ಮೈಸೂರು: ಈಶ್ವರಪ್ಪ ಬಿಜೆಪಿ ಕಟ್ಟಾಳು. ಚುನಾವಣೆಗೆ ಸ್ಪರ್ಧಿಸದಂತೆ ಅವರ ಮನವೊಲಿಸುವ ಪ್ರಯತ್ನ ಯಶಸ್ವಿ ಆಗಲಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಬಿಜೆಪಿ ದೊಡ್ಡ ಪಕ್ಷ. ಏಕಕಾಲಕ್ಕೆ ಎಲ್ಲರಿಗೂ ಅವಕಾಶ ಸಿಗದು. ಪಕ್ಷದ ನಿಷ್ಠಾವಂತ ಕಾರ್ಯಕರ್ತ ಆದವರು ನಿಷ್ಠರಾಗಿಯೇ ಉಳಿಯುತ್ತಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಅನುಕೂಲ ಆಗಿದೆ. ಮುಂಚೆ ಲಿಂಗಾಯತ, ಒಕ್ಕಲಿಗದಂತಹ ಪ್ರಬಲ ಸಮುದಾಯಗಳು ಒಂದೊಂದು ಪಕ್ಷದ ಜೊತೆ ಹೆಚ್ಚು ಗುರುತಿಸಿಕೊಳ್ಳುತ್ತಿದ್ದವು. ಈಗ ಎಲ್ಲ ಜಾತಿಗಳೂ ಒಂದೇ ವೇದಿಕೆಯಲ್ಲಿ ಒಗ್ಗೂಡಿವೆ. ರಾಜ್ಯದ ಒಂದು ಕ್ಷೇತ್ರದಲ್ಲೂ ಈ ಬಾರಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದರು.
' ಜೆಡಿಎಸ್ ಜೊತೆಗೂಡಿಯೇ ಪ್ರಚಾರ ಮಾಡುತ್ತೇವೆ. ಸೀಟು ಹಂಚಿಕೆ ಅಂತಿಮ ಆಗದ ಕಾರಣ ಅವರು ಹಿಂದಿನ ಪ್ರಚಾರ ಸಭೆಗಳಿಗೆ ಬಂದಿರಲಿಲ್ಲ. ಬಿಜೆಪಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಸಹ ಇದ್ದಾರೆ' ಎಂದರು.
ಸುಮಲತಾ ಒಳ್ಳೆಯ ಸಂಸದೆ: ಬಿಜೆಪಿಯಿಂದ ಸುಮಲತಾ ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಅವರು ಒಳ್ಳೆಯ ಸಂಸದೆ. ಆದರೆ ಮಂಡ್ಯ ಕ್ಷೇತ್ರ ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. ಮುಂದೆ ಪಕ್ಷ ಅವರಿಗೆ ಉತ್ತಮ ಅವಕಾಶಗಳನ್ನು ನೀಡಲಿದೆ ಎಂದರು.
ಪ್ರತಾಪಗಿಂತ ಯದುವೀರ್ ಉತ್ತಮ
ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ ಸಿಂಹಗಿಂತ ಉತ್ತಮ ಅಭ್ಯರ್ಥಿಯಾಗಿ ಯದುವೀರ್ ಸಿಕ್ಕಿದ ಕಾರಣ ಸಿಂಹ ಅವರಿಗೆ ಟಿಕೆಟ್ ತಪ್ಪಿದೆ. ಮೈಸೂರಿಗೆ ರಾಜರ ಕುಟುಂಬ ಅಪಾರ ಕೊಡುಗೆ ನೀಡಿದೆ. ಆ ಬಗ್ಗೆ ಜನರಲ್ಲಿ ಅಭಿಮಾನ, ಗೌರವ ಇದೆ' ಎಂದು ರಾಧಾ ಮೋಹನದಾಸ್ ಅಗರವಾಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.