ಉತ್ತರಿಸಿದ ಅವರು, ‘ಒಂದು‌ ಬಡ ಕುಟುಂಬಕ್ಕೆ ಪ್ರತಿ ತಿಂಗಳು ₹4,000 ಕೊಡುತ್ತೇವೆ. ಇದರಲ್ಲಿ ಅವರ ಜೀವನ ನಡೆಯುತ್ತದೆ. ವಿಧವೆಯರು, ಮಕ್ಕಳು ಇಲ್ಲದವರು, ಮಕ್ಕಳಿಂದ ದೂರು ಉಳಿದವರಿಗೂ ಗ್ಯಾರಂಟಿ ಆಸರೆಯಾಗಿವೆ. ಬಿಜೆಪಿಯವರು ಹತ್ತು ವರ್ಷಗಳಿಂದ ಸುಳ್ಳು ಹೇಳುತ್ತ ಬಂದಿದ್ದಾರೆ. ಹಾಗಾಗಿ, ಅವರಿಗೆ ಗ್ಯಾರಂಟಿ ಯೋಜನೆಗಳ ಮಹತ್ವ ತಿಳಿದಿಲ್ಲ’ ಎಂದರು.

‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಚುನಾವಣೆಯಲ್ಲಿ ನಮಗೆ ಲಾಭವಾಗುತ್ತದೆ. ಮಹಿಳೆಯರು ಸಾಕಷ್ಟು ಉತ್ಸಾಹದಲ್ಲಿದ್ದಾರೆ. ಬಿಜೆಪಿಯವರು ತಮಗೆ ಮೋದಿಯೇ ಗ್ಯಾರಂಟಿ ಎಂದು ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಮೋದಿಯವರದ್ದು ಯಾವುದೇ ಯೋಜನೆ ಇಲ್ಲ’ ಎಂದರು.

‘ಚಿಕ್ಕೋಡಿ ಕ್ಷೇತ್ರದಲ್ಲಿ ಅಣ್ಣಾಸಾಹೇಬ ಜೊಲ್ಲೆ ಅವರ ವಿರುದ್ಧ ಅಸಮಾಧಾನದ ಹೊಗೆ ಎದ್ದಿದೆ. ಕಾಂಗ್ರೆಸ್‌ ಪರವಾಗಿ ಜನ ಎಲ್ಲ ಕಡೆ ಬೆಂಬಲದ ಮಾತನಾಡುತ್ತಿದ್ದಾರೆ. ಚುನಾವಣೆ ಬಂದಾಗ ಜನರ ಬಳಿ ಹೋಗುತ್ತಿರುವ ಸಂಸದರು, ಇಷ್ಟು ವರ್ಷ ಕ್ಷೇತ್ರದ ಜನರನ್ನು ಮರೆತಿದ್ದಾರೆ ಎಂಬ ಅಭಿಪ್ರಾಯಗಳೂ ಬಂದಿವೆ. ಕೇಂದ್ರ ಸರ್ಕಾರ ಮಾಡಿದ ಕೆಲವು ಕೆಲಸಗಳನ್ನು ತಮ್ಮ ಕೆಲಸ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅವರದ್ದೇ ಎಂದು ಹೇಳಿಕೊಳ್ಳಲು ಒಂದೂ ಯೋಜನೆ ಇಲ್ಲ’ ಎಂದು ಆರೋಪಿಸಿದರು.

‘ನಾವು ಗ್ಯಾರಂಟಿ ಯೋಜನೆಗಳ ಜತೆಗೆ 30 ವರ್ಷಗಳಿಂದ ನಾನು ಮಾಡಿದ ಅಭಿವೃದ್ಧಿ ಕೆಲಸಗಳನ್ನೂ ಜನರಿಗೆ ಮುಟ್ಟಿಸುತ್ತಿದ್ದೇವೆ. ಸಾಕ್ಷಿ ಸಮೇತ ಮತ ಕೇಳುತ್ತೇವೆ. ಅದನ್ನು ಬಿಟ್ಟು ಬೇರೊಬ್ಬ ನಾಯಕನ ಹೆಸರಲ್ಲಿ ಕೇಳುವುದಿಲ್ಲ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನೀರು ಕೊಡುವುದು ಕಷ್ಟ:

‘ಈ ಬಾರಿ ಮಹಾರಾಷ್ಟ್ರದಲ್ಲೂ ನೀರಿನ ಕೊರತೆ ಇದೆ. ಹಾಗಾಗಿ, ಅಲ್ಲಿಂದ ನೀರು ಸಿಗುವುದು ಕಷ್ಟ. ನಾವೂ ಸಂಪರ್ಕದಲ್ಲಿದ್ದೇವೆ. ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ 1 ಟಿಎಂಸಿ ಅಡಿ ನೀರು ಬಿಡಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ಕುಡಚಿ, ಮಾಂಜರಿ ಮತ್ತು ಅಥಣಿಗೆ ಅನುಕೂಲ ಆಗಲಿದೆ. ಅಲ್ಲಲ್ಲಿ ನೀರು ಹಿಡಿದಿಟ್ಟು ಕೊಳ್ಳಲಾಗಿದೆ. ಸಾಧ್ಯವಾದಷ್ಟು ಕುಡಿಯುವ ನೀರಿನ ಸಮಸ್ಯೆ ನೀಗಿಸಲಾಗುತ್ತಿದೆ’ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.

‘ಮೈಸೂರಿನಲ್ಲಿ ಕಾಂಗ್ರೆಸ್‌ ಸೋತರೆ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬುದು ಶುದ್ಧ ಭ್ರಮೆ. ಹಿಂದೆಯೂ ಕಾಂಗ್ರೆಸ್‌ ಅಲ್ಲಿ ಸೋತಿದೆ. ದೇವೇಗೌಡರೂ ಸೋತಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗಲೇ ಅವರ ಪುತ್ರ ಮಂಡ್ಯದಲ್ಲಿ ಸೋತರು. ಆಗ ಯಾರಾದರೂ ಅಧಿಕಾರ ಬಿಟ್ಟರೆ? ಇಂಥ ಚರ್ಚೆ ಅನವಶ್ಯಕ’ ಎಂದರು.

ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮುಖಂಡ ರಾಜೇಂದ್ರ ಪಾಟೀಲ ಹಾಗೂ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.