ಬೀದರ್: ‘ಪ್ರಧಾನಿ ನರೇಂದ್ರ ಮೋದಿಯವರ ವಿಲಾಸಿ ಜೀವನ, ದುಂದುವೆಚ್ಚದಿಂದ ದೇಶ ದಿವಾಳಿಯಾಗಿದೆ’ ಎಂದು ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ ಆರೋಪಿಸಿದರು.
ನಗರದ ಗಣೇಶ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಪರ ಏರ್ಪಡಿಸಿದ್ದ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, 'ಮೋದಿಯವರಿಗೆ ಕುಟುಂಬ, ಸಂಸಾರವಿಲ್ಲ. ಆದರೆ, ಅವರ ಜೀವನಶೈಲಿ ವಿಲಾಸಿಯಾಗಿದೆ. ಬಡ ದೇಶಕ್ಕೆ ದುಬಾರಿ ಪ್ರಧಾನಿ ಬೇಕಿತ್ತಾ? ಅವರು ಯಾರ ದುಡ್ಡು ಖರ್ಚು ಮಾಡುತ್ತಿದ್ದಾರೆ?' ಎಂದು ಪ್ರಶ್ನಿಸಿದರು.
'ಸಂಸತ್ತಿನ ಕಟ್ಟಡ ಇದ್ದರೂ ಹೊಸ ಕಟ್ಟಡ ಕಟ್ಟಿಸಿದರು. ವಿಮಾನದಲ್ಲಿ ಓಡಾಡಲು ಕೋಟ್ಯಂತರ ರೂಪಾಯಿಗೆ ಹೊಸ ವಿಮಾನಗಳನ್ನು ಖರೀದಿಸಿದರು. ₹72 ಕೋಟಿಗೆ ಆರು ಹೊಸ ಕಾರುಗಳನ್ನು ಖರೀದಿಸಿದರು. ಅದರ ಅಗತ್ಯ ಇತ್ತಾ? ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ಚೌಧರಿ ಚರಣ್ ಸಿಂಗ್, ವಿ.ಪಿ.ಸಿಂಗ್, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಅವರು ಸಭ್ಯರಾಗಿ ನಡೆದುಕೊಂಡಿದ್ದರು. ಮೋದಿಯವರ ದುಂದು ವೆಚ್ಚಗಳಿಂದ ದೇಶ ದಿವಾಳಿಯಾಗಿದೆ' ಎಂದರು.
'ಮೋದಿ ಬಡವರಿಗಾಗಿ ಕಣ್ಣೀರು ಸುರಿಸುತ್ತಾರಾ? ಅವರು ಬಡವರು, ಕಾರ್ಮಿಕರು, ಮಹಿಳೆಯರ ವಿರೋಧಿಗಳು. ಈ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಯಬೇಕಾದರೆ ಪುನಃ ಕೇಂದ್ರದಲ್ಲಿ ಕಾಂಗ್ರೆಸ್ ಬರಬೇಕು. ವಿಧಾನಸಭೆ ಚುನಾವಣೆಗೂ ಮುನ್ನ ಕೊಟ್ಟ ಭರವಸೆಯಂತೆ ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದಿದ್ದೇವೆ. ಮತ್ತೆ ಹೊಸ ಭರವಸೆಗಳೊಂದಿಗೆ ‘ಪಂಚ ನ್ಯಾಯ’ ತೆಗೆದುಕೊಂಡು ಬಂದಿದ್ದೇವೆ. ಇದರಲ್ಲಿ ರೈತರ ಸಾಲ ಮನ್ನಾ, ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕೊಡುವುದು, ಮಹಿಳೆಯರಿಗೆ ಪ್ರತಿ ವರ್ಷ ₹1 ಲಕ್ಷ ಆರ್ಥಿಕ ನೆರವು ಸೇರಿದೆ. ನರೇಗಾ ಕೂಲಿ ₹400ಕ್ಕೆ ಹೆಚ್ಚಿಸಲಾಗುವುದು. 40 ಲಕ್ಷ ಜನರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಜಾತಿ ಗಣತಿ ಮಾಡಿಸಲಾಗುವುದು' ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್ ಸಿಂಗ್ ಮಾತನಾಡಿ, 'ಪ್ರತಿಯೊಂದು ಕ್ಷೇತ್ರದಲ್ಲಿ ಬಿಜೆಪಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚುನಾವಣೆ ಗೆಲ್ಲಲು ಹೊರಟಿದೆ. ಇದು ಬಿಜೆಪಿಯ ಭ್ರಮೆ. ಇಡೀ ದೇಶದಲ್ಲಿ ಬದಲಾವಣೆ ಆಗಲಿದೆ. ಈ ಚುನಾವಣೆ ಧರ್ಮ–ಅಧರ್ಮ, ನ್ಯಾಯ–ಅನ್ಯಾಯ, ಸತ್ಯ–ಅಸತ್ಯದ ನಡುವೆ ನಡೆಯಲಿರುವ ಚುನಾವಣೆಯಾಗಿದೆ' ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯದರ್ಶಿ ವಸಂತಕುಮಾರ ಮಾತನಾಡಿ, 'ಬಣ್ಣದ ಮಾತು, ಸುಳ್ಳು ಭರವಸೆಗಳಿಂದ ಬಿಜೆಪಿಯವರು ದೇಶದ ಜನರಿಗೆ ಮೋಸ ಮಾಡಿದ್ದಾರೆ. ಇದರಿಂದ ದೇಶದ ಪರಿಸ್ಥಿತಿ ಹದಗೆಟ್ಟಿದೆ. ಪ್ರಧಾನಿ ಮೋದಿಯವರು ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ನಿರುದ್ಯೋಗ, ಬಡತನ ಹೆಚ್ಚಾಗಿದೆ. ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲ' ಎಂದು ಆರೋಪಿಸಿದರು.
ಮುಖಂಡ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, 'ಈ ಭಾಗದ ಪ್ರಗತಿಗೆ ಭೀಮಣ್ಣ ಖಂಡ್ರೆ, ಈಶ್ವರ ಈಶ್ವರ ಖಂಡ್ರೆಯವರು ಶ್ರಮಿಸಿದ್ದಾರೆ. ಐದು ದಶಕಗಳಿಂದ ಜನರ ಸೇವೆ ಮಾಡುತ್ತಿದ್ದಾರೆ. ಸಾಗರ್ ಖಂಡ್ರೆಯವರಿಗೂ ದೊಡ್ಡ ಭವಿಷ್ಯವಿದೆ' ಎಂದು ಹೇಳಿದರು.
ಮುಖಂಡ ಸುಭಾಷ ರಾಠೋಡ್ ಮಾತನಾಡಿ, 'ಚಿಂಚೋಳಿಯಲ್ಲಿ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಭಗವಂತ ಖೂಬಾ ಅವರು ಹತ್ತು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಸಲ ಭೇಟಿ ಕೊಟ್ಟು ರೈತರ ಕಷ್ಟ ಆಲಿಸಿಲ್ಲ' ಎಂದು ಆರೋಪಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಭೀಮರಾವ ಪಾಟೀಲ, ಡಾ. ಚಂದ್ರಶೇಖರ ಪಾಟೀಲ, ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ನಸೀಮ್ ಪಟೇಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ, ಮುಖಂಡರಾದ ರೇವು ನಾಯಕ ಬೆಳಮಗಿ, ಅಶೋಕ ಖೇಣಿ, ವಿಜಯ್ ಸಿಂಗ್, ಧನರಾಜ ತಾಳಂಪಳ್ಳಿ, ಭೀಮಸೇನರಾವ್ ಶಿಂಧೆ, ಮೀನಾಕ್ಷಿ ಸಂಗ್ರಾಮ, ರಾಜಶ್ರೀ ಶ್ರೀಕಾಂತ ಸ್ವಾಮಿ, ಪುಂಡಲೀಕರಾವ್, ನಗರಸಭೆ ಅಧ್ಯಕ್ಷ ಮೊಹಮ್ಮದ್ ಗೌಸ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.