ADVERTISEMENT

ಸಂಸದ ಬಿ.ವೈ. ರಾಘವೇಂದ್ರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 15:56 IST
Last Updated 16 ಏಪ್ರಿಲ್ 2024, 15:56 IST
ಬಿ.ವೈ. ರಾಘವೇಂದ್ರ
ಬಿ.ವೈ. ರಾಘವೇಂದ್ರ    

ಬೆಂಗಳೂರು: ‘ಮಠದಲ್ಲಿ ರಾಜಕೀಯ ಭಾಷಣ ಮಾಡಿ ಮತದಾರರ ಮೇಲೆ ಪ್ರಭಾವ ಬೀರಿದ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ’ ಎಂಬ ಆರೋಪದಡಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿದೆ.

ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಬಿ.ವೈ.ರಾಘವೇಂದ್ರ ಸಲ್ಲಿಸಿರುವ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣ’ಗಳ ವಿಚಾರಣೆಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಮಂಗಳವಾರ ವಿಚಾರಣೆ ನಡೆಸಿದರು.

ಪ್ರಕರಣದ ಪ್ರತಿವಾದಿಗಳಾದ ಚಿತ್ರದುರ್ಗ ಗ್ರಾಮಾಂತರ ಠಾಣಾ ಪೊಲೀಸರು ಮತ್ತು ದೂರುದಾರ ಪಿ.ಅವಿನಾಶ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಪೀಠ ಆಕ್ಷೇಪಣೆ ಸಲ್ಲಿಸುವಂತ ಸೂಚಿಸಿ ವಿಚಾರಣೆ ಮುಂದೂಡಿದೆ.

ADVERTISEMENT

ಪ್ರಕರಣವೇನು?: ಬಿ.ವೈ.ರಾಘವೇಂದ್ರ ಚಿತ್ರದುರ್ಗದ ಸಿದ್ದೇಶ್ವರ ಭೋವಿ ಸಮಾಜದ ಗುರುಪೀಠದಲ್ಲಿ 2024ರ ಮಾರ್ಚ್ 23ರಂದು ಬೆಳಗ್ಗೆ 11 ಗಂಟೆಯಲ್ಲಿ ಸಭೆ ನಡೆಸಿದ್ದರು. ‘ಈ ಸಭೆಗೆ ಚುನಾವಣಾ ಆಯೋಗದಿಂದ ಪೂರ್ವಾನುಮತಿ ಪಡೆದಿಲ್ಲ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ, ಮತದಾರರ ಮೇಲೆ ಪ್ರಭಾವ ಬೀರಲು ಭಾಷಣ ಮಾಡಿ ಧಾರ್ಮಿಕ ಸ್ಥಳವನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿ ಸಂಚಾರಿ ವಿಚಕ್ಷಣಾ ದಳದ ಅಧಿಕಾರಿ ಪಿ.ಅವಿನಾಶ್‌, ಗ್ರಾಮೀಣ ಠಾಣೆಯ ಪೊಲೀಸರಿಗೆ ಅಂದೇ ದೂರು ನೀಡಿದ್ದರು.

ಇದರನ್ವಯ, ಧಾರ್ಮಿಕ ಸಂಸ್ಥೆಗಳ ದುರ್ಬಳಕೆ ತಡೆ ಕಾಯ್ದೆ-1988, ಜನಪ್ರತಿನಿಧಿಗಳ ಕಾಯ್ದೆ-1951 ಮತ್ತು ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 171 ಎಫ್‌ (ಚುನಾವಣೆಯಲ್ಲಿ ಅನಪೇಕ್ಷಿತ ಪ್ರಭಾವ ಬೀರಿದ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.