ನವದೆಹಲಿ: ಉತ್ತರ ಪ್ರದೇಶದ ಅಮೇಠಿ ಹಾಗೂ ರಾಯ್‌ಬರೇಲಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಭಾರಿ ಕುತೂಹಲ ಮೂಡಿಸಿದೆ. ಈ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಮುಂದಿನ 24ರಿಂದ 30 ತಾಸಿನೊಳಗೆ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಕಾಂಗ್ರೆಸ್ ಹೇಳಿದೆ.
ಅಮೇಠಿ ಹಾಗೂ ರಾಯ್‌ಬರೇಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪಕ್ಷದ ಕೇಂದ್ರ ಚುನಾವಣಾ ಸಮಿತಿಯು (ಸಿಇಸಿ) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ನೀಡಿದೆ. ಮುಂದಿನ 24-30 ತಾಸಿನೊಳಗೆ ಕಾಂಗ್ರೆಸ್ ಅಧ್ಯಕ್ಷರು ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ನಿರ್ಧಾರ ತೆಗೆದುಕೊಳ್ಳಲು ವಿಳಂಬ ಏಕೆ? ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಲು ಭಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಯಾವುದೇ ವಿಳಂಬವಾಗಿಲ್ಲ. ರಾಯ್‌ಬರೇಲಿಯಲ್ಲಿ ಬಿಜೆಪಿ ಕೂಡ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಸ್ಮೃತಿ ಇರಾನಿ ಅಮೇಠಿಯ ಹಾಲಿ ಸಂಸದೆ. ಯಾರಿಗೂ ಭಯವಿಲ್ಲ. ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿದೆ. ಮೇ 3ರವರೆಗೆ ಕಾಲಾವಕಾಶ ಇದೆ' ಎಂದು ಜೈರಾಮ್ ರಮೇಶ್ ವಿವರಿಸಿದ್ದಾರೆ.
ಅಮೇಠಿಯಿಂದ ರಾಹುಲ್ ಗಾಂಧಿ ಹಾಗೂ ರಾಯ್‌ಬರೇಲಿಯಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಣಕ್ಕಿಳಿಸುವಂತೆ ಉತ್ತರ ಪ್ರದೇಶದ ಕಾಂಗ್ರೆಸ್ ನೇತೃತ್ವವು ಸಿಇಸಿಗೆ ತಿಳಿಸಿತ್ತು. 2004ರಿಂದ ಅಮೇಠಿಯಿಂದ ಸತತ ಮೂರು ಬಾರಿ ಗೆದ್ದು ಬಂದಿದ್ದ ರಾಹುಲ್ ಗಾಂಧಿ ಅವರಿಗೆ 2019ರಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋಲು ಎದುರಾಗಿತ್ತು. 2019ರಲ್ಲಿ ರಾಹುಲ್ ಅವರು ಕೇರಳದ ವಯನಾಡ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಈ ಬಾರಿಯೂ ವಯನಾಡ್ ಕ್ಷೇತ್ರದಿಂದಲೇ ರಾಹುಲ್ ಸ್ಪರ್ಧಿಸುತ್ತಿದ್ದಾರೆ.
ಪಕ್ಷ ಏನೇ ಸೂಚನೆ ನೀಡಿದರೂ ಅದನ್ನು ಪಾಲಿಸುವುದಾಗಿ ರಾಹುಲ್ ಗಾಂಧಿ ಈ ಹಿಂದೆ ಹೇಳಿಕೆ ನೀಡಿದ್ದರು.
ಮೇ 20ರಂದು ಐದನೇ ಹಂತದಲ್ಲಿ ಅಮೇಠಿ ಹಾಗೂ ರಾಯ್‌ಬರೇಲಿಯಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಜೂನ್ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.