ADVERTISEMENT

Interview| ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

ಪ್ರಜಾವಾಣಿ ವಿಶೇಷ
Published 30 ಏಪ್ರಿಲ್ 2023, 20:18 IST
Last Updated 30 ಏಪ್ರಿಲ್ 2023, 20:18 IST
   

ವಿ.ಎಸ್‌ ಸುಬ್ರಹ್ಮಣ್ಯ

ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ಸ್ಪರ್ಧಿಗಳ ನಡುವೆ ಆರೋಪ–ಪ್ರತ್ಯಾರೋಪ ಬಿರುಸಾಗಿದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಆದ್ಯತೆ ಕುರಿತಂತೆ ಅಭ್ಯರ್ಥಿಗಳ ಜೊತೆ ವಿ.ಎಸ್‌. ಸುಬ್ರಹ್ಮಣ್ಯ ಅವರು ನಡೆಸಿದ ಕಿರು ಸಂದರ್ಶನ ಇಲ್ಲಿದೆ.

ನನಗೆ ಎದುರಾಳಿಗಳೇ ಇಲ್ಲ: ಕೆ. ಗೋಪಾಲಯ್ಯ– ಬಿಜೆಪಿ ಅಭ್ಯರ್ಥಿ

ನೀವು ಏನು ಕೆಲಸ ಮಾಡುತ್ತೀರಿ ಎಂಬ ಕಾರಣಕ್ಕೆ ಜನರು ನಿಮಗೆ ಮತ ನೀಡಬೇಕು?

2008ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದೆ. ಆದರೆ, ಜನರಿಂದ ದೂರ ಸರಿಯಲಿಲ್ಲ. 2013ರಿಂದ ಒಂದು ಉಪ ಚುನಾವಣೆಯೂ ಸೇರಿ ಮೂರು ಬಾರಿ ಗೆದ್ದಿದ್ದೇನೆ. ಮಹಾಲಕ್ಷ್ಮಿ ಬಡಾವಣೆಯ ಕ್ಷೇತ್ರದ ಶಾಲೆಗಳು, ಸರ್ಕಾರಿ ಆಸ್ಪತ್ರೆಗಳು, ಉದ್ಯಾನಗಳು ಸಂಪೂರ್ಣ ಬದಲಾಗಿವೆ. ಬಡವರ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ಸೃಜಿಸಿದ್ದೇನೆ. ಕೋವಿಡ್‌ನ ಅವಧಿಯಲ್ಲಿ ನೆರವು ಕೇಳಿಬಂದ ಒಬ್ಬರನ್ನೂ ಬರಿಗೈಲಿ ಕಳುಹಿಸಿಲ್ಲ. ಯಾವ ಸಮಸ್ಯೆ ಇದ್ದರೂ ಪರಿಹರಿಸುತ್ತೇನೆ ಎಂಬುದಕ್ಕಾಗಿಯೇ ಜನರು ನನಗೆ ಮತ ನೀಡಬೇಕು.

ADVERTISEMENT

ಕ್ಷೇತ್ರದಲ್ಲಿ ಗೆಲುವಿನ ವಿಶ್ವಾಸ ಮೂಡಿಸುವ ಜನಬೆಂಬಲ ನಿಮಗೆ ಇದೆಯೆ?

270 ಮತಗಟ್ಟೆಗಳಲ್ಲೂ ನನಗೆ ಜನಬೆಂಬಲ ಇದೆ. ಕ್ಷೇತ್ರಕ್ಕೆ ಹಿಂದೆಂದೂ ಸಿಗದಷ್ಟು ಅನುದಾನ ತಂದಿದ್ದೇನೆ. ಕೆಲಸ ಮಾಡುವಾಗ ಪಕ್ಷ ನೋಡಿಲ್ಲ. ಹಿರಿಯರು, ಕಿರಿಯರು ಎಲ್ಲರೂ ನನ್ನ ಬೆಂಬಲಕ್ಕೆ ಇದ್ದಾರೆ. ನೀನು ಪ್ರಚಾರಕ್ಕೆ ಬರುವುದು ಬೇಡ, ನಾವೇ ಮತ ಹಾಕುತ್ತೇವೆ. ಬಯಸುವವರೆಗೂ ಈ ಕ್ಷೇತ್ರದ ಶಾಸಕನಾಗಿರು ಎಂದು ಜನರು ಹೇಳುತ್ತಿದ್ದಾರೆ. ಗೆಲ್ಲುತ್ತೇನೆ ಎನ್ನಲು ಇನ್ನೇನು ಬೇಕು?

ನಿಮ್ಮ ನಿಜವಾದ ಎದುರಾಳಿ ಯಾರು?

ವಾಸ್ತವಿಕವಾಗಿ ನನಗೆ ಕ್ಷೇತ್ರದಲ್ಲಿ ಎದುರಾಳಿಗಳೇ ಇಲ್ಲ. ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪಕ್ಷಾಂತರ ಮಾಡಿದ್ದು ಅಡ್ಡಿಯಾಗುವುದಿಲ್ಲವೆ?

ನಾನು ಪಕ್ಷಾಂತರ ಮಾಡಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಳಿಕ ಬಿಜೆಪಿ ಸೇರಿದೆ. ಗೆದ್ದು ಸಚಿವನಾಗಿ ಜನರ ಕೆಲಸ ಮಾಡಿದೆ. ಅದನ್ನು ಜನರು ಆಗಲೇ ಬೆಂಬಲಿಸಿದ್ದಾರೆ.

ದಬ್ಬಾಳಿಕೆ ತಡೆಗೆ ಬೆಂಬಲಿಸುತ್ತಾರೆ: ಕೇಶವಮೂರ್ತಿ ಎಸ್‌. (ಕಾಂಗ್ರೆಸ್‌)

ಕೇಶವಮೂರ್ತಿ ಎಸ್‌.

ನೀವು ಏನು ಮಾಡುತ್ತೀರಿ ಎಂದು ಜನರು ನಿಮಗೆ ಮತ ಹಾಕಬೇಕು?

ನಾನು ಎರಡು ಬಾರಿ ಮಹಾನಗರ ಪಾಲಿಕೆ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಜನರ ನಡುವೆ ಇರುವ ವ್ಯಕ್ತಿ. ನನ್ನ ಕಾರ್ಯವೈಖರಿಯನ್ನು ಜನರು ನೋಡಿದ್ದಾರೆ. ಈಗಿರುವ ಶಾಸಕರು ಜನರ ಬಳಿ ಬರುವುದಿಲ್ಲ. ಜನರೇ ಅವರ ಮನೆ ಬಾಗಿಲಿಗೆ ಹೋಗಬೇಕು. ಕ್ಷೇತ್ರದಲ್ಲಿ ಜನರ ತೆರಿಗೆ ಹಣದ ಲೂಟಿ ನಡೆಯುತ್ತಿದೆ. ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಕೆಲವು ಅಧಿಕಾರಿಗಳು ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಕೆಲವರ ಜೇಬು ತುಂಬಿಸಲು ಯೋಜನೆಗಳಾಗುತ್ತಿವೆ. ಅದೆಲ್ಲವನ್ನೂ ತಡೆಯಲು ಜನರು ನನಗೆ ಮತ ಹಾಕಬೇಕು.

ಚುನಾವಣೆಯಲ್ಲಿ ಗೆಲುವು ಸಾಧಿಸುವಷ್ಟು ಜನ ಬೆಂಬಲ ನಿಮಗಿರುವುದಕ್ಕೆ ಏನು ಆಧಾರ?

ಆರಂಭದಲ್ಲಿ ನಾನು ಕೂಡ ಜನರ ಬೆಂಬಲ ನಿರೀಕ್ಷಿಸಿರಲಿಲ್ಲ. ಆದರೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದ ನಂತರವೇ ಜನರು ಕ್ಷೇತ್ರದಲ್ಲಿ ಬದಲಾವಣೆ ಬಯಸುತ್ತಿರುವುದು ತಿಳಿಯಿತು. ಹಾಲಿ ಶಾಸಕರು ಆರ್ಥಿಕವಾಗಿ ಬಲಿಷ್ಠವಾಗಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷದ ‘ಗ್ಯಾರಂಟಿ’ಗಳ ಮೇಲೆ ಜನರು ವಿಶ್ವಾಸ ಇರಿಸಿದ್ದಾರೆ. ಪಕ್ಷದ ಪರ ಪ್ರಚಾರಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದೇ ನನಗಿರುವ ಜನ ಬೆಂಬಲಕ್ಕೆ ಸಾಕ್ಷಿ. ಅಹಂ ಇಲ್ಲದೆ ಜನರ ನಡುವೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವೇ ನನ್ನ ಶಕ್ತಿ.

ನಿಮ್ಮ ನಿಜವಾದ ಎದುರಾಳಿ ಯಾರು?

ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ ಕೆ. ಗೋಪಾಲಯ್ಯ ಅವರೇ ನನ್ನ ನೇರ ಎದುರಾಳಿ. 

ಆಕಾಶ ಕೆಳಗಿಳಿಸುವ ಭರವಸೆ ನೀಡಲಾರೆ -ಕೆ.ಸಿ. ರಾಜಣ್ಣ (ಜೆಡಿಎಸ್‌)

ಕೆ.ಸಿ. ರಾಜಣ್ಣ

ನೀವು ಏನು ಮಾಡುತ್ತೀರಿ ಎಂಬುದಕ್ಕಾಗಿ ಜನರು ನಿಮಗೆ ಮತ ನೀಡಬೇಕು?

ನಾನು ಈ ಕ್ಷೇತ್ರದ ಸ್ಥಳೀಯ ವ್ಯಕ್ತಿ. 1982ರಿಂದಲೂ ಸಾರ್ವಜನಿಕ ಜೀವನದಲ್ಲಿ ಇದ್ದೇನೆ. ಜನರ ನಡುವಿನಲ್ಲೇ ಇರುವವನು. ಅವರ ನಡುವೆಯೇ ಇದ್ದು ಕೆಲಸ ಮಾಡುತ್ತೇನೆ. ಗೆದ್ದರೆ ಆಕಾಶ ಕೆಳಕ್ಕೆ ಇಳಿಸುತ್ತೇನೆ ಎಂಬಂತಹ ಭರವಸೆಗಳನ್ನು ನೀಡಲಾರೆ.

ಈ ಚುನಾವಣೆಯಲ್ಲಿ ನೀವು ಗೆಲ್ಲುತ್ತೀರಿ ಎಂಬ ವಿಶ್ವಾಸ ಮೂಡಿಸುವಷ್ಟು ಜನ ಬೆಂಬಲ ಇರುವುದಕ್ಕೆ ಸಾಕ್ಷ್ಯವೇನು?

ನಾನು ರಾಜ್ಯದ ಖಜಾನೆ ಲೂಟಿ ಮಾಡಿದ ಪಕ್ಷದ ಅಭ್ಯರ್ಥಿ ಅಲ್ಲ. ವೈಯಕ್ತಿಕವಾಗಿಯೂ ಆ ಕೆಲಸ ಮಾಡಿಲ್ಲ. ಜೆಡಿಎಸ್‌ನ ಪರಮೋಚ್ಛ ನಾಯಕರಾದ ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರ ಬೆಂಬಲ ನನಗಿದೆ. ನಾನು ಗೆಲ್ಲುತ್ತೇನೆ ಎಂದು ಭಾವಿಸಲು ಅದೇ ಸಾಕು. ಇನ್ನೂ ಜನರನ್ನು ಸಂಪೂರ್ಣವಾಗಿ ತಲುಪಿಲ್ಲ. ಆದರೂ ಜನರೇ ಬದಲಾವಣೆಯ ನಿರ್ಧಾರ ಮಾಡಿರುವುದು ಗಮನಕ್ಕೆ ಬರುತ್ತಿದೆ.

ನಿಮ್ಮ ನಿಜವಾದ ಎದುರಾಳಿ ಯಾರು?

ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ ಕೆ. ಗೋಪಾಲಯ್ಯ ನನ್ನ ನೇರ ಎದುರಾಳಿ. ಆತ ನನ್ನ ಸಹೋದರ ಸಂಬಂಧಿ. ವಯಸ್ಸಿನಲ್ಲಿ ನಾನು ಅಣ್ಣ ಗೋಪಾಲಯ್ಯ ತಮ್ಮ. ಅಣ್ಣ– ತಮ್ಮನ ಮಧ್ಯದಲ್ಲೇ ಈ ಚುನಾವಣೆಯ ಸ್ಪರ್ಧೆ ಇದೆ.

ಜನರು ಆಪ್‌ ಮಾದರಿ ಬಯಸಿದ್ದಾರೆ– ಶಾಂತಲಾ ದಾಮ್ಲೆ (ಆಮ್‌ ಆದ್ಮಿ ಪಕ್ಷ)

ಶಾಂತಲಾ ದಾಮ್ಲೆ

ನೀವು ಯಾವ ಕೆಲಸಗಳನ್ನು ಮಾಡುತ್ತೀರಿ ಎಂಬುದಕ್ಕೆ ಜನರು ಮತ ನೀಡಬೇಕು?

ದೆಹಲಿ ಮತ್ತು ಪಂಜಾಬ್‌ ರಾಜ್ಯಗಳಲ್ಲಿ ಆಮ್‌ ಆದ್ಮಿ ಪಕ್ಷವು ಭ್ರಷ್ಟಾಚಾರರಹಿತ ಆಡಳಿತ ನೀಡುತ್ತಿದೆ. ಅಂತಹ ಆಡಳಿತ ಇಲ್ಲಿಯೂ ಬೇಕಿದೆ. ಐದು ವರ್ಷಗಳ ಅವಧಿಯಲ್ಲಿ ಪ್ರತಿ ಪ್ರಜೆಗೆ ₹ 5 ಲಕ್ಷ ಉಳಿತಾಯ ಮಾಡುವುದು ನಮ್ಮ ಗುರಿ. ಬೆಲೆ ಏರಿಕೆ ಭ್ರಷ್ಟಾಚಾರ ತಡೆಗೆ ನಮ್ಮ ಪಕ್ಷವನ್ನು ಜನರು ಬೆಂಬಲಿಸುತ್ತಾರೆ. ಮಹಿಳೆಯೊಬ್ಬರು ಇಂತಹ ಜನಪರ ಆಡಳಿತದ ಭರವಸೆಯೊಂದಿಗೆ ಬಂದಿದ್ದಾರೆ ಎಂಬುದನ್ನು ಜನರು ಒಪ್ಪುತ್ತಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸುವಷ್ಟು ಬೆಂಬಲ ನಿಮಗಿರುವುದಕ್ಕೆ ಪುರಾವೆಗಳೇನು?

2008ರ ಚುನಾವಣೆಯಲ್ಲಿ ಬಸವನಗುಡಿ ಕ್ಷೇತ್ರದಲ್ಲಿ ಲೋಕಸತ್ತಾ ಪಕ್ಷದಿಂದ ಸ್ಪರ್ಧಿಸಿದ್ದೆ. ಈ ಚುನಾವಣೆಯಲ್ಲಿ ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದಿಂದ ಸ್ಪರ್ಧಿಸಲು ಹಿಂದೆಯೇ ನಿರ್ಧರಿಸಿದ್ದೆ. ಒಂದೂವರೆ ವರ್ಷದಿಂದ ಚುನಾವಣಾ ತಯಾರಿ ನಡೆಸಿದ್ದೆ. ಏಳು ಬಾರಿ ಮತದಾರರನ್ನು ಭೇಟಿಮಾಡಿದ್ದೇವೆ. ವೈಯಕ್ತಿಕವಾಗಿ ಮೂರು ಬಾರಿ ಭೇಟಿ ಮಾಡಿದ್ದೇನೆ. ಪ್ರಚಾರಕ್ಕೆ ಹೋದರೆ ಮಹಿಳೆಯರು ತಾವಾಗಿಯೇ ರಸ್ತೆಗೆ ಬಂದು ಬೆಂಬಲ ನೀಡುತ್ತಿದ್ದಾರೆ.

ಕ್ಷೇತ್ರದಲ್ಲಿ ನಿಮ್ಮ ನಿಜವಾದ ಎದುರಾಳಿ ಯಾರು?

ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ ಅವರೇ ನನ್ನ ನೇರ ಎದುರಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.