ADVERTISEMENT

ಮಂಡ್ಯ ಲೋಕಸಭೆ: ಎಚ್‌ಡಿಕೆ ಸುತ್ತ ‘ಏಳು ಸುತ್ತಿನ ಕೋಟೆ’

ಪ್ರತಿಷ್ಠೆಯನ್ನು ಪಣಕ್ಕಿಟ್ಟ ಎಚ್‌ಡಿಕೆ, ಮಿಂಚಿನ ಸಂಚಾರ ಮಾಡುತ್ತಿರುವ ಸ್ಟಾರ್‌ ಚಂದ್ರು

ಎಂ.ಎನ್.ಯೋಗೇಶ್‌
Published 17 ಏಪ್ರಿಲ್ 2024, 21:50 IST
Last Updated 17 ಏಪ್ರಿಲ್ 2024, 21:50 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಮಂಡ್ಯ: ‘ಈ ಚುನಾವಣೆ ಸೋತರೆ ಇದ್ದರೂ ಸತ್ತಂತೆ’ ಎಂದು ಘೋಷಿಸಿರುವ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಳ್ಳಿಗಳನ್ನು ಸುತ್ತುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ತಮ್ಮ ಸುತ್ತ ಪಕ್ಷದ 7 ಶಾಸಕರ ಏಳು ಸುತ್ತಿನ ಕೋಟೆ ಕಟ್ಟಿಕೊಂಡು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

ಎಚ್‌ಡಿಕೆ ಪ್ರಚಾರ ತಾಲ್ಲೂಕು ಕೇಂದ್ರಗಳಿಗಷ್ಟೇ ಸೀಮಿತವಾಗಿದ್ದರೂ ಮಗ ನಿಖಿಲ್‌ ತಂದೆಯ ಪರವಾಗಿ ಎಲ್ಲೆಡೆ ಸಂಚರಿಸುತ್ತಿದ್ದಾರೆ. ಜೆಡಿಎಸ್ ವರಿಷ್ಠ ‌ಎಚ್‌.ಡಿ.ದೇವೇಗೌಡರೂ ಪುತ್ರನ ಪರವಾಗಿ ಪ್ರಚಾರ ಸಭೆ ನಡೆಸುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಪಕ್ಷದ ನಾಯಕರು, ಕುಮಾರಸ್ವಾಮಿ ಮೂಲಕ ಗೆಲುವಿಗಾಗಿ ಹಂಬಲಿಸುತ್ತಿದ್ದಾರೆ.

‘ಹಾಸನ ಜನ್ಮಭೂಮಿ, ರಾಮನಗರ ಕರ್ಮಭೂಮಿ, ಮಂಡ್ಯ ಹೃದಯಲ್ಲಿರುವ ನೆಲ’ ಎಂದು, ಭಾವನಾತ್ಮಕ ವಿಚಾರಗಳಿಗೆ ಒತ್ತು ನೀಡುತ್ತಾ, ಅನಾರೋಗ್ಯ, ಪುತ್ರನ ಸರಣಿ ಸೋಲುಗಳನ್ನು ಮುಂದಿಡುತ್ತಿರುವ ಕುಮಾರಸ್ವಾಮಿ, ಅನುಕಂಪ ಪಡೆಯಲೆತ್ನಿಸುತ್ತಿದ್ದಾರೆ. ಹಳೆಯ ಕೋಪತಾಪಗಳನ್ನು ಬಿಟ್ಟಿರುವ ಬಿಜೆಪಿ ಮುಖಂಡ ಕೆ.ಸಿ.ನಾರಾಯಣಗೌಡ ಸೇರಿ ಸಣ್ಣಪುಟ್ಟ ಕಾರ್ಯಕರ್ತರ ಮನೆಗಳಿಗೂ ಹೋಗಿಬರುತ್ತಿದ್ದಾರೆ.

ADVERTISEMENT

‘ಕುಮಾರಸ್ವಾಮಿ ಗೆದ್ದರೆ ಕೇಂದ್ರದಲ್ಲಿ ಕೃಷಿ ಸಚಿವರಾಗುತ್ತಾರೆ, ಪ್ರಧಾನಿ ಮೋದಿ ಮೂಲಕ ಕಾವೇರಿ ಸಮಸ್ಯೆಗೆ ಪರಿಹಾರ ಕೊಡಿಸುತ್ತಾರೆ, ಮೇಕೆದಾಟು ಯೋಜನೆಗೆ ಅನುಮತಿ ತರುತ್ತಾರೆ’ ಎಂಬ ಭರವಸೆಗಳು ಅಬ್ಬರಿಸುತ್ತಿವೆ.

ಈ ಚುನಾವಣೆಯನ್ನು ‘ಕುಮಾರಸ್ವಾಮಿ ಮತ್ತು ಸಚಿವ ಚಲುವರಾಯಸ್ವಾಮಿ ನಡುವಣ ಹಣಾಹಣಿ’ ಎಂದೇ ಬಣ್ಣಿಸಲಾಗುತ್ತಿದ್ದು, ಸ್ಟಾರ್‌ ಚಂದ್ರು ಗೆಲ್ಲಿಸಿಕೊಳ್ಳಲು ಅವರು ಬೀದಿಗಿಳಿದು ಮತಯಾಚಿಸುತ್ತಿದ್ದಾರೆ. ಕೆ.ಆರ್‌.ಪೇಟೆ ಹೊರತುಪಡಿಸಿ ಮೈಸೂರು ಜಿಲ್ಲೆಯ ಕೆ.ಆರ್‌.ನಗರ ಸೇರಿದಂತೆ 7 ತಾಲ್ಲೂಕುಗಳ ಶಾಸಕರು ಪ್ರತಿ ಪಂಚಾಯ್ತಿಗಳಲ್ಲೂ ಅಭ್ಯರ್ಥಿಯೊಂದಿಗೆ ಸುತ್ತುತ್ತಿದ್ದಾರೆ.

‘ಕುಮಾರಸ್ವಾಮಿ ಹೊರಗಿನವರು’ ಎನ್ನುತ್ತಿರುವ ಕಾಂಗ್ರೆಸ್, ತಮ್ಮ ಅಭ್ಯರ್ಥಿ ಸ್ಥಳೀಯರೆಂದು ಪ್ರತಿಪಾದಿಸಿದೆ. ಸ್ಟಾರ್‌ ಚಂದ್ರು ಮಂಡ್ಯದಲ್ಲಿ ಮನೆಯನ್ನೂ ಖರೀದಿಸಿದ್ದಾರೆ. 3 ತಿಂಗಳ ಮೊದಲೇ ಸ್ಪರ್ಧೆ ಖಾತ್ರಿಯಾಗಿದ್ದರಿಂದ ನಾಲ್ಕೈದು ಸುತ್ತಿನ ಪ್ರಚಾರ ಪೂರ್ಣಗೊಳಿಸಿದ್ದಾರೆ.

ಕ್ಷೇತ್ರದಲ್ಲಿ ಬಹುಸಂಖ್ಯಾತ ಒಕ್ಕಲಿಗ ಸಮುದಾಯದ ಬೆಂಬಲ ಪಡೆಯಲು ಅಭ್ಯರ್ಥಿಗಳಿಬ್ಬರೂ ಪೈಪೋಟಿಯಲ್ಲಿದ್ದಾರೆ. ‘ಎಚ್‌ಡಿಡಿ, ಎಚ್‌ಡಿಕೆ ಒಕ್ಕಲಿಗರ ಪರಮೋಚ್ಛ ನಾಯಕ’ ಎಂದು ಮೈತ್ರಿ ಮುಖಂಡರು ಅಸ್ತ್ರ ಹೂಡಿದ್ದಾರೆ. ‌‘ಎಚ್‌ಡಿಕೆ ಸರ್ಕಾರದಲ್ಲಿ ಚುಂಚಶ್ರೀ ಫೋನ್‌ ಕದ್ದಾಲಿಸಲಾಗಿತ್ತು’ ಎಂದು ಕಾಂಗ್ರೆಸ್‌ನವರು ಪ್ರತ್ಯಸ್ತ್ರ ಪ್ರಯೋಗಿಸಿದ್ದಾರೆ. 

ಕುಮಾರಸ್ವಾಮಿ ಅವರ ಮೇಲೆ ಜನರಿಗಿರುವ ‘ತೀವ್ರ ಅಭಿಮಾನ’ ಮತವಾಗಿ ಬದಲಾಗಲಿದೆ ಎಂಬುದು ಜೆಡಿಎಸ್‌– ಬಿಜೆಪಿ ನಂಬಿಕೆ. ಕಾಂಗ್ರೆಸ್ಸಿಗರು  ಸ್ವಾಭಿಮಾನದ ಸೊಲ್ಲೆತ್ತಿದ್ದು ‘ಹೊರಗಿನವರು ಇಲ್ಲೇಕೆ ಬರಬೇಕು’ ಎಂದು ಪ್ರಶ್ನಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ದುರ್ಬಲವಾಗಿದ್ದು, ಅಲ್ಲಿನ ಮತಗಳು ನಿರ್ಣಾಯಕವಾಗಲಾರವು ಎಂಬ ವಿಶ್ಲೇಷಣೆಯೂ ನಡೆದಿದೆ.

ಒಕ್ಕಲಿಗೇತರ ಮತಗಳ ಕ್ರೋಡೀಕರಣಕ್ಕೆ ಮುಂದಾಗಿರುವ ಕಾಂಗ್ರೆಸ್‌, ದಲಿತರು, ಶೋಷಿತರು, ಹಿಂದುಳಿದ, ಅಲ್ಪ ಸಂಖ್ಯಾತರ ಸಮಾವೇಶಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ. ಸಂಸದೆ ಸುಮಲತಾ ಬಿಜೆಪಿ ಸೇರಿದ್ದರೂ ಎಚ್‌ಡಿಕೆ ಪರ ಪ್ರಚಾರ ನಡೆಸಲು ಹಿಂದೇಟು ಹಾಕುತ್ತಿರುವುದು ಕುತೂಹಲ ಮೂಡಿಸಿದೆ.

ಸ್ಟಾರ್‌ ಚಂದ್ರು
ಪುನಶ್ಚೇತನ ಕಾಣದ ಮೈಷುಗರ್‌ ಕಾರ್ಖಾನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.