ಬೆಂಗಳೂರು: ನಗರ ವ್ಯಾಪ್ತಿಯ ಎಲ್ಲಾ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಮತದಾನದ ದಿನ ರಜೆ ನೀಡಿ, ಎಲ್ಲರಿಂದಲೂ ಕಡ್ಡಾಯ ಮತದಾನ ಮಾಡಿಸಲು ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದರು.
ಐಟಿ-ಬಿಟಿ ಇಲಾಖೆ ಸಹಯೋಗದಲ್ಲಿ ಐಟಿ-ಬಿಟಿ ಸಂಸ್ಥೆಗಳ ಮುಖ್ಯಸ್ಥರ ಜೊತೆ ಮಂಗಳವಾರ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಐಟಿ-ಬಿಟಿ ಸಂಸ್ಥೆಗಳಲ್ಲಿ ಎಚ್‌ಆರ್‌ಎಂಎಸ್ ವ್ಯವಸ್ಥೆಯಿದ್ದು, ಆ ಮೂಲಕ ಸಿಬ್ಬಂದಿಗೆ ಮತದಾನ ಮಾಡಲು ಸಂದೇಶ ಕಳುಹಿಸಬೇಕು. ಎಲ್ಲಾ ಭಾಷೆಗಳಲ್ಲಿರುವ ‘ಮೈ ಭಾರತ್ ಹೂ’ ಚುನಾವಣಾ ಗೀತೆ ಹಾಗೂ ಇನ್ನಿತರೆ ಜಾಗೃತಿ ಸಂದೇಶಗಳ ದೃಶ್ಯಾವಳಿಗಳನ್ನು ಎಲ್ಲಾ ಸಂಸ್ಥೆಗಳ ಎಲ್‌ಇಡಿ ಪರದೆಗಳಲ್ಲಿ ಹಾಕಲು ಸೂಚಿಸಲಾಗಿದೆ ಎಂದು ಹೇಳಿದರು.
ಮತಗಟ್ಟೆಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಇರುವ ಮಾಹಿತಿ ನೀಡಲಾಗಿದ್ದು, ಈ ಬಾರಿ ಐಟಿ-ಬಿಟಿ ಸಂಸ್ಥೆಗಳಲ್ಲಿ ಹೆಚ್ಚು ಮತದಾನವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಏಕ್‌ರೂಪ್ ಕೌರ್ ಮಾತನಾಡಿ, ನಗರದಲ್ಲಿ ಸುಮಾರು 4,500 ಐಟಿ-ಬಿಟಿ ಸಂಸ್ಥೆಗಳಿವೆ. ಎಲ್ಲಾ ಸಂಸ್ಥೆಗಳಿಗೂ ಮತದಾನದ ದಿನವಾದ ಏಪ್ರಿಲ್ 26ರಂದು ರಜೆ ನೀಡಿ ಎಲ್ಲಾ ಮತದಾರರಿಗೆ ಮತ ಚಲಾಯಿಸಲು ಅನುಕೂಲ ಮಾಡಿಕೊಡಲು ಮನವಿ ಮಾಡಲಾಗಿದೆ. ರಜೆ ನೀಡುವ ಬಗ್ಗೆ ಸರ್ಕಾರವೂ ಆದೇಶ ಹೊರಡಿಸಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.