ಮೈಸೂರು: ಇದೇ 26ರಂದು ನಡೆಯಲಿರುವ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ 18 ಮಂದಿ ಕಣದಲ್ಲಿರುವುದರಿಂದ ಮತಗಟ್ಟೆಗಳಲ್ಲಿ ತಲಾ ಎರಡು ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ಬಳಸಲಾಗುತ್ತದೆ.
‘ಜಿಲ್ಲೆಗೆ ಅವಶ್ಯವಾದಷ್ಟು ಇವಿಎಂಗಳು ಲಭ್ಯ ಇವೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಕ್ಷೇತ್ರದಲ್ಲಿ 2,192 ಹಾಗೂ ಹೆಚ್ಚುವರಿಯಾಗಿ 10 ಒಟ್ಟು 2,202 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 273, ವಿರಾಜಪೇಟೆಯಲ್ಲಿ 273, ಪಿರಿಯಾಪಟ್ಟಣದಲ್ಲಿ 235, ಹುಣಸೂರಿನಲ್ಲಿ 274, ಹುಣಸೂರಿನಲ್ಲಿ 274, ಚಾಮುಂಡೇಶ್ವರಿಯಲ್ಲಿ 341, ಕೃಷ್ಣರಾಜದಲ್ಲಿ 265, ಚಾಮರಾಜದಲ್ಲಿ 248 ಹಾಗೂ ನರಸಿಂಹರಾಜದಲ್ಲಿ 291 ಮತಗಳನ್ನು ಗುರುತಿಸಲಾಗಿದೆ. ಈವರೆಗೆ, 10,17,120 ಪುರುಷರು, 10,55,035 ಮಹಿಳೆಯರು ಹಾಗೂ 182 ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ 20,72,337 ಮತದಾರರಿದ್ದಾರೆ.
2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಅಂದರೆ ತಲಾ 17 ಅಭ್ಯರ್ಥಿಗಳು ಕಣದಲ್ಲಿದ್ದ ಕೃಷ್ಣರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳಲ್ಲಿ ತಲಾ 2 ವಿದ್ಮುನ್ಮಾನ ಮತಯಂತ್ರಗಳನ್ನು ಬಳಸಲಾಗಿತ್ತು. ಕಣದಲ್ಲಿರುವ ಅಭ್ಯರ್ಥಿಗಳು, ಅವರ ಚಿಹ್ನೆಗಳ ಬಗ್ಗೆ ಮಾಹಿತಿಯನ್ನು ಮತಗಟ್ಟೆಗಳಲ್ಲಿನ ಗೋಡೆಗಳಲ್ಲಿ ಅಂಟಿಸಲಾಗಿತ್ತು. ಇದೇ ರೀತಿಯ ಪ್ರಕ್ರಿಯೆಯನ್ನು ಲೋಕಸಭಾ ಚುನಾವಣೆಯಲ್ಲೂ ಅನುಸರಿಸಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.