ADVERTISEMENT

ಲೋಕಸಭೆ: ಅಧಿಕೃತ ‌ಘೋಷಣೆಗೂ ಮುನ್ನ ಸುನೀಲ್ ಭೋಸ್ ನಾಮಪತ್ರ ಸಲ್ಲಿಕೆ ದಿನಾಂಕ ಪ್ರಕಟ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 5:18 IST
Last Updated 27 ಮಾರ್ಚ್ 2024, 5:18 IST
ಸುನೀಲ್ ಬೋಸ್
ಸುನೀಲ್ ಬೋಸ್   

ಮೈಸೂರು: ಸಮಾಜಕಲ್ಯಾಣ ‌ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನೀಲ್ ಭೋಸ್ ಅವರಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಧಿಕೃತವಾಗಿ ಘೋಷಣೆ ಆಗಿಲ್ಲ. ಆದರೆ, ಅವರು ನಾಮಪತ್ರ ಸಲ್ಲಿಕೆ ಹಾಗೂ ಪ್ರಚಾರ ಕಾರ್ಯದ ವೇಳಾಪಟ್ಟಿಯನ್ನು ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದಿಂದ‌ ಬಿಡುಗಡೆ ಮಾಡಲಾಗಿದೆ.

ಸುನೀಲ್ ಭೋಸ್ ಚಾಮರಾಜನಗರದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಅವರು ಏ.3ರಂದು ಚಾಮರಾಜನಗರದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪೂರ್ವಾನುಮತಿ ಪಡೆದು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಕಟಣೆ ಪ್ರಕಾರ, ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ ಕೂಡ ಏ.3ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ಚಾಮರಾಜನಗರ ಕ್ಷೇತ್ರದಿಂದ ಮಹದೇವಪ್ಪ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ಸೂಚಿಸಿತ್ತು. ಅವರು, ನಾನಂತೂ ಸ್ಪರ್ಧಿಸುವುದಿಲ್ಲ. ಕೊಟ್ಟರೆ ಮಗನಿಗೆ ಟಿಕೆಟ್ ಕೊಡಿ ಎಂದು ಪಟ್ಟು ಹಿಡಿದಿದ್ದರು. ಇದಕ್ಕೆ ಹೈಕಮಾಂಡ್ ಮಣಿದಿದೆ ಎನ್ನಲಾಗಿದೆ. ಭೋಸ್‌ಗೆ ಟಿಕೆಟ್ ದೊರೆತಿರುವುದು ಹೈಕಮಾಂಡ್‌ನಿಂದ ಅಧಿಕೃತವಾಗಿ ಪ್ರಕಟವಾಗಬೇಕಾಗಿದೆ. ಅದಕ್ಕೂ ಮುನ್ನವೇ ಪ್ರಚಾರ ಹಾಗೂ ನಾಮಪತ್ರದ ವೇಳಾಪಟ್ಟಿ ಪ್ರಕಟ ಆಗಿರುವುದು ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.