ಬೊಮ್ಮನಹಳ್ಳಿ (ಬೆಂಗಳೂರು): ‘ಪ್ರಧಾನಿ ಮೋದಿ ಅವರ ಬಾಯಿಯಿಂದ ಎಂತಹ ಮಾತುಗಳು ಬರುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳ ಸೂತ್ರವೇ ಕಿತ್ತುಕೊಳ್ಳುತ್ತದೆ ಎಂದು ಅವರು ಹೇಳುತ್ತಾರೆ. ನನ್ನ ತಾಯಿಯ ಮಾಂಗಲ್ಯ ದೇಶಕ್ಕಾಗಿ ಬಲಿಯಾಗಿದೆ’ ಎಂದು ಕಾಂಗ್ರೆಸ್‌ನ ‘ತಾರಾ ಪ್ರಚಾರಕಿ’ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಪ್ರಧಾನಿ ಮೋದಿ ಅವರಿಗೆ ಮಾಂಗಲ್ಯದ ಬೆಲೆ ಗೊತ್ತಿಲ್ಲ. ರೈತರು ಸಾಲ ಹೆಚ್ಚಾದಾಗ ಮನೆಯಲ್ಲಿರುವ ಮಹಿಳೆಯ ಮಾಂಗಲ್ಯವನ್ನೇ ಅಡ ಇಡುತ್ತಾರೆ. ಮನೆಯಲ್ಲಿ ಯಾರಿಗಾದರೂ ಕಷ್ಟ ಎದುರಾದರೂ ಮಾಂಗಲ್ಯ ಅಡ ಇಡುತ್ತಾಳೆ. ಬಿಜೆಪಿಗೆ ಹೆಣ್ಣು ಮಕ್ಕಳ ಕಷ್ಟ ಅರ್ಥ ಆಗುವುದಿಲ್ಲ’ ಎಂದರು.
‘ಚುನಾವಣಾ ಪ್ರಚಾರದಲ್ಲಿ ಬಿಜೆಪಿಯ ಯಾರೊಬ್ಬರೂ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಪ್ರಧಾನಿ ಮೋದಿಯವರ ಭಾವಚಿತ್ರ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ’ ಎಂದು ಟೀಕಿಸಿದರು.
‘ನಿರುದ್ಯೋಗ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಪ್ರಧಾನಿ ಮೋದಿಯವರ 10 ವರ್ಷಗಳ ಆಡಳಿತ ನೋಡಿದ್ದೀರಾ? ನಿಮ್ಮ ಜೀವನದಲ್ಲಿ ಬದಲಾವಣೆ ಆಗಿದೆಯಾ ಎಂದು ಪ್ರಶ್ನೆ ಮಾಡಬೇಕಿದೆ. ನಿಮ್ಮೆಲ್ಲರ ಮುಂದೆ ಸೂಪರ್ ಮ್ಯಾನ್ ರೀತಿ ಬಂದು ಅವರು ನಿಂತಿದ್ದರು’ ಎಂದು ವ್ಯಂಗ್ಯವಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಪ್ರಧಾನಿ ಮೋದಿ ಅಲೆ ಎಲ್ಲಿಯೂ ಇಲ್ಲ. ಇರುವುದು ಕಾಂಗ್ರೆಸ್ ಅಲೆ ಮಾತ್ರ. ನಾವು ಕೊಟ್ಟ ಮಾತು ಉಳಿಸಿ ಕೊಂಡಿದ್ದೇವೆ. ಸರ್ಕಾರ ಬಂದ ತಕ್ಷಣ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇವೆ’ ಎಂದರು.
‘ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅಲ್ಲ, ಅಮಾಸೆ ಸೂರ್ಯ. ಈ ಅಮಾಸೆ ಸೂರ್ಯನದ್ದು ಬರೀ ಸ್ಟಂಟ್. ಹೀಗಾಗಿ, ಅವನನ್ನು ಈ ಬಾರಿ ಜನ ಮನೆಗೆ ಕಳುಹಿಸಬೇಕು’ ಎಂದು ಮನವಿ ಮಾಡಿದರು.
‘ಬಿಜೆಪಿಯವರು ದೇವಸ್ಥಾನ, ಧರ್ಮ ಎಂದು ಹೇಳುತ್ತಾರೆ. ಅವರಿಗೆ ಮಾತ್ರ ದೇವರು ಇದ್ದಾನಾ? ನಮಗೆ ದೇವರು ಇಲ್ಲವೇ? ಸಿದ್ದರಾಮಯ್ಯ, ರಾಮ ಲಿಂಗಾರೆಡ್ಡಿ, ನನ್ನ ಹೆಸರಿನಲ್ಲಿ ದೇವರು ಇಲ್ಲವೇ? ದೇವನೊಬ್ಬ ನಾಮ ಹಲವು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.