ADVERTISEMENT

ಮಹದೇವಪುರ ವಿಧಾನಸಭೆ ಚುನಾವಣೆ: ಸ್ಥಳೀಯ ಪ್ರಾತಿನಿಧ್ಯಕ್ಕೆ ಬಿಜೆಪಿ ಚಿಂತನೆ

ಮಹದೇವಪುರ: ಮುಳಬಾಗಿಲು ಶಾಸಕ ಎಚ್‌.ನಾಗೇಶ್ ಸ್ಪರ್ಧೆ; ಬದಲಾದ ತಂತ್ರಗಾರಿಕೆ

ಚಂದ್ರಹಾಸ ಹಿರೇಮಳಲಿ
Published 13 ಏಪ್ರಿಲ್ 2023, 10:10 IST
Last Updated 13 ಏಪ್ರಿಲ್ 2023, 10:10 IST
ಅರವಿಂದ ಲಿಂಬಾವಳಿ
ಅರವಿಂದ ಲಿಂಬಾವಳಿ   

ಬೆಂಗಳೂರು: ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರ ಮಹದೇವಪುರದಲ್ಲಿ 2008ರಿಂದ ಮೂರು ಬಾರಿ ಗೆಲುವು ಪಡೆದು ‘ಹ್ಯಾಟ್ರಿಕ್‌’ ಸಾಧಿಸಿದ್ದ ಬಿಜೆಪಿಯ ಅರವಿಂದ ಲಿಂಬಾವಳಿ ಅವರ ಪ್ರಾತಿನಿಧ್ಯಕ್ಕೆ ವಿರಾಮ ನೀಡಿ, ಸ್ಥಳೀಯರಿಗೆ ಟಿಕೆಟ್‌ ನೀಡಲು ಬಿಜೆಪಿ ಮುಂದಾಗಿದೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ತನ್ನ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಅದರಲ್ಲಿ ಮಹದೇವಪುರ ಕ್ಷೇತ್ರದ ಅಭ್ಯರ್ಥಿಯ ಹೆಸರಿಲ್ಲ. ಒಂದು ಕಾಲದಲ್ಲಿ ಬಿಜೆಪಿಯ ಪ್ರಭಾವಿ ನಾಯಕ ಎನಿಸಿಕೊಂಡಿದ್ದ ಲಿಂಬಾವಳಿ ಅವರಿಗೆ ಟಿಕೆಟ್‌ ‘ಕೈ’ತಪ್ಪಿದ್ದಕ್ಕೆ ಕ್ಷೇತ್ರದ ಕಾರ್ಯಕರ್ತರು ತಮ್ಮದೇ ವಿವರಣೆಗಳನ್ನು ಬಿಚ್ಚಿಟ್ಟರು.

ಮೂಲತಃ ಬಾಗಲಕೋಟೆಯ ಲಿಂಬಾವಳಿ ಅವರನ್ನು 2008ರಲ್ಲಿ ಮಹದೇವಪುರ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಮೊದಲ ಪ್ರಯತ್ನದಲ್ಲೇ 13,358 ಮತಗಳ ಅಂತರದಿಂದ ಕಾಂಗ್ರೆಸ್‌ನ ಬಿ.ಶಿವಣ್ಣ ಎದುರು ಗೆಲುವು ಪಡೆದಿದ್ದರು. 2013ರಲ್ಲಿ 10,149 ಮತಗಳ ಅಂತರದಲ್ಲಿ, 2018ರಲ್ಲಿ 17,784 ಮತಗಳ ಅಂತರದಲ್ಲಿ ಕಾಂಗ್ರೆಸ್‌ನ ಎ.ಸಿ.ಶ್ರೀನಿವಾಸ್‌ ಅವರನ್ನು ಮಣಿಸಿದ್ದರು. ಸತತ ಸೋಲು ಕಂಡಿದ್ದ ಕಾಂಗ್ರೆಸ್ ಈ ಬಾರಿ ಶತಾಯಗತಾಯ ಕ್ಷೇತ್ರವನ್ನು ವಶಕ್ಕೆ ಪಡೆಯಲು ಹಲವು ತಂತ್ರಗಳನ್ನು ಎಣೆದಿದೆ. ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯಲ್ಲಿ 12 ಮಂದಿ ಇದ್ದರೂ, 2018ರಲ್ಲಿ ಮುಳಬಾಗಲು ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಗೆದಿದ್ದ ಶಾಸಕ ಎಚ್‌.ನಾಗೇಶ್‌ ಅವರನ್ನು ಮಹದೇವಪುರ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ADVERTISEMENT

ಸತತ ಮೂರು ಬಾರಿ ಆಯ್ಕೆಯಾಗುವ ಮೂಲಕ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಗಿಹಿಡಿತ ಸಾಧಿಸಿದ್ದ ಶಾಸಕ ಅರವಿಂದ ಲಿಂಬಾವಳಿ ಸೋಲಿಸಲು ಕಾಂಗ್ರೆಸ್‌ ನಾಗೇಶ್‌ ಅವರನ್ನು ಕಣಕ್ಕೆ ಇಳಿಸುತ್ತಿದ್ದಂತೆ ತನ್ನ ತಂತ್ರಗಾರಿಕೆ ಬದಲಿಸಿರುವ ಬಿಜೆಪಿ ಲಿಂಗಾವಳಿ ಬದಲಿಗೆ ಸ್ಥಳೀಯ ನಾಯಕರಿಗೆ ಟಿಕೆಟ್‌ ನೀಡಲು ಚಿಂತನೆ ನಡೆಸಿದೆ. ಬೋವಿ ಸಮಾಜದ ಲಿಂಬಾವಳಿಗೆ ಮೂರು ಬಾರಿ ಅವಕಾಶ ನೀಡಿರುವ ಕಾರಣ ಈ ಬಾರಿ ದಲಿತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ. ಈ ಕುರಿತು ಬುಧವಾರ ಸಚಿವ ಗೋವಿಂದ ಕಾರಜೋಳ ನಿವಾಸದಲ್ಲಿ ಮಹದೇವಪುರ ದಲಿತ ಮುಖಂಡರ ಸಭೆ ನಡೆಸಿ, ‘ದಲಿತ ಸಮುದಾಯದವರೇ ಅಭ್ಯರ್ಥಿಯಾಗಲಿದ್ದಾರೆ’ ಎಂದು ಸುಳಿವು ನೀಡಿದ್ದಾರೆ.

‘ಲಿಂಬಾವಳಿ ಅವರು ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದರು. ಮೂರು ಬಾರಿ ಅವರ ಗೆಲುವಿಗೆ ಶ್ರಮಿಸಿದ್ದೆವು. ಈ ಬಾರಿ ದಲಿತ ಸಮುದಾಯದವರಿಗೆ ಟಿಕೆಟ್‌ ನೀಡುವುದಾಗಿ ಪಕ್ಷದ ವರಿಷ್ಠರು ಮಾಹಿತಿ ನೀಡಿದ್ದಾರೆ. ಯಾರಿಗೆ ಟಿಕೆಟ್‌ ನೀಡಿದರೂ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತವೆ’ ಎಂದು ಬೆಂಗಳೂರು ಕೇಂದ್ರ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಎಚ್‌.ವಿ.ಮಂಜುನಾಥ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮಹದೇವಪುರ ವಿಧಾನಸಭಾ ಕ್ಷೇತ್ರ ಯಲಹಂಕಕ್ಕೆ ಹೊಂದಿಕೊಂಡ ಪ್ರದೇಶದಿಂದ ಆರಂಭವಾಗಿ ಸರ್ಜಾಪುರ ರಸ್ತೆ ತನಕ ವಿಸ್ತರಿಸಿಕೊಂಡಿದೆ. ಗರುಡಾಚಾರ್ ಪಾಳ್ಯ, ಹೂಡಿ, ಕಾಡಗೋಡಿ, ವೈಟ್‌ಫೀಲ್ಡ್‌, ಹಗದೂರು, ದೊಡ್ಡನೆಕ್ಕುಂದಿ, ಮಾರತಹಳ್ಳಿ, ವರ್ತೂರು, ದೊಡ್ಡಕನ್ನಲಿ, ಬೆಳ್ಳಂದೂರು ಸುತ್ತಮುತ್ತಲ ಪ್ರದೇಶವನ್ನು ಒಳಗೊಂಡಿದೆ. ನಗರದ ಹೊರವಲಯದ 11 ಗ್ರಾಮ ಪಂಚಾಯಿತಿಗಳೂ ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಎರಡನೇ ಕ್ಷೇತ್ರ ಇದಾಗಿದ್ದು, 5.72 ಲಕ್ಷ ಮತದಾರರಿದ್ದಾರೆ. ಇದುವರೆಗೂ ಕಾಂಗ್ರೆಸ್‌ ಮಾತ್ರ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ಜೆಡಿಎಸ್‌ ಸಹ ಅಭ್ಯರ್ಥಿಯ ಆಯ್ಕೆ ಅಂತಿಮಗೊಳಿಸಿಲ್ಲ.

*

ಕ್ಷೇತ್ರದಲ್ಲಿ ಪಕ್ಷ ಮೂರು ಬಾರಿ ಸತತ ಗೆಲುವು ಪಡೆದಿದೆ. ಈ ಬಾರಿ ದಲಿತ ಸಮುದಾಯದವರಿಗೆ ಟಿಕೆಟ್‌ ನೀಡುವುದಾಗಿ ವರಿಷ್ಠರು ಹೇಳಿದ್ದಾರೆ.
–ಎಚ್.ವಿ.ಮಂಜುನಾಥ್, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ, ಬೆಂಗಳೂರು ಕೇಂದ್ರ ಜಿಲ್ಲೆ

*

ಒಳಮೀಸಲಾತಿ ಜಾರಿಗೆ ತರುವ ದಿಟ್ಟ ನಿರ್ಧಾರ ತೆಗೆದುಕೊಂಡ ಬಿಜೆಪಿ, ಈ ಬಾರಿ ಕ್ಷೇತ್ರದಲ್ಲಿ ದಲಿತರಿಗೆ ಅವಕಾಶ ನೀಡುವ ನಿರೀಕ್ಷೆ ಇದೆ.
–ಹನುಮಂತು, ಉಪಾಧ್ಯಕ್ಷ, ಮಾದಿಗ ಮಹಾಸಭಾ

*

ಮುಳಬಾಗಿಲು ಶಾಸಕರಾಗಿ ನಾಗೇಶ್‌ ಮಾಡಿರುವ ಕೆಲಸಗಳ ಬಗ್ಗೆ ಕ್ಷೇತ್ರ ಜನರಿಗೆ ಅರಿವಿದೆ. ಸ್ಥಳೀಯರಾಗಿರುವ ಅವರಿಗೆ ಜನರಿಗೆ ಸ್ಪಂದಿಸಲಿದ್ದಾರೆ.
–ಬೆಳತೂರು ರಮೇಶ್, ಕಾಂಗ್ರೆಸ್ ಮುಖಂಡ, ಮಹದೇವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.